ADVERTISEMENT

210 ಸೀಟುಗಳಿಗೆ ಎಂವಿಒ ಒಮ್ಮತ | BJPಯಿಂದ ತಪ್ಪು ಮಾಹಿತಿ ಪ್ರಚಾರ: ರಾವುತ್‌ ಆರೋಪ

ಪಿಟಿಐ
Published 21 ಅಕ್ಟೋಬರ್ 2024, 14:40 IST
Last Updated 21 ಅಕ್ಟೋಬರ್ 2024, 14:40 IST
ಸಂಜಯ್‌ ರಾವುತ್‌–ಪಿಟಿಐ ಚಿತ್ರ
ಸಂಜಯ್‌ ರಾವುತ್‌–ಪಿಟಿಐ ಚಿತ್ರ   

ಮುಂಬೈ: ‘ಮಹಾರಾಷ್ಟ್ರ ವಿಧಾನಸಭೆಯ 280 ಕ್ಷೇತ್ರಗಳ ಪೈಕಿ 210 ಕ್ಷೇತ್ರಗಳ ವಿಚಾರದಲ್ಲಿ ಮಹಾರಾಷ್ಟ್ರ ವಿಕಾಸ ಆಘಾಡಿಯು ಒಮ್ಮತಕ್ಕೆ ಬಂದಿದ್ದು, ಗಮನಾರ್ಹ ಸಾಧನೆಯಾಗಿದೆ’ ಎಂದು ಶಿವಸೇನಾದ (ಉದ್ಧವ್‌ ಬಣ) ರಾಜ್ಯಸಭಾ ಸಂಸದ ಸಂಜಯ್‌ ರಾವುತ್‌ ತಿಳಿಸಿದ್ದಾರೆ.

‘ಎಂವಿಎ ಒಕ್ಕೂಟವು ಮಹಾರಾಷ್ಟ್ರವನ್ನು ಲೂಟಿ ಮಾಡುತ್ತಿರುವ ಶಕ್ತಿಗಳನ್ನು ಮಣಿಸುವ ಗುರಿ ಹೊಂದಿದ್ದು, ಮಹಾಯುತಿ ಒಕ್ಕೂಟವು ಧೂಳೀಪಟವಾಗಲಿದೆ’ ಎಂದು ಮಾಧ್ಯಮಗಳ ಮುಂದೆ ಸೋಮವಾರ ವಿಶ್ವಾಸ ವ್ಯಕ್ತಪಡಿಸಿದರು.

ಶಿವಸೇನಾ ಉದ್ಧವ್‌ ಬಣವು ಎಂವಿಎ ಒಕ್ಕೂಟದಿಂದ ಹೊರಬಂದು, ಎಲ್ಲಾ 288 ಕ್ಷೇತ್ರಗಳಿಗೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಕೆಲವು ಸುದ್ದಿವಾಹಿನಿಗಳ ವರದಿಯ ಬೆನ್ನಲ್ಲೇ, ರಾವುತ್‌ ಈ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ಬಿಜೆಪಿಯೊಂದಿಗೆ ಶಿವಸೇನಾ (ಉದ್ಧವ್‌ ಬಣ) ಮತ್ತೆ ಮೈತ್ರಿ ಮಾಡಿಕೊಳ್ಳುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಫೋನ್‌ ಮಾಡಿ ಮಾತನಾಡಿದ್ದಾರೆ ಎಂಬ ಊಹಾಪೋಹಗಳನ್ನು ರಾವುತ್‌ ತಳ್ಳಿಹಾಕಿದರು.

‘ಬಿಜೆಪಿಯು ಸುಳ್ಳು ಮಾಹಿತಿಗಳನ್ನು ಹರಡುತ್ತಿದೆ. ಇಂತಹ ಕೆಲಸಗಳನ್ನು ಯಾರು ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಇಂತಹ ತಪ್ಪು ಮಾಹಿತಿಗಳನ್ನು ಹರಡುವುದರಲ್ಲಿ ಆ ಪಕ್ಷದ ಮುಖಂಡರು ನಿರತರಾಗಿದ್ದಾರೆ’ ಎಂದು ಅವರು ಆರೋಪಿಸಿದರು.

‘ಬಿಜೆಪಿ ಜತೆಗೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳೇ ಇಲ್ಲ. ದೇಶದ ಸಂವಿಧಾನಕ್ಕೆ ಅವಮಾನವೆಸಗಿ, ಮಹಾರಾಷ್ಟ್ರದ ಗೌರವಕ್ಕೆ ಬಿಜೆಪಿ ಧಕ್ಕೆ ತಂದಿದೆ. ಇಂತಹವರ ಜತೆಗೆ ಹೋಗುವ ಸಾಧ್ಯತೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.