ADVERTISEMENT

ವಿಚ್ಛೇದಿತ ಮುಸ್ಲಿಂ ಮಹಿಳೆಯರೂ ಜೀವನಾಂಶಕ್ಕೆ ಅರ್ಹರು: ಸುಪ್ರೀಂ ಕೋರ್ಟ್‌

ಜೀವನಾಂಶ ದತ್ತಿಯಲ್ಲ, ವಿಚ್ಛೇದಿತೆಯರ ಹಕ್ಕು –‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 16:26 IST
Last Updated 10 ಜುಲೈ 2024, 16:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆಯರೂ ಅಪರಾಧ ದಂಡ ಸಂಹಿತೆಯ (ಸಿ‌ಆರ್‌ಪಿಸಿ) ಸೆಕ್ಷನ್‌ 125ರ ಅನ್ವಯ ಪತಿಯಿಂದ ಜೀವನಾಂಶ ಪಡೆಯಲು ಹಕ್ಕುದಾರರಾಗಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಮಹತ್ವದ ತೀರ್ಪು ನೀಡಿದೆ. 

‘ಮುಸ್ಲಿಂ ಮಹಿಳೆಯರ (ವಿಚ್ಛೇದನ ವೇಳೆ ಹಕ್ಕುಗಳ ರಕ್ಷಣೆ) ಕಾಯ್ದೆ 1986’ ಈ ನೆಲದ ಜಾತ್ಯತೀತ ಕಾನೂನುಗಳ ಕೆಳಗೆಯೇ ಬರುತ್ತದೆ. ಅಲ್ಲದೆ, ಜೀವನಾಂಶ ಎಂಬುದು ದತ್ತಿಯಲ್ಲ, ಅದು ಎಲ್ಲ ವಿವಾಹಿತ ಮಹಿಳೆಯರ ಹಕ್ಕು’ ಎಂದು ಪೀಠವು ಅಭಿಪ್ರಾಯಪಟ್ಟಿತು.

ಜೀವನಾಂಶ ಕುರಿತು ಮುಸ್ಲಿಂ ಮಹಿಳೆಯರಿಗಾಗುವ ತಾರತಮ್ಯವು ಲಿಂಗ ಸಮಾನತೆ ನ್ಯಾಯಕ್ಕೆ ವಿರುದ್ಧವಾದುದು. ಧರ್ಮದ ಹೊರತಾಗಿ ಎಲ್ಲ ವಿವಾಹಿತೆಯರಿಗೆ ‘ಧಾರ್ಮಿಕ ತಟಸ್ಥ’ ನಿಯಮ ಅನ್ವಯವಾಗಲಿದೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಅಗಸ್ಟೀನಾ ಜಾರ್ಜ್ ಮಾಸಿಹ್‌ ಅವರಿದ್ದ ಪೀಠವು ಆದೇಶಿಸಿತು.

ADVERTISEMENT

‘ಈ ಹಿಂದಿನ ಸಿಆರ್‌ಪಿಸಿ ಕಾಯ್ದೆಯ ಸೆಕ್ಷನ್‌ 125 ಎಲ್ಲ ಮಹಿಳೆಯರಿಗೆ ಅನ್ವಯವಾಗಲಿದೆ ಎಂಬ ಪ್ರಮುಖ ಅಂಶದೊಂದಿಗೆ ಈ ಸಂಬಂಧ ಸಲ್ಲಿಕೆಯಾಗಿದ್ದ ಕ್ರಿಮಿನಲ್‌ ಮೇಲ್ಮನವಿಗಳನ್ನು ವಜಾ ಮಾಡುತ್ತಿದ್ದೇವೆ’ ಎಂದು ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಹೇಳಿದರು.

ಸೆಕ್ಷನ್‌ 125 ವಿವಾಹಿತ ಮಹಿಳೆಯರ ಜೀವನಾಂಶದ ಹಕ್ಕುಗಳನ್ನು ಪ್ರತಿಪಾದಿಸುತ್ತದೆ. ಪೀಠದಲ್ಲಿದ್ದ ಇಬ್ಬರು ನ್ಯಾಯಮೂರ್ತಿಗಳು ಈ ಕುರಿತು ಪ್ರತ್ಯೇಕವಾದ ಆದರೆ, ಸಹಮತದ ತೀರ್ಪು ನೀಡಿದರು. 

ಮುಸ್ಲಿಮರಿಗೆ ವೈಯಕ್ತಿಕ ಕಾನೂನು ಇರುವ ಕಾರಣ ಸಿಆರ್‌ಪಿಸಿ ಸೆಕ್ಷನ್‌ 125 ಅನ್ವಯವಾಗದು ಎಂಬ ವಾದವನ್ನು ಪೀಠ ಸ್ಪಷ್ಟವಾಗಿ ತಳ್ಳಿಹಾಕಿತು.

ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾದ, ವಿಚ್ಛೇದನಗೊಂಡ ಎಲ್ಲ ಮುಸ್ಲಿಂ ಮಹಿಳೆಯರಿಗೆ ನಿಯಮ ಅನ್ವಯವಾಗಲಿದೆ. ಜೊತೆಗೆ ವಿಶೇಷ ವಿವಾಹ ಕಾಯ್ದೆಯಡಿ ಲಭ್ಯವಿರುವ ಪರಿಹಾರಗಳಿಗೂ ಅವರು ಹಕ್ಕುದಾರರಾಗಿದ್ದಾರೆ ಎಂದು ಪೀಠವು ಹೇಳಿತು.

ತೆಲಂಗಾಣದ ಕೌಟುಂಬಿಕ ನ್ಯಾಯಾಲಯವೊಂದರ ಆದೇಶವನ್ನು ಮೊಹಮ್ಮದ್‌ ಅಬ್ದುಲ್‌ ಸಮದ್‌ ಎಂಬವರು ತೆಲಂಗಾಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ತೆಲಂಗಾಣ ಹೈಕೋರ್ಟ್‌ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

‘ವಿಚ್ಛೇದಿತ ಮುಸ್ಲಿಂ ಮಹಿಳೆಯರು ಸಿಆರ್‌ಪಿಸಿ ಸೆಕ್ಷನ್‌ 125ರ ಅನ್ವಯ ಜೀವನಾಂಶಕ್ಕೆ ಅರ್ಹರಲ್ಲ. ಅವರಿಗೆ 1986 ಕಾಯ್ದೆಯ ನಿಯಮಗಳು ಅನ್ವಯವಾಗಬೇಕು’ ಎಂಬುದು ಅರ್ಜಿದಾರರ ವಾದವಾಗಿತ್ತು. ಶಾ ಬಾನು ಪ್ರಕರಣ ತೀರ್ಪಿನ ಬಳಿಕ ಈ 1986ರ ಕಾಯ್ದೆ ರೂಪಿಸಲಾಗಿತ್ತು.

ಅರ್ಜಿದಾರರ ಪರ ಹಿರಿಯ ವಕೀಲ ವಾಸಿಮ್‌ ಖಾದ್ರಿ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆಗೆ ನೆರವಾಗಲು ಕೋರ್ಟ್‌ ಗೌರವ್ ಅಗರವಾಲ್‌ ಅವರನ್ನು ನ್ಯಾಯಾಲಯದ ಸಹಾಯಕರನ್ನಾಗಿ ನೇಮಕ ಮಾಡಿತ್ತು. ಫೆ.19ರಂದು ವಾದವನ್ನು ಆಲಿಸಿದ್ದ ಪೀಠ ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ಸಿಆರ್‌ಪಿಸಿ ಸೆಕ್ಷನ್‌ 125ಕ್ಕೆ ಹೋಲಿಸಿದರೆ 1986ರ ಕಾಯ್ದೆಯಲ್ಲಿಯೇ ಮುಸ್ಲಿಂ ಮಹಿಳೆಯರಿಗೆ ಹೆಚ್ಚಿನ ಅನುಕೂಲಗಳಿವೆ ಎಂದು ಖಾದ್ರಿ ಅವರು ವಾದವನ್ನು ಮಂಡಿಸಿದ್ದರು.

ಈ ಪ್ರಕರಣದಲ್ಲಿ ವಿಚ್ಛೇದಿತ ಮಹಿಳೆಗೆ ಮಾಸಿಕ ₹20 ಸಾವಿರ ಜೀವನಾಂಶ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿತ್ತು. ಆದರೆ, ಜೀವನಾಂಶದ ಮೊತ್ತವನ್ನು ₹10 ಸಾವಿರಕ್ಕೆ ಇಳಿಸಿತ್ತು.

‘ನಾವು ಮುಸ್ಲಿಂ ವೈಯಕ್ತಿಕ ಕಾನೂನಿನ ಅನ್ವಯ ವಿಚ್ಛೇದನ ಪಡೆದಿದ್ದೇವೆ. ಈ ಕುರಿತ ಪ್ರಮಾಣಪತ್ರವನ್ನು ಕೌಟುಂಬಿಕ ನ್ಯಾಯಾಲಯ ಮಾನ್ಯ ಮಾಡುತ್ತಿಲ್ಲ‘ ಎಂದು ಅರ್ಜಿದಾರ ಸಮದ್‌ ಪ್ರತಿಪಾದಿಸಿದ್ದರು. 

ಧರ್ಮವನ್ನು ಹೊರತುಪಡಿಸಿ ಎಲ್ಲ ಮಹಿಳೆಯರಿಗೆ ನ್ಯಾಯ ಲಿಂಗ ಸಮಾನತೆ ಒದಗಿಸುವಲ್ಲಿ ಸುಪ್ರೀಂ ಕೋರ್ಟ್‌ನ ಈ ತೀರ್ಪು ಗಮನಾರ್ಹ. ಎಲ್ಲ ಮಹಿಳೆಯರಿಗೂ ಕಾನೂನಿನ ರಕ್ಷಣೆ ಬೆಂಬಲ ಇರಬೇಕು ಎಂಬ ತತ್ವಕ್ಕೆ ಇದು ಬಲ ನೀಡಿದೆ.
-ರೇಖಾ ಶರ್ಮಾ, ಮುಖ್ಯಸ್ಥೆ ರಾಷ್ಟ್ರೀಯ ಮಹಿಳಾ ಆಯೋಗ

ಸಂವಿಧಾನಕ್ಕಿದ್ದ ಭೀತಿ ತಪ್ಪಿತು –ಬಿಜೆಪಿ

ನವದೆಹಲಿ: ‘ರಾಜೀವ್‌ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ಕಾಯ್ದೆಯಿಂದ ಸಂವಿಧಾನಕ್ಕೆ ಎದುರಾಗಿದ್ದ ಭೀತಿ ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಅಂತ್ಯವಾಗಿದೆ’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ‘ಮುಸ್ಲಿಂ ವಿಚ್ಛೇದಿತ ಮಹಿಳೆಯರೂ ಪತಿಯಿಂದ ಜೀವನಾಂಶ ಪಡೆಯಲು ಹಕ್ಕುದಾರರು ಎಂಬ ಸುಪ್ರೀಂ ಕೋರ್ಟ್‌ನ ತೀರ್ಪು ಸ್ವಾಗತಾರ್ಹ’ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

‘ರಾಜೀವ್‌ಗಾಂಧಿ ನೇತೃತ್ವದ ಸರ್ಕಾರವು ಈ ಹಿಂದೆ ಸುಪ್ರೀಂ ಕೋರ್ಟ್‌ನ ತೀರ್ಪು ಮೀರಿ ರೂಪಿಸಿದ್ದ ಕಾಯ್ದೆಯು ಸಂವಿಧಾನಕ್ಕೆ ಧಕ್ಕೆ ತರುವಂತಹದ್ದಾಗಿತ್ತು. ಕಾಂಗ್ರೆಸ್ ಸರ್ಕಾರದ ಈ  ಕಾಯ್ದೆಯು ಶರಿಯಾ ಮುಸ್ಲಿಂ ವೈಯಕ್ತಿಕ ಕಾಯ್ದೆಗೆ ಹೆಚ್ಚಿನ ಮಹತ್ವವನ್ನು ನೀಡಿತ್ತು’ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಆರೋಪಿಸಿದರು. ರಾಜ್ಯಸಭೆ ಸದಸ್ಯರೂ ಆಗಿರುವ ತ್ರಿವೇದಿ ‘ಕಾಂಗ್ರೆಸ್ ಯಾವಾಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುತ್ತದೊ ಆಗೆಲ್ಲಾ ಸಂವಿಧಾನಕ್ಕೆ ಧಕ್ಕೆ ಉಂಟಾಗಿದೆ.

ಶರಿಯಾಗೆ ಹೆಚ್ಚು ಮಹತ್ವ ನೀಡಿದ್ದ ಕಾಯ್ದೆಯಿಂದ ಸಂವಿಧಾನದ ಹಿರಿಮೆಗೆ ಧಕ್ಕೆ ಉಂಟಾಗಿತ್ತು. ಆ ಹಿರಿಮೆಯನ್ನು ಮರುಸ್ಥಾಪಿಸುವ ಕೆಲಸ ಈ ತೀರ್ಪಿನಿಂದ ಆಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘ಇಂತಹ ಪ್ರಕರಣಗಳನ್ನು ಧರ್ಮವನ್ನೂ ಮೀರಿ ಸಮಾನ ಹಕ್ಕುಗಳ ದೃಷ್ಟಿಯಿಂದಲೇ ನೋಡಬೇಕು. ಶರಿಯಾದ ಹಲಾಲ ತ್ರಿವಳಿ ತಲಾಖ್‌ ಹಜ್‌ ಸಬ್ಸಿಡಿಗೆ ಅವಕಾಶ ಕಲ್ಪಿಸುವ ಯಾವುದೇ ಜಾ‌ತ್ಯತೀತ ರಾಷ್ಟ್ರ ಇಲ್ಲ. ಆದರೆ ಕಾಯ್ದೆಯನ್ನು ರೂಪಿಸಿ ಹಿಂದಿನ ಕಾಂಗ್ರೆಸ್ ಸರ್ಕಾರ ಭಾರತವನ್ನು ಭಾಗಶಃ ಇಸ್ಲಾಮಿಕ್‌ ದೇಶವಾಗಿ ಪರಿವರ್ತಿಸಿತ್ತು’ ಎಂದು ತ್ರಿವೇದಿ ಅವರು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.