ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನನ್ನನ್ನು ಕಾನೂನುಬಾಹಿರವಾಗಿ ಬಂಧಿಸಿದ್ದಾರೆ ಎಂದು ಬಿಆರ್‌ಎಸ್ ನಾಯಕಿ ಹಾಗೂ ವಿಧಾನಪರಿಷತ್ ಸದಸ್ಯೆ ಕೆ. ಕವಿತಾ ಆರೋಪಿಸಿದ್ದಾರೆ.
ಇ.ಡಿ ಅಧಿಕಾರಿಗಳು ಕೆ. ಕವಿತಾ ಅವರನ್ನು ಇಂದು (ಶನಿವಾರ) ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್ ಎದುರು ಹಾಜರುಪಡಿಸಿದ್ದಾರೆ.
ಇದೇ ವೇಳೆ ಕವಿತಾ ಪರ ವಾದ ಮಂಡಿಸಿದ ವಕೀಲ ವಿಕ್ರಮ್ ಚೌಧರಿ, ‘ಕವಿತಾ ಅವರನ್ನು ಕಾನೂನುಬಾಹಿರವಾಗಿ ಬಂಧಿಸುವ ಮೂಲಕ ಇ.ಡಿ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅವರು (ಇ.ಡಿ ಅಧಿಕಾರಿಗಳು) ಸುಪ್ರೀಂ ಕೋರ್ಟ್ ಆದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ’ ಎಂದು ಹೇಳಿದ್ದಾರೆ.
ಹೈದರಾಬಾದ್‌ನಲ್ಲಿರುವ ಕವಿತಾ ಅವರ ನಿವಾಸದಲ್ಲಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಶೋಧ ನಡೆಸಿ, ನಂತರ ಅವರನ್ನು ಬಂಧಿಸಿದರು ಎಂದು ಇ.ಡಿ ಮೂಲಗಳು ಹೇಳಿವೆ.
‘ಕವಿತಾ ಅವರ ಬಂಧನ ಕಾನೂನುಬಾಹಿರ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ನೈತಿಕಸ್ಥೈರ್ಯ ಕುಸಿಯುವಂತೆ ಮಾಡಲು ಬಿಜೆಪಿ ಹೆಣೆದಿರುವ ರಾಜಕೀಯ ಪಿತೂರಿಯ ಭಾಗವಾಗಿದೆ’ ಎಂದು ಬಿಆರ್‌ಎಸ್ ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್‌ಗೆ ಭೇಟಿ ಕೊಟ್ಟು ರೋಡ್‌ಶೋ ನಡೆಸಿದ್ದಾರೆ. ಅದರ ಬೆನ್ನಿಗೇ ಬಿಆರ್‌ಎಸ್ ವರಿಷ್ಠ ಕೆ. ಚಂದ್ರಶೇಖರ್ ರಾವ್ ಪುತ್ರಿ ಕವಿತಾ ಅವರ ಬಂಧನವಾಗಿದೆ. ಇದು ಬಿಆರ್‌ಎಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.