ADVERTISEMENT

ಮುಸ್ಲಿಮರಿಗೂ ಮೀಸಲಾತಿ ಬೇಕು: ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಹೇಳಿಕೆ

ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಹೇಳಿಕೆ; ಬಿಜೆಪಿ ಟೀಕೆ

ಪಿಟಿಐ
Published 7 ಮೇ 2024, 15:58 IST
Last Updated 7 ಮೇ 2024, 15:58 IST
ಲಾಲು ಪ್ರಸಾದ್
ಲಾಲು ಪ್ರಸಾದ್   

ಪಟ್ನಾ/ನವದೆಹಲಿ (ಪಿಟಿಐ): ‘ಮುಸ್ಲಿಮರಿಗೂ ಮೀಸಲಾತಿಯ ಪ್ರಯೋಜನ ಸಿಗಬೇಕು. ಆದರೆ, ಧರ್ಮದ ಆಧಾರದಲ್ಲಿ ಅಲ್ಲ, ಸಾಮಾಜಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ’ ಎಂದು ಆರ್‌ಜೆಡಿ ನಾಯಕ ಲಾಲು ‍ಪ್ರಸಾದ್ ಮಂಗಳವಾರ ಹೇಳಿದ್ದಾರೆ. 

ಲಾಲು ಅವರ ಹೇಳಿಕೆಯನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಟೀಕಿಸಿದ್ದು, ‘ಇಂಡಿಯಾ’ ಕೂಟವು ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿ ಕಸಿದು ಮುಸ್ಲಿಮರಿಗೆ ನೀಡಲು ಹೊರಟಿರುವುದು ಸ್ಪಷ್ಟವಾಗಿದೆ ಎಂದು ತಿರುಗೇಟು ನೀಡಿದ್ದಾರೆ.   

ಸಾರ್ವಜನಿಕ ಸಮಾರಂಭಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದ ಲಾಲು ಪ್ರಸಾದ್ ಅವರು, ಪತ್ನಿ ರಾಬ್ರಿ ದೇವಿ ವಿಧಾನ ಪರಿಷತ್ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅದೇ ಸಮಾರಂಭದಲ್ಲಿ ಲಾಲು ಅವರ ಬದ್ಧ ರಾಜಕೀಯ ವೈರಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡಾ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ADVERTISEMENT

‘ನೂರಾರು ಸಾಮಾಜಿಕ ಗುಂಪುಗಳು ಮಂಡಲ್ ಸಮಿತಿಯ ವರದಿ ಆಧಾರದ ಮೇಲೆ ಮೀಸಲಾತಿ ಪಡೆದವು. ಆದರೆ, ಅದು ಆಗಿದ್ದು ಧರ್ಮದ ಆಧಾರದ ಮೇಲೆ ಅಲ್ಲ. ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಅವಕಾಶ ಇಲ್ಲ’ ಎಂದು ಅವರು ಹೇಳಿದರು.

‘ನರೇಂದ್ರ ಮೋದಿ ಮತ್ತು ಅವರ ಪಕ್ಷ ಸಂವಿಧಾನವನ್ನು ರದ್ದುಪಡಿಸಿ, ಮೀಸಲಾತಿ ಅಂತ್ಯಗೊಳಿಸಲು ಹೊರಟಿದೆ. ವಾಜಪೇಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರವು ಸಂವಿಧಾನದ ಪುನರ್ ಪರಿಶೀಲನೆಗೆ ಸಮಿತಿ ನೇಮಕ ಮಾಡಿದ್ದೇ ಇದಕ್ಕೆ ನಿದರ್ಶನ’ ಎಂದರು.

ಪ್ರಧಾನಿ ಮೋದಿ ಅವರ ‘ಅಬ್‌ಕಿ ಬಾರ್ 400 ಪಾರ್’ ಘೋಷಣೆಯ ಬಗ್ಗೆ ಲೇವಡಿ ಮಾಡಿದ ಲಾಲು, ಮೋದಿ ನಿರ್ಗಮನದ ಹಾದಿಯಲ್ಲಿದ್ದಾರೆ ಎಂದರು.

ಬಿಜೆಪಿ ಟೀಕೆ: ‘ಇಂಡಿಯಾ’ ಕೂಟವು ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲಿದೆ ಎನ್ನುವುದು ಲಾಲು ಪ್ರಸಾದ್ ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಬಿಜೆಪಿ ಟೀಕಿಸಿದೆ.

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ‘ಮುಸ್ಲಿಮರಿಗೆ ಪೂರ್ಣ ಮೀಸಲಾತಿ ನೀಡಬೇಕು ಎಂದು ಲಾಲು ಪ್ರಸಾದ್ ಹೇಳಿದ್ದಾರೆ. ‘ಇಂಡಿಯಾ’ ಕೂಟವು ಎಸ್‌ಸಿ, ಎಸ್‌ಟಿ, ಒಬಿಸಿ ಪಾಲಿನಿಂದ ಮುಸ್ಲಿಮರಿಗೆ ಮೀಸಲಾತಿ ನೀಡಲಿದೆ ಎನ್ನುವುದು ಸ್ಪಷ್ಟವಾಗಿದೆ’ ಎಂದು ತಿಳಿಸಿದರು. 

‘ಆರ್‌ಜೆಡಿಗೆ ಮುಸ್ಲಿಮರು ಪ್ರಥಮ, ನಂತರವಷ್ಟೇ ಯಾದವರು ಬರುತ್ತಾರೆ ಎನ್ನುವುದನ್ನು ಕೂಡ ಇದು ತೋರಿಸುತ್ತದೆ’ ಎಂದು ಹೇಳಿದರು.

ನನ್ನ ಹೇಳಿಕೆಯನ್ನು ‘ಇಂಡಿಯಾ’ ಕೂಟ ಒಪ್ಪಿಕೊಂಡಿದೆ: ಮೋದಿ ಧಾರ್

(ಪಿಟಿಐ): ಮುಸ್ಲಿಮರಿಗೂ ಮೀಸಲಾತಿ ಸಿಗಬೇಕು ಎಂಬ ಲಾಲು ಹೇಳಿಕೆಯನ್ನು ಟೀಕಿಸಿರುವ ಪ್ರಧಾನಿ ಮೋದಿ ದೊಡ್ಡ ಪಿತೂರಿಯ ಅಂಗವಾಗಿ ‘ಇಂಡಿಯಾ’ ಕೂಟವು ಎಸ್‌ಸಿ ಎಸ್‌ಟಿ ಒಬಿಸಿ ಮೀಸಲಾತಿ ಕಸಿದು ತನ್ನ ಮತಬ್ಯಾಂಕ್‌ಗೆ ನೀಡಲು ಹೊರಟಿದೆ ಎಂದು ಆರೋಪಿಸಿದರು. ಮಧ್ಯಪ್ರದೇಶದ ಧಾರ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ‘ಎಸ್‌ಸಿ ಎಸ್‌ಟಿ ಒಬಿಸಿಗೆ ನೀಡುತ್ತಿದ್ದ ಮೀಸಲಾತಿಯನ್ನು ಅಂತ್ಯಗೊಳಿಸುವ ಬಗೆಗಿನ ‘ಇಂಡಿಯಾ’ ಕೂಟದ ಯೋಜನೆಯ ಬಗ್ಗೆ ನಾನು ಹೇಳುತ್ತಿದ್ದುದನ್ನು ಅವರ ಅತಿ ದೊಡ್ಡ ಮಿತ್ರಪಕ್ಷ ಒಪ್ಪಿಕೊಂಡಿದೆ’ ಎಂದು ಪ್ರತಿಪಾದಿಸಿದರು. ‘ಕಾಂಗ್ರೆಸ್ ಲಾಲು ಅವರನ್ನು ತನ್ನ ತಲೆ ಮೇಲೆ ಕುಣಿಸುತ್ತಿದೆ. ಮುಸ್ಲಿಮರಿಗೆ ಮೀಸಲಾತಿ ಬೇಕು ಎಂದಷ್ಟೇ ಅವರು ಹೇಳುತ್ತಿಲ್ಲ. ಎಲ್ಲ ಮೀಸಲಾತಿಯೂ ಮುಸ್ಲಿಮರಿಗೆ ನೀಡಬೇಕು ಎಂದು ಹೇಳಿದ್ದಾರೆ’ ಎಂದರು. ‘ದನಗಳ ಮೇವು ತಿಂದ ಈ ನಾಯಕ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿದ್ದರು ಸುಪ್ರೀಂ ಕೋರ್ಟ್ ಕೂಡ ಭ್ರಷ್ಟಾಚಾರದ ಮೇಲೆ ಅವರನ್ನು ಜೈಲಿಗೆ ಕಳಿಸಿತ್ತು. ಈಗ ಅವರು ವೈದ್ಯಕೀಯ ಕಾರಣಕ್ಕಾಗಿ ಜಾಮೀನಿನ ಮೇಲೆ ಹೊರಬಂದಿದ್ದಾರೆ’ ಎಂದು ಲಾಲು ಬಗ್ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.