ADVERTISEMENT

ಬಾಬರಿ ಮಸೀದಿಯಂತೆ ಇನ್ನೊಂದು ಮಸೀದಿಯನ್ನು ಕಳೆದುಕೊಳ್ಳಲು ಸಿದ್ಧವಿಲ್ಲ: ಒವೈಸಿ

ಪಿಟಿಐ
Published 16 ಮೇ 2022, 16:27 IST
Last Updated 16 ಮೇ 2022, 16:27 IST
   

ಹೈದರಾಬಾದ್‌: ಮುಸ್ಲಿಮರು ಬಾಬರಿ ಮಸೀದಿಯಂತೆ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಸಿದ್ಧರಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ ಹೇಳಿದ್ದಾರೆ.

ವಾರಾಣಸಿಯ ಜ್ಞಾನವಾಪಿ ಮಸೀದಿಯ ವಿಡಿಯೊ ಚಿತ್ರೀಕರಣ ಮತ್ತು ಸಮೀಕ್ಷೆಯ ವೇಳೆ ಸೋಮವಾರ ಶಿವಲಿಂಗ ಪತ್ತೆಯಾಗಿದೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ‘ನೀವು ಸತ್ಯವನ್ನು ಎಷ್ಟೇ ಮುಚ್ಚಿಟ್ಟರೂ ಮುಂದೊಂದು ದಿನ ಅದು ಹೊರಬರುತ್ತದೆ’ ಎಂದು ಟ್ವೀಟ್ ಮಾಡಿದ್ದರು.

ADVERTISEMENT

‘ಹಿಂದೆ ದೇವಾಲಯವೊಂದು ಸ್ಥಳದಲ್ಲಿ ಇತ್ತು ಎಂಬುದನ್ನು ಸಮೀಕ್ಷೆ ಸಾಬೀತುಪಡಿಸಿದೆ’ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೇಳಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ತಮ್ಮ ಟ್ವಿಟರ್‌ನಲ್ಲಿ ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಅಸಾದುದ್ದೀನ್‌ ಒವೈಸಿ, ‘ಬಾಬರಿ ಮಸೀದಿಯನ್ನು ನಮ್ಮಿಂದ ಕಿತ್ತುಕೊಂಡಾಗ ನನಗಿನ್ನೂ 19-20 ವರ್ಷ. ಆದರೆ, ಈಗ ಅದೇ ಘಟನೆ ನಡೆಯಲು ನಾವು ಬಿಡುವುದಿಲ್ಲ. ಮತ್ತೊಂದು ಮಸೀದಿಯನ್ನು ನಾವು ಕಳೆದುಕೊಳ್ಳುವುದಿಲ್ಲ ಎಂದು ಮುಸ್ಲೀಮರು ಪ್ರತಿಜ್ಞೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

‘ನಿಮ್ಮ ತಂತ್ರಗಳು ನಮಗೆ ತಿಳಿದಿವೆ. ನಮ್ಮನ್ನು ಮತ್ತೆ ಕೆಣಕಲು ನಾವು ಬಿಡುವುದಿಲ್ಲ’ ಎಂದು ಅವರು ಬಲಪಂಥೀಯ ಹಿಂದೂ ಸಂಘಟನೆಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

‘ವಾರಾಣಸಿಯಲ್ಲಿ ಮಸೀದಿ ಅಸ್ತಿತ್ವದಲ್ಲಿದೆ. ಅಲ್ಲಾ ಈ ಜಗತ್ತನ್ನು ಅಖಂಡವಾಗಿ ಇಡುವವರೆಗೂ, ಮಸೀದಿಯೂ ಅಖಂಡವಾಗಿ ಇರಲಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.