ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ಬಿಹಾರ ಸಚಿವೆ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 19:46 IST
Last Updated 8 ಆಗಸ್ಟ್ 2018, 19:46 IST
ಮಂಜು ವರ್ಮಾ
ಮಂಜು ವರ್ಮಾ   

ಪಟ್ನಾ,ಬಿಹಾರ (ಪಿಟಿಐ): ಮುಜಫ್ಫರ್‌ಪುರ ಪುನರ್ವಸತಿ ಕೇಂದ್ರದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ಪತಿಯ ಹೆಸರು ಕೇಳಿಬಂದ ಕಾರಣ, ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ಅವರು ರಾಜೀನಾಮೆ ನೀಡಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ. ವರ್ಮಾ ತಲೆದಂಡಕ್ಕೆ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. 34 ಯುವತಿಯರು ಅತ್ಯಾಚಾರಕ್ಕೆ ಒಳಗಾಗಿರುವ ಪುನರ್ವಸತಿ ಕೇಂದ್ರಕ್ಕೆ ಸಚಿವರ ಪತಿ ನಿಯಮಿತವಾಗಿ ಭೇಟಿ ನೀಡುತ್ತಿದ್ದರು ಎಂಬ ಆರೋಪವಿದೆ.

ಪ್ರಮುಖ ಆರೋಪಿ ಬ್ರಜೇಶ್ ಠಾಕೂರ್ ಹಾಗೂ ಸಚಿವೆಯ ಪತಿ ಚಂದೇಶ್ವರ್ ವರ್ಮಾ ನಡುವೆ ಜನವರಿಯಿಂದ ಜೂನ್‌ವರೆಗೆ 17 ಬಾರಿ ದೂರವಾಣಿ ಸಂಭಾಷಣೆ ನಡೆದ ದಾಖಲೆ ಸಿಕ್ಕಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಂಭಾಷಣೆ ನಡೆಸಿದ್ದನ್ನು ಠಾಕೂರ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ADVERTISEMENT

ತಮ್ಮ ಜೊತೆಯಲ್ಲಿದ್ದಾಗ ಒಂದು ಬಾರಿ ಮಾತ್ರ ಪತಿಯು ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದರು ಎಂದು ಮಂಜು ವರ್ಮಾ ಸಮರ್ಥಿಸಿಕೊಂಡಿದ್ದರು. ಹಿಂದುಳಿದ ಕುಶ್ವಾಹ ಸಮುದಾಯಕ್ಕೆ ಸೇರಿರುವ ಕಾರಣ ಪ್ರಕರಣದಲ್ಲಿ ತಮ್ಮನ್ನು ಗುರಿಯಾಗಿಸಲಾಗಿದೆ ಎಂದೂ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.