ADVERTISEMENT

ಮಹಾರಾಷ್ಟ್ರ | MVA ಮೈತ್ರಿಕೂಟದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ: ಕಾಂಗ್ರೆಸ್‌

ಪಿಟಿಐ
Published 26 ಅಕ್ಟೋಬರ್ 2024, 4:23 IST
Last Updated 26 ಅಕ್ಟೋಬರ್ 2024, 4:23 IST
ಕಾಂಗ್ರೆಸ್‌ ಧ್ವಜ
ಕಾಂಗ್ರೆಸ್‌ ಧ್ವಜ   

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮಹಾ ವಿಕಾಸ್‌ ಅಘಾಡಿ (ಎಂವಿಎ) ಮೈತ್ರಿಕೂಟದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಇಂದು (ಶನಿವಾರ) ಸಂಜೆಯೊಳಗೆ ಸೀಟು ಹಂಚಿಕೆ ಅಂತಿಮವಾಗಲಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲು ಶುಕ್ರವಾರ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಪಕ್ಷ ಈ ಹೇಳಿಕೆ ನೀಡಿದೆ. ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಎಐಸಿಸಿ ಮಹಾರಾಷ್ಟ್ರದ ಉಸ್ತುವಾರಿ ರಮೇಶ್ ಚೆನ್ನಿತ್ತಲ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಮತ್ತು ಬಾಳಾಸಾಹೇಬ್ ಥೋರಟ್ ಸೇರಿದಂತೆ ಮಹಾರಾಷ್ಟ್ರದ ಇತರ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೆನ್ನಿತ್ತಲ, ‘ಮಹಾರಾಷ್ಟ್ರದ ಉಳಿದ ಸ್ಥಾನಗಳ ಕುರಿತು ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಚರ್ಚೆ ನಡೆಸಿದೆ. ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಹೊರಬೀಳಲಿದೆ. ಮಹಾ ವಿಕಾಸ್‌ ಅಘಾಡಿ ಒಗ್ಗಟ್ಟಿನಿಂದ ಸ್ಪರ್ಧಿಸುತ್ತಿದ್ದು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಕ್ಷಗಳ ನಡುವೆ ಮೈತ್ರಿ ಇದ್ದಾಗ ಸೀಟು ಹಂಚಿಕೆಯ ಕುರಿತು ಚರ್ಚೆಗಳು ನಡೆಯುತ್ತವೆ’ ಎಂದು ಅವರು ತಿಳಿಸಿದ್ದಾರೆ.

‘ಮಹಾರಾಷ್ಟ್ರದ ಜನರ ಕನಸುಗಳನ್ನು ನನಸು ಮಾಡಲು ನಾವು ಒಟ್ಟಾಗಿ ಹೋರಾಡುತ್ತೇವೆ. ಈ ಬಾರಿ ಎಂವಿಎ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸ ನಮಗಿದೆ. ರಾಜ್ಯದಲ್ಲಿರುವ ಆಡಳಿತಾರೂಢ ಭಷ್ಟ್ರ ಸರ್ಕಾರವನ್ನು ಹೊರಹಾಕಲು ಜನರು ಸಿದ್ಧರಾಗಿದ್ದಾರೆ’ ಎಂದು ಚೆನ್ನಿತ್ತಲ ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 48 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಗುರುವಾರ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.