ಕೋಲ್ಕತ್ತ: ಮುರ್ಷಿದಾಬಾದ್ ಜಿಲ್ಲೆಯ ಜಿಯಾಗಂಜ್‌ನಲ್ಲಿ ಗುರುವಾರ ನಡೆದತ್ರಿವಳಿಹತ್ಯೆ ಸಂಬಂಧ ಶನಿವಾರ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿಯವರೆಗೂನಾಲ್ವರು ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಶನಿವಾರ ಹತ್ಯೆ ನಡೆದ ಸ್ಥಳಕ್ಕೆ ಸಿಐಡಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ತ್ರಿವಳಿ ಹತ್ಯೆ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ತಿರುವು ಪಡೆದಿದ್ದು,‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಆಗ್ರಹಿಸಿದೆ. ಹತ್ಯೆಯಾದ ಶಿಕ್ಷಕ ಬಂಧು ಪ್ರಕಾಶ್ ಪಾಲ್ ಆರ್‌ಎಸ್‌ಎಸ್ ಬೆಂಬಲಿಗರಾಗಿದ್ದರು ಎಂದು ಆರ್‌ಎಸ್‌ಎಸ್ ಹೇಳಿಕೊಂಡಿದೆ.
ರಾಜಕೀಯ ಸಂಬಂಧವಿಲ್ಲ: ವೈಯಕ್ತಿಕ ದ್ವೇಷ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕಾಶ್ ಪಾಲ್‌ಗೂ ರಾಜಕೀಯ ಪಕ್ಷಕ್ಕೂ ಸಂಬಂಧ ವಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.
ಬಿಜೆಪಿ ಧರಣಿ
ಬಿಜೆಪಿ ಕಾರ್ಯಕರ್ತರ ಹತ್ಯೆ ಯನ್ನು ಖಂಡಿಸಿ ಶನಿವಾರ ಪಶ್ಚಿಮ ಬಂಗಾಳ ಬಿಜೆಪಿ ಘಟಕ ಧರಣಿ ನಡೆಸಿತು. ತ್ರಿವಳಿ ಹತ್ಯೆ ಹೊರತುಪಡಿಸಿಕಳೆದೊಂದು ವಾರದಲ್ಲಿ ಪಕ್ಷದ ಎಂಟು ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಬಿಜೆಪಿ ಹೇಳಿದೆ.
‘ಪಶ್ಚಿಮ ಬಂಗಾಳದಲ್ಲಿ ಪ್ರತಿನಿತ್ಯ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಟಿಎಂಸಿ ಸರ್ಕಾರ ಭಯಹುಟ್ಟಿಸುವ ತಂತ್ರ ಅನುಸರಿಸುತ್ತಿದೆ. ಇದರ ವಿರುದ್ಧ ನಾವು ಹೋರಾಡುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ದಿಲೀಪ್ ಘೋಷ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.