ADVERTISEMENT

ತ್ರಿವಳಿ ತಲಾಖ್‌ ಸಂತ್ರಸ್ತರೊಂದಿಗೆ ಕೇಂದ್ರ ಸಚಿವರ ಸಂವಾದ

‘ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನ’ ಕಾರ್ಯಕ್ರಮ

ಪಿಟಿಐ
Published 1 ಆಗಸ್ಟ್ 2021, 13:55 IST
Last Updated 1 ಆಗಸ್ಟ್ 2021, 13:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತ್ರಿವಳಿ ತಲಾಖ್‌ ವಿರುದ್ಧದ ಕಾನೂನು ಜಾರಿಗೊಳಿಸಿ ಭಾನುವಾರ (ಆಗಸ್ಟ್‌ 1) ಎರಡು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿವಿಧ ಸಂಘಟನೆಗಳು ‘ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನ’ ಕಾರ್ಯಕ್ರಮ ಹಮ್ಮಿಕೊಂಡಿದ್ದವು.

ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಹಾಗೂ ಕಾರ್ಮಿಕ ಸಚಿವ ಭೂಪೇಂದರ್‌ ಯಾದವ್ ಅವರು ಈ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ತ್ರಿವಳಿ ತಲಾಖ್‌ನಿಂದಾಗಿ ಸಂತ್ರಸ್ತರಾದ ಕೆಲವು ಮಹಿಳೆಯರೊಂದಿಗೆ ಮೂವರು ಸಚಿವರು ಈ ಸಂದರ್ಭದಲ್ಲಿ ಸಂವಾದ ನಡೆಸಿದರು.

ADVERTISEMENT

‘ತ್ರಿವಳಿ ತಲಾಖ್‌ ನಿಷೇಧಿಸುವ ಕಾನೂನನ್ನು ಕೇಂದ್ರ ಸರ್ಕಾರ 2019ರ ಆಗಸ್ಟ್‌ 1ರಂದು ಜಾರಿಗೊಳಿಸಿತು. ಇದನ್ನು ಅಪರಾಧ ಎಂದು ಪರಿಗಣಿಸುವ ಕಾನೂನನ್ನು ಜಾರಿಗೊಳಿಸಿದ್ದಕ್ಕಾಗಿ ಮುಸ್ಲಿಂ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದರು’ ಎಂದು ಇದೇ ಪ್ರಕಟಣೆ ತಿಳಿಸಿದೆ.

‘ಆಗಸ್ಟ್‌ 1, ತ್ರಿವಳಿ ತಲಾಖ್‌ ವಿರುದ್ಧ ಧ್ವನಿ ಎತ್ತಿ, ಹೋರಾಡಿದ ಮುಸ್ಲಿಂ ಮಹಿಳೆಯರನ್ನು ಅಭಿನಂದಿಸುವ ದಿನವಾಗಿದೆ’ ಎಂದು ಸಚಿವೆ ಇರಾನಿ ಹೇಳಿದರು.

‘ಮುಸ್ಲಿಂ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಸಲುವಾಗಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಹಾಗೂ ಕಾರ್ಮಿಕ ಸಚಿವಾಲಯಗಳು ಕೈಜೋಡಿಸಲಿವೆ’ ಎಂದೂ ಅವರು ಹೇಳಿದರು.

‘ಸಮಾಜದ ಪ್ರತಿಯೊಂದು ವರ್ಗದ ಮಹಿಳೆಯರ ಘನತೆ ಕಾಪಾಡಲು ಹಾಗೂ ಸಬಲೀಕರಣಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಶ್ರಮಿಸುತ್ತಿದೆ. ಅದರಲ್ಲೂ, ತ್ರಿವಳಿ ತಲಾಖ್‌ ನಿಷೇಧಿಸುವ ಕಾನೂನನ್ನು ಜಾರಿಗೊಳಿಸುವ ಮೂಲಕ ಮುಸ್ಲಿಂ ಮಹಿಳೆಯರ ಘನತೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಂಡಿದ್ದಾರೆ’ ಎಂದು ಸಚಿವ ಯಾದವ್‌ ಹೇಳಿದರು.

‘ಮುಸ್ಲಿಂ ಮಹಿಳೆಯರು ಹೊಂದಿರುವ ಸಂವಿಧಾನದತ್ತ ಹಕ್ಕುಗಳ ರಕ್ಷಣೆಯನ್ನು ಈ ಕಾನೂನು ಖಾತ್ರಿಪಡಿಸಿದ್ದು, ಇದು ಬಹುದೊಡ್ಡ ಸುಧಾರಣೆಯಾಗಿದೆ‘ ಎಂದು ಸಚಿವ ನಖ್ವಿ ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.