ADVERTISEMENT

ರಾಯ್‌ಬರೇಲಿ ಜನರ ಒಳಿತಿಗಾಗಿಯೇ ಗಾಂಧಿ ಕುಟುಂಬ ಶ್ರಮಿಸಿದೆ: ರಾಹುಲ್ ಗಾಂಧಿ

ಪಿಟಿಐ
Published 13 ಮೇ 2024, 11:27 IST
Last Updated 13 ಮೇ 2024, 11:27 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ರಾಯ್‌ಬರೇಲಿ (ಉತ್ತರ ಪ್ರದೇಶ): ಗಾಂಧಿ ಕುಟುಂಬ ಯಾವಾಗಲೂ ರಾಯ್‌ಬರೇಲಿ ಕ್ಷೇತ್ರದ ಜನರ ಒಳಿತಿಗಾಗಿ ಕೆಲಸ ಮಾಡಿದೆಯೇ ಹೊರತು, ಪ್ರಧಾನಿ ನರೇಂದ್ರ ಮೋದಿ ಅವರ ರೀತಿ ಅದಾನಿ ಮತ್ತು ಅಂಬಾನಿ ಅವರ ಹಿತಾಸಕ್ತಿಗಾಗಿ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ರಾಯ್‌ಬರೇಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ತಮ್ಮ ಮೊದಲ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಯ್‌ಬರೇಲಿ ಕ್ಷೇತ್ರದ ಜನರೊಂದಿಗೆ ಗಾಂಧಿ ಕುಟುಂಬ ಗಾಢ ಸಂಪರ್ಕವನ್ನು ಹೊಂದಿರುವ ಕಾರಣ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿರುವುದಾಗಿ ಹೇಳಿದರು.

ADVERTISEMENT

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್‌, ‘ದೇಶದ ಸುಮಾರು 22 ರಿಂದ 25 ದೊಡ್ಡ ಕೈಗಾರಿಕೋದ್ಯಮಿಗಳ ಸುಮಾರು ₹16 ಲಕ್ಷ ಕೋಟಿ ಮೊತ್ತದ ಸಾಲವನ್ನು ಮನ್ನಾ ಮಾಡಲಾಗಿದೆ. ಇದು 24 ವರ್ಷಗಳಿಂದ ನರೇಗಾ ಯೋಜನೆ ಅಡಿಯಲ್ಲಿ ಮಂಜೂರು ಮಾಡಲಾದ ಹಣಕ್ಕೆ ಸಮನಾಗಿದೆ’ ಎಂದು ತಿಳಿಸಿದರು.

ರಾಯ್‌ಬರೇಲಿ ಜನರ ಜೀವನವನ್ನು ಸುಧಾರಿಸಲು ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಎಲ್ಲರೂ ಶ್ರಮಿಸಿದ್ದಾರೆ ಎಂದು ರಾಹುಲ್‌ ಹೇಳಿದರು.

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು 2004ರಿಂದ ರಾಯ್‌ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್‌ ಪ್ರತಾಪ್‌ ಅವರನ್ನು ಪರಾಭವಗೊಳಿಸಿದ್ದರು.

‘ಮಾಧ್ಯಮಗಳು ರೈತರು ಮತ್ತು ನಿರುದ್ಯೋಗಿ ಯುವಕರು ಎದುರಿಸುತ್ತಿರುವ ಸಮಸ್ಯೆಗಳನ್ನು ತೋರಿಸುವ ಬದಲು ದೊಡ್ಡ ಕೈಗಾರಿಕೋದ್ಯಮಿಗಳ ಕುಟುಂಬಗಳ ಮದುವೆ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆ ನೀಡುತ್ತಿವೆ’ ಎಂದು ರಾಹುಲ್‌ ಗಾಂಧಿ ಕಿಡಿಕಾರಿದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ‘ಮಹಾಲಕ್ಷ್ಮಿ’ ಯೋಜನೆ ಅಡಿಯಲ್ಲಿ ಪ್ರತಿ ಬಡ ಕುಟುಂಬಗಳ ಒಬ್ಬ ಮಹಿಳೆಯ ಬ್ಯಾಂಕ್‌ ಖಾತೆಗೆ ವಾರ್ಷಿಕ 1 ಲಕ್ಷ ರೂಪಾಯಿಯನ್ನು ಜಮೆ ಮಾಡಲಿದೆ. ಸಣ್ಣ ರೈತರ ಸಾಲ ಮನ್ನಾ ಮಾಡಲಿದೆ. ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಗೊಳಿಸುತ್ತದೆ ಎಂದು ಹೇಳಿದರು.

5ನೇ ಹಂತದಲ್ಲಿ ಮೇ 20ರಂದು ರಾಯ್‌ಬರೇಲಿ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ರಾಹುಲ್‌ ಗಾಂಧಿ ಅವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ದಿನೇಶ್‌ ಪ್ರತಾಪ್‌ ಸಿಂಗ್‌ ಅವರು ಸ್ಪರ್ಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.