ADVERTISEMENT

ಚಂಡೀಗಢ ಮೇಯರ್ ಚುನಾವಣೆ | ಪ್ರಜಾತಂತ್ರದ ಕೊಲೆ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 23:30 IST
Last Updated 5 ಫೆಬ್ರುವರಿ 2024, 23:30 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಚಂಡೀಗಢ ಮೇಯರ್ ಹುದ್ದೆಗೆ ನಡೆದ ಚುನಾವಣೆಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಕಾಪಿಡುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಸೂಚನೆ ನೀಡಿದೆ. ಈ ಚುನಾವಣೆಯಲ್ಲಿ ಬಿಜೆಪಿಯ ಮನೋಜ್ ಕುಮಾರ್ ಸೋನಕರ್ ಅವರು ಎಎಪಿ–ಕಾಂಗ್ರೆಸ್‌ನ ಜಂಟಿ ಅಭ್ಯರ್ಥಿಯನ್ನು ಸೋಲಿಸಿದ್ದರು.

ಮೇಯರ್ ಚುನಾವಣೆಯಲ್ಲಿ ಒಟ್ಟು ಎಂಟು ಮತಗಳನ್ನು ಅಸಿಂಧುಗೊಳಿಸಲಾಗಿತ್ತು. ‘ಚುನಾವಣಾಧಿಕಾರಿಯು ಮತಪತ್ರಗಳನ್ನು ಕೆಡಿಸಿರುವುದು ಸ್ಪಷ್ಟವಾಗಿದೆ, ಇದು ಪ್ರಜಾತಂತ್ರದ ಅಣಕ, ಪ್ರಜಾತಂತ್ರದ ಕೊಲೆ. ಅವರ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಇದ್ದ ತ್ರಿಸದಸ್ಯ ಪೀಠವು ಎಎಪಿ ಕೌನ್ಸಿಲರ್‌ ಕುಲದೀಪ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಮೇಯರ್ ಹುದ್ದೆಯ ಚುನಾವಣಾ ಫಲಿತಾಂಶಕ್ಕೆ ತಡೆ ನೀಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನಿರಾಕರಿಸಿದ್ದನ್ನು ಪ್ರಶ್ನಿಸಿ ಕುಲದೀಪ್ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ADVERTISEMENT

ಮೇಯರ್ ಚುನಾವಣೆಗೆ ಸಂಬಂಧಿಸಿದ ಇಡೀ ಪ್ರಕ್ರಿಯೆಯ ವಿಡಿಯೊ ಪರಿಶೀಲನೆ ನಡೆಸಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೀಠಕ್ಕೆ ಮನವಿ ಮಾಡಿದರು. ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಎ.ಎಂ. ಸಿಂಘ್ವಿ ಅವರು ಮತದಾನದ ದಿನದ ವಿಡಿಯೊ ಬಗ್ಗೆ ಪ್ರಸ್ತಾಪಿಸಿದರು.

ಆಗ ಪೀಠವು, ‘ಅವರು (ಚುನಾವಣಾ ಅಧಿಕಾರಿ) ಕ್ಯಾಮೆರಾವನ್ನು ನೋಡುತ್ತಿರುವುದು ಏಕೆ? ಇದು ಪ್ರಜಾತಂತ್ರದ ಅಣಕ. ಚುನಾವಣಾ ಅಧಿಕಾರಿಯು ಪ್ರಜಾತಂತ್ರದ ಕೊಲೆ ಮಾಡಿದ್ದಾರೆ. ಇದು ದಿಗಿಲು ಮೂಡಿಸುವಂತೆ ಇದೆ’ ಎಂದು ಹೇಳಿತು.

‘ಇದು ಚುನಾವಣಾ ಅಧಿಕಾರಿ ನಡೆದುಕೊಳ್ಳುವ ರೀತಿಯೇ? (ಮತಪತ್ರದಲ್ಲಿ) ಕೆಳಗಡೆ ಗುರುತು ಇದ್ದಲ್ಲಿ ಅವರು ಅದನ್ನು ಮುಟ್ಟುವುದಿಲ್ಲ. ಗುರುತು ಮೇಲೆ ಇದ್ದರೆ, ಅದನ್ನು ಅವರು ತಿದ್ದುತ್ತಾರೆ... ಸುಪ್ರೀಂ ಕೋರ್ಟ್‌ ತಮ್ಮನ್ನು ಗಮನಿಸುತ್ತಿದೆ ಎಂಬುದನ್ನು ಚುನಾವಣಾ ಅಧಿಕಾರಿಗೆ ತಿಳಿಸಿ’ ಎಂದು ಪೀಠ ಹೇಳಿತು. ಪ್ರಜಾತಂತ್ರವನ್ನು ಈ ರೀತಿಯಲ್ಲಿ ಹತ್ಯೆ ಮಾಡಲು ಕೋರ್ಟ್‌ ಅವಕಾಶ ನೀಡುವುದಿಲ್ಲ ಎಂದು ಕೂಡ ಹೇಳಿತು.

ಕುಲದೀಪ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಕಳೆದ ವಾರ ನೋಟಿಸ್ ಜಾರಿಗೆ ಮಾತ್ರ ಆದೇಶಿಸಿತ್ತು. ಮೇಯರ್ ಚುನಾವಣೆಯಲ್ಲಿ ಸೋನಕರ್ ಅವರು 16 ಮತ ಪಡೆದಿದ್ದರು. ಎಎಪಿ–ಕಾಂಗ್ರೆಸ್ ಅಭ್ಯರ್ಥಿಯು 12 ಮತ ಪಡೆದಿದ್ದರು. ಎಂಟು ಮತಗಳು ಅಸಿಂಧು ಎಂದು ಚುನಾವಣಾ ಅಧಿಕಾರಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.