ADVERTISEMENT

ಮಧ್ಯಪ್ರದೇಶ | ಮೈಹಾರ್ ದೇವಾಲಯದಿಂದ ಮುಸ್ಲಿಂ ಸಿಬ್ಬಂದಿ ತೆಗೆದು ಹಾಕಲು ಆದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಏಪ್ರಿಲ್ 2023, 13:32 IST
Last Updated 19 ಏಪ್ರಿಲ್ 2023, 13:32 IST
ಮೈಹಾರ್ ದೇವಾಲಯ ಮಧ್ಯಪ್ರದೇಶ
ಮೈಹಾರ್ ದೇವಾಲಯ ಮಧ್ಯಪ್ರದೇಶ   

ಮಧ್ಯಪ್ರದೇಶದ: ಇಲ್ಲಿನ ಇತಿಹಾಸ ಪ್ರಸಿದ್ಧ ಮೈಹಾರ್‌ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಮುಸ್ಲಿಂ ನೌಕರರು ಕೆಲಸ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದ್ದು, 35 ವರ್ಷದಿಂದ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಬಂದಿರುವ ಇಬ್ಬರು ಮುಸ್ಲಿಂ ಸಿಬ್ಬಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ.

ಕಳೆದ ತಿಂಗಳು ಜನವರಿಯಲ್ಲಿ ಬಲಪಂಥೀಯ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಧಾರ್ಮಿಕ ದತ್ತಿ ಇಲಾಖೆ ಸಚಿವೆ ಉಷಾ ಠಾಕೂರ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಈ ವಿಚಾರದ ಬಗ್ಗೆ ಚರ್ಚಿಸಿದ್ದರು. ಇದಾದ ಬಳಿಕ ಮುಸ್ಲಿಂ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಕುರಿತು ಸರ್ಕಾರ ಎರಡು ಆದೇಶಗಳನ್ನು ಕಳುಹಿಸಿತ್ತು.

ಸರ್ಕಾರದ ಆದೇಶ ಸಂಬಂಧ ಜನವರಿ 17ರಂದು ನೀಡಿರುವ ನಿರ್ದೇಶನವನ್ನು ಪಾಲಿಸಿ ವರದಿ ಸಲ್ಲಿಸುವಂತೆ ದೇವಸ್ಥಾನ ವ್ಯವಸ್ಥಾನದ ಸಮಿತಿಗೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಉಪ ಕಾರ್ಯದರ್ಶಿ ಪುಷ್ಪಾ ಕಾಲೇಶ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಇಷ್ಟೇ ಅಲ್ಲದೇ ದೇವಸ್ಥಾನದ ಸುತ್ತಮುತ್ತ ಮಾಂಸ ಮತ್ತು ಮದ್ಯ ಮಾರಾಟ ನಿಷೇಧ ಮಾಡುವಂತೆ ತಿಳಿಸಿದೆ.

ADVERTISEMENT

ಮೈಹಾರ್‌ನ ಮಾತೆ ಶಾರದಾದೇವಿ ದೇವಸ್ಥಾನದಲ್ಲಿ 1988ರಿಂದ ಇಬ್ಬರು ಮುಸ್ಲಿಂ ವ್ಯಕ್ತಿಗಳು ಕೆಲಸ ಮಾಡಿಕೊಂಡು ಬಂದಿದ್ದಾರೆ. ಧರ್ಮದ ಆಧಾರದ ಮೇಲೆ ಯಾವುದೇ ವ್ಯಕ್ತಿಯನ್ನು ನೌಕರಿಯಿಂದ ತೆಗೆದುಹಾಕುವಂತಿಲ್ಲ ಎಂಬ ರಾಜ್ಯ ಸರ್ಕಾರದ ನಿಯಮದ ಹೊರತಾಗಿಯೂ ಧಾರ್ಮಿಕ ದತ್ತಿ ಇಲಾಖೆ ಈ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಮೂಡಿಸಿದೆ.

ಮೈಹಾರ್‌ ದೇವಾಲಯದ (ಮೈಹಾರ್‌ ಘರನಾ) :

ಮೈಹಾರ್‌, ಪ್ರಖ್ಯಾತ ಸಂಗೀತ ಪಂಡಿತ ಬಾಬಾ ಅಲ್ಲಾವುದ್ದೀನ್‌ ಖಾನ್‌ ಅವರ ತವರೂರಾಗಿದೆ. ಅಲ್ಲಾವುದ್ದೀನ್‌ ಖಾನ್‌ ಅವರೇ ಪ್ರಸಿದ್ಧ ಸಂಗೀತ ಶಾಲೆ ‘ಮೈಹಾರ್‌ ಘರನಾ‘(ಶಾರದಾ ದೇವಿ ದೇವಾಲಯ) ನಿರ್ಮಿಸಿದವರು. ಪಂಡಿತ್ ರವಿಶಂಕರ್‌ ಅಲ್ಲಾವುದ್ದೀನ್‌ ಖಾನ್‌ ಅವರ ಶಿಷ್ಯಂದರಲ್ಲಿ ಒಬ್ಬರಾಗಿದ್ದಾರೆ. ‘ಖಾನ್‌ ಅವರು ಮಾತೆ ಶಾರದಾದೇವಿಯ ಅಚಲ ಭಕ್ತರಾಗಿದ್ದು, ಪ್ರತಿದಿನ 1,063 ಮೆಟ್ಟಿಲುಗಳನ್ನು ಹತ್ತಿ ಶಾರದಾ ದೇವಿ ಮುಂದೆ ಭಕ್ತಿ ಪೂರ್ವಕವಾಗಿ ಹಾಡುತ್ತಿದ್ದರು‘ ಎಂದು ಅವರ ಶಿಷ್ಯ ಪಂಡಿತ್ ರವಿಶಂಕರ್‌ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.