ಲಖನೌ: ಏಕರೂಪ ನಾಗರಿಕ ಸಂಹಿತೆಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ತೀವ್ರ ವಿರೋಧ ವ್ಯಕ್ತಪಡಿಸಿದೆ. ‘ಏಕರೂಪದ ನಾಗರಿಕ ಸಂಹಿತೆಯನ್ನು ಮುಸಲ್ಮಾನರು ಎಂದಿಗೂ ಒಪ್ಪುವುದಿಲ್ಲ’ ಎಂದೂ ಸ್ಪಷ್ಟಪಡಿಸಿದೆ.
ಅಂತರ ಧರ್ಮೀಯ ಮದುವೆ, ಧಾರ್ಮಿಕ ಮತಾಂತರ ಬೆಳವಣಿಗೆಯನ್ನು ಮಂಡಳಿ ವಿರೋಧಿಸಿದೆ. ಅಲ್ಲದೆ, ದೇಶದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪರಿಣಾಮಕಾರಿಯಾದ ಕಾಯ್ದೆಯನ್ನು ರೂಪಿಸಬೇಕು ಎಂದೂ ಕೇಂದ್ರ ಸರ್ಕಾರಕ್ಕೆ ಆಗ್ರಹಪಡಿಸಿದೆ.
ಕಾನ್ಪುರದಲ್ಲಿ ನಡೆದ ಮಂಡಳಿಯ ಕಾರ್ಯಕಾರಿಣಿ ಸಮಿತಿ ಸಭೆಯು ಈ ಸಂಬಂಧ ನಿರ್ಣಯವನ್ನು ಅಂಗೀಕರಿಸಿದೆ. ಸುದ್ದಿಗಾರರ ಜೊತೆಗೆ ಮಾತನಾಡಿದ ಮಂಡಳಿಯ ಮಾಧ್ಯಮ ಸಂಚಾಲಕ ಖಾಸಿಂ ರಸೂಲ್ ಇಲಿಯಾಸಿ ಅವರು, ‘ಬಹು ಧರ್ಮವುಳ್ಳ ಭಾರತದಂತಹ ದೇಶಕ್ಕೆ ಏಕರೂಪದ ನಾಗರಿಕ ಸಂಹಿತೆ ಎಂದಿಗೂ ಹೊಂದಿಕೆಯಾಗುವುದಿಲ್ಲ’ ಎಂದು ಪ್ರತಿಪಾದಿಸಿದರು.
ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ತನ್ನ ಧರ್ಮವನ್ನು ಪಾಲಿಸಲು ಹಾಗೂ ಅದರಂತೆ ನಡೆದುಕೊಳ್ಳಲು ಹಕ್ಕು ನೀಡಿದೆ. ಏಕರೂಪದ ನಾಗರಿಕ ಸಂಹಿತೆಯು ಈ ಮೂಲ ಉದ್ದೇಶಕ್ಕೇ ವಿರುದ್ಧವಾದುದಾಗಿದೆ ಎಂದು ಹೇಳಿದರು. ಮುಸಲ್ಮಾರ ಮೇಲೆ ಏಕರೂಪದ ನಾಗರಿಕ ಸಂಹಿತೆಯನ್ನು ಹೇರಬಾರದು ಎಂದೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
‘ಸಾಮಾಜಿಕ ಸೌಹಾರ್ದತೆಗೆ ಭಂಗ ಉಂಟುಮಾಡಲಿದೆ ಎಂಬ ಕಾರಣಕ್ಕೇ ನಾವು ಅಂತರ ಧರ್ಮೀಯ ಮದುವೆಗಳನ್ನು ವಿರೋಧಿಸುತ್ತೇವೆ. ಅನ್ಯ ಧರ್ಮೀಯರನ್ನು ಮದುವೆ ಆಗುವುದನ್ನು ಮುಸಲ್ಮಾನರು ಆದಷ್ಟು ತಡೆಯಬೇಕು. ಇಂಥ ಬೆಳವಣಿಗೆಗಳು ಸಮಾಜವನ್ನು ವಿಭಜಿಸಲಿವೆ ಮತ್ತು ಸೌಹಾರ್ದಕ್ಕೂ ಧಕ್ಕೆ ತರಲಿದೆ’ ಎಂದು ಹೇಳಿದರು.
ಬಲವಂತದಿಂದ ಮತಾಂತರ ಮಾಡುವುದನ್ನು ಮಂಡಳಿಯು ತೀವ್ರವಾಗಿ ವಿರೋಧಿಸಲಿದೆ ಎಂದ ಅವರು, ಮುಸಲ್ಮಾನರು ಇಂತಹ ಕೃತ್ಯಗಳಿಂದ ದೂರ ಉಳಿಯಬೇಕು ಎಂದು ಮನವಿ ಮಾಡಿದರು.
ಮಹಿಳೆಯರ ಸುರಕ್ಷತೆಗೆ ಕಠಿಣವಾದ ಕಾಯ್ದೆ ರೂಪಿಸಬೇಕು. ಅಂತೆಯೇ, ಪ್ರವಾದಿ ಮಹಮ್ಮದ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡುವವವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು.
ಧಾರ್ಮಿಕ ಕೃತಿಗಳ ರಚನೆ ವಿಷಯದಲ್ಲಿ ಸರ್ಕಾರ ಅಥವಾ ವ್ಯಕ್ತಿಗತವಾಗಿ ಯಾರೂ ಹಸ್ತಕ್ಷೇಪ ಮಾಡಬಾರದು. ಧರ್ಮವನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರಷ್ಟೇ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಇಲಿಯಾಸಿ ಅವರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.