ಅಯೋಧ್ಯಾ: ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಐತಿಹಾಸಿಕ ನಗರ ಅಯೋಧ್ಯಾ ಸಜ್ಜಾಗುತ್ತಿದೆ. ಉತ್ತರ ಪ್ರದೇಶ ಸೇರಿದಂತೆ ದೇಶದ ನಾನಾ ಭಾಗಗಳ ಮುಸ್ಲಿಂ ಸಮುದಾಯದವರು ಈ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ದಶಕಗಳಷ್ಟು ಹಳೆಯದಾದ ರಾಮ ಜನ್ಮಭೂಮಿ ಒಡೆತನ ವಿವಾದವನ್ನು ಸುಪ್ರೀಂ ಕೋರ್ಟ್ ಕಳೆದ ನವೆಂಬರ್‌ನಲ್ಲಿ ಬಗೆಹರಿಸಿದ್ದು, ಆಗಸ್ಟ್ 5ರಂದು ಭೂಮಿಪೂಜೆಯೊಂದಿಗೆ ಮಂದಿರ ನಿರ್ಮಾಣಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.
‘ಭೂಮಿಪೂಜೆ ಸಂಭ್ರಮದಲ್ಲಿ ಹಿಂದೂ ಸಹೋದರರೊಂದಿಗೆ ನಾನೂ ಭಾಗಿಯಾಗಲಿದ್ದೇನೆ’ ಎನ್ನುತ್ತಾರೆ ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯ ಜಮ್‌ಶೆಡ್ ಖಾನ್.
‘ತಲೆಮಾರುಗಳ ಹಿಂದೆ ನಾವು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದೇವೆ. ಇಸ್ಲಾಂ ಧರ್ಮದ ಧಾರ್ಮಿಕ ವಿಧಿ, ವಿಧಾನ ಮತ್ತು ಪ್ರಾರ್ಥನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ. ಹಾಗಂತ ನಮ್ಮ ಪೂರ್ವಜರು ಬದಲಾಗುವುದಿಲ್ಲ. ಶ್ರೀರಾಮ ನಮ್ಮ ಪೂರ್ವಿಕ ಎಂಬುವುದು ನಮ್ಮ ನಂಬಿಕೆ’ ಎನ್ನುತ್ತಾರೆ ಖಾನ್.
‘ನಾವು ಪಾಲಿಸುತ್ತಿರುವ ಇಸ್ಲಾಂ ತತ್ವ, ಆದರ್ಶ ಮತ್ತು ಆಚರಣೆಗಳಲ್ಲಿ ಸಂಪೂರ್ಣ ನಂಬಿಕೆ ಇದೆ. ಶ್ರೀರಾಮನಮ್ಮ ಪೂರ್ವಜ. ಹಾಗಾಗಿ ರಾಮಮಂದಿರ ನಿರ್ಮಾಣಕ್ಕೆ ನಾವು ಸಾಕ್ಷಿಯಾಗಲಿದ್ದೇವೆ ಎಂಬುವುದೇ ನಮಗೆ ಹೆಮ್ಮೆಯ ವಿಷಯ’ ಎನ್ನುತ್ತಾರೆ ಫೈಜಾಬಾದ್ ಜಿಲ್ಲೆಯ ವಾಸಿ ಹೈದರ್.
ಭಾರತೀಯ ಮುಸಲ್ಮಾನರು ರಾಮನನ್ನು ‘ಇಮಾಮ್–ಏ– ಹಿಂದ್’ ಎಂದು ಭಾವಿಸಿದ್ದಾರೆ ಎಂದು ಹಾಜಿ ಸಯೀದ್ ಹೇಳುತ್ತಾರೆ.
‘ರಾಮ ಜನ್ಮಭೂಮಿಯನ್ನು ಪ್ರವೇಶಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಒಂದು ವೇಳೆ ಭದ್ರತಾ ಕಾರಣಗಳಿಗಾಗಿ ಅವಕಾಶ ದೊರೆಯದಿದ್ದರೂ ಚಿಂತೆ ಇಲ್ಲ. ಅಂದು ಅಯೋಧ್ಯೆಯಲ್ಲಿರುತ್ತೇನೆ’ ಎನ್ನುವುದು ರಶೀದ್ ಅನ್ಸಾರಿ ವಿಶ್ವಾಸ.
‘ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅನ್ಯ ರಾಜ್ಯಗಳಿಂದ ಮುಸ್ಲಿಮರು ಅಯೋಧ್ಯಾ ನಗರಕ್ಕೆ ಆಗಮಿಸಲಿದ್ದಾರೆ. ಛತ್ತೀಸಗಡದಿಂದ ಮುಸ್ಲಿಂ ವ್ಯಕ್ತಿಯೊಬ್ಬ ಇಟ್ಟಿಗೆಗಳನ್ನು ಹೊತ್ತು ಅಯೋಧ್ಯೆಗೆ ಬರಲಿದ್ದಾನೆ’ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ಅವಧ್ ಪ್ರಾಂತ್ಯದ ಉಸ್ತುವಾರಿ ಅನಿಲ್ ಸಿಂಗ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾನಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಅನೇಕರು ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಮ ಜನ್ಮಭೂಮಿ ತೀರ್ಥಕೇತ್ರ ಟ್ರಸ್ಟ್ ಪದಾಧಿಕಾರಿ ಅನಿಲ್ ಮಿಶ್ರಾ ಹೇಳಿದ್ದಾರೆ.
ಎಲ್ಲ ಧರ್ಮ ಗುರುಗಳು, ಧಾರ್ಮಿಕ ಮುಖಂಡರನ್ನು ಸಮಾರಂಭಕ್ಕೆ ಆಹ್ವಾನಿಸಲಾಗುವುದು. ಕೋವಿಡ್–19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಷರತ್ತಿನ ಮೇಲೆ 200 ಜನರಿಗೆ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ದೂರದರ್ಶನಈ ಸಮಾರಂಭವನ್ನು ನೇರ ಪ್ರಸಾರ ಮಾಡಲಿದೆ ಎಂದು ಮಿಶ್ರಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.