ಪಣಜಿ: ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಸತ್ತಿದ್ದು ನನ್ನ ಶಾಪದಿಂದ ಎಂದಿದ್ದರು ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಠಾಕೂರ್. ಪ್ರಗ್ಯಾ ಹೇಳಿಕೆ ಬಗ್ಗೆ ಕರ್ಕರೆ ಪುತ್ರಿ ಪ್ರತಿಕ್ರಿಯಿಸಿದ್ದು, ನನ್ನಪ್ಪ ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ಕಲಿಸಿದ್ದರು ಎಂದಿದ್ದಾರೆ.
ಹೇಮಂತ್ ಕರ್ಕರೆ ಅವರ ಪುತ್ರಿ ಜೂಯಿ ನವಾರೆ ಅಮೆರಿಕದಲ್ಲಿ ವಾಸವಾಗಿದ್ದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಈ ರೀತಿ ಹೇಳಿದ್ದಾರೆ.
ನಮ್ಮ ಅಪ್ಪ ಸಾವಿನ ಹೊತ್ತಲ್ಲಿಯೂ ತಮ್ಮ ನಗರ ಮತ್ತು ದೇಶವನ್ನು ಕಾಪಾಡಲು ಯತ್ನಿಸಿದರು.ಅವರ ಜೀವ ಮತ್ತು ಕುಟುಂಬಕ್ಕಿಂತ ಅವರಿಗೆ ಕರ್ತವ್ಯ ಮುಖ್ಯವಾಗಿತ್ತು. ಪ್ರಜ್ಞಾ ನನ್ನ ಅಪ್ಪನ ಬಗ್ಗೆ ಹೇಳಿದ ವಿಷಯ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಯಿತು.ನಾನು ಆಕೆಯ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ, ನಾನು ನನ್ನಪ್ಪ ಹೇಮಂತ್ ಕರ್ಕರೆ ಬಗ್ಗೆ ಮಾತ್ರ ಮಾತನಾಡುತ್ತೇನೆ. ಅವರೊಬ್ಬ ರೋಲ್ ಮಾಡೆಲ್ ಆಗಿದ್ದರು, ಅವರ ಹೆಸರನ್ನು ಗೌರವದಿಂದ ಹೇಳಬೇಕು.
ಭಯೋತ್ಪಾದನೆಗೆ ಧರ್ಮ ಅಲ್ಲ ಎಂದು ಅವರು ಕಲಿಸಿದ್ದರು. ಇನ್ನೊಬ್ಬರನ್ನು ಕೊಲ್ಲಲು ಯಾವ ಧರ್ಮವೂ ಹೇಳಿಕೊಡುವುದಿಲ್ಲ.ಇಂಥಾ ವಿಚಾರಧಾರೆಗಳನ್ನು ಕಿತ್ತೊಗೆಯಬೇಕು. 24 ವರ್ಷಗಳ ಅವರ ಪೊಲೀಸ್ ಸೇವಾ ಅವಧಿಯಲ್ಲಿಅವರು ಎಲ್ಲರಿಗೂ ಸಹಾಯ ಮಾಡಿದ್ದರು. ಸಾವಿನ ಹೊತ್ತಲ್ಲಿಯೂ ಅವರು ದೇಶ ರಕ್ಷಣೆ ಮಾಡಲು ಯತ್ನಿಸಿದ್ದರು. ಕುಟುಂಬ ಮತ್ತು ಪ್ರಾಣಕ್ಕಿಂತ ಹೆಚ್ಚಾಗಿ ಅವರು ಅವರ ಕರ್ತವ್ಯವನ್ನುಪ್ರೀತಿಸಿದ್ದರು. ಅದನ್ನು ನೆನಪಿಡಿ ಎಂದಿದ್ದಾರೆ.
ಕರ್ಕರೆ ಅವರ ಮೂವರ ಮಕ್ಕಳಲ್ಲಿ ಹಿರಿಯವಳಾದ ನವಾರೆ (38) ತಮ್ಮ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.