ನವದೆಹಲಿ (ಪಿಟಿಐ): ಮುಜಫ್ಫರ್‌ಪುರ ವಸತಿಗೃಹ ಪ್ರಕರಣದ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸಿಬಿಐಗೆ ಸುಪ್ರೀಂ ಕೋರ್ಟ್ ಮೂರು ತಿಂಗಳ ಗಡುವು ನೀಡಿದೆ.
ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಹಾಗೂ ಎಂ.ಆರ್. ಶಾ ಅವರನ್ನೊಳಗೊಂಡ ರಜಾಕಾಲದ ನ್ಯಾಯಪೀಠ ಈ ಸಂಬಂಧ ಸೋಮವಾರ ಆದೇಶ ನೀಡಿದೆ.
‘ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಘಟನೆಯ ವಿಡಿಯೊ ದೃಶ್ಯಾವಳಿಗಳ ಬಗ್ಗೆ ವಿಚಾರಣೆ ನಡೆಸಬೇಕು. ಬಾಲಕಿಯರಿಗೆ ಮಾದಕವಸ್ತು ನೀಡಿ ಬಳಿಕ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಲ್ಲಿ ಹೊರಗಿನವರ ಪಾತ್ರ ಇದೆಯೇ ಎನ್ನುವ ಬಗ್ಗೆ ತನಿಖೆಯಾಗಬೇಕು. ಹತ್ಯೆ ಆಯಾಮದಿಂದಲೂ ಪ್ರಕರಣದ ತನಿಖೆ ನಡೆಸಬೇಕು’ ಎಂದು ಸಿಬಿಐಗೆ ನ್ಯಾಯಪೀಠ ಸೂಚಿಸಿದೆ.
‘ವಸತಿಗೃಹ ನಡೆಸುತ್ತಿದ್ದಬ್ರಜೇಶ್ ಠಾಕೂರ್ ಹಾಗೂ ಆತನ ಸಹಚರರು 11 ಬಾಲಕಿಯರ ಹತ್ಯೆ ಮಾಡಿದ್ದಾರೆ. ಮುಜಫ್ಫರ್‌ಪುರದ ಸ್ಮಶಾನದಿಂದ ಮೂಳೆಗಳನ್ನು
ವಶಪಡಿಸಿಕೊಳ್ಳಲಾಗಿದೆ’ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸಿಬಿಐ ಉಲ್ಲೇಖಿಸಿತ್ತು.
ಎನ್‌ಜಿಒ ನಡೆಸುತ್ತಿದ್ದ ವಸತಿ ಗೃಹದಲ್ಲಿ ಹಲವು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್) ಬಿಡುಗಡೆ ಗೊಳಿಸಿದ ವರದಿಯೊಂದರಿಂದ 2018ರ ಏಪ್ರಿಲ್‌ನಲ್ಲಿಈ ವಿಷಯ ಬಹಿರಂಗಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.