ಮುಂಬೈ: ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತು ಮಹಾವಿಕಾಸ ಅಘಾಡಿ (ಎಂವಿಎ) ಮೈತ್ರಿ ಪಕ್ಷಗಳ ನಡುವೆ ಚರ್ಚೆ ಅಂತಿಮ ಹಂತದಲ್ಲಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ರಮೇಶ್ ಚೆನ್ನಿತ್ತಾಲ ಹೇಳಿದರು.
ಮಾಸಾಂತ್ಯದ ವೇಳೆಗೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು. ಸೀಟು ಹೊಂದಾಣಿಕೆ ಕುರಿತಂತೆ ಮೈತ್ರಿಪಕ್ಷಗಳ ನಡುವೆ ಯಾವುದೇ ಭಿನ್ನಮತವಿಲ್ಲ ಎಂದು ಇಲ್ಲಿ ಹೇಳಿದರು.
ಎಂವಿಎ ಮೈತ್ರಿಪಕ್ಷಗಳಾದ ಎನ್‌ಸಿಪಿಯ ಶರದ್ ಪವಾರ್ ಬಣ, ಶಿವಸೇನೆ (ಉದ್ಧವ್ ಬಣ), ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ ಬಹುಜನ ಅಘಾಡಿ ಮುಖಂಡರ ಜೊತೆ ಫೆ.27, 28ರಂದು ಮಾತುಕತೆ ನಡೆಯಲಿದೆ ಎಂದರು.
ಕಾಂಗ್ರೆಸ್ ಪಕ್ಷದ ಇಲ್ಲಿನ ಕಚೇರಿಯಲ್ಲಿ ನಡೆದ ಚುನಾವಣಾ ಸಮಿತಿ ಸಭೆಯ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಚೆನ್ನಿತ್ತಾಲ, ‘ಎಂವಿಎ ಸಧೃಢವಾಗಿದೆ. ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲು ಮೈತ್ರಿಯ ಎಲ್ಲ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ. ಸೀಟು ಹಂಚಿಕೆ ಕುರಿತು ಮುಖಂಡರ ನಡುವೆ ಮಾತುಕತೆ ನಡೆದಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.