ಸೊಲ್ಲಾಪುರ (ಪಿಟಿಐ): ‘ಪ್ರಾಮಾಣಿಕತೆ ಹಾಗೂ ಉತ್ತಮ ಆಡಳಿತ ಸೇರಿದಂತೆ ರಾಮನ ತತ್ವಗಳಿಂದ ನನ್ನ ಸರ್ಕಾರ ಪ್ರೇರಿತವಾಗಿದೆ. ಹೀಗಾಗಿ, ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನಡೆಯುವ ಜ.22ರಂದು ಎಲ್ಲರೂ ‘ರಾಮ ಜ್ಯೋತಿ’ ಬೆಳಗಿಸಿ. ಆ ಬೆಳಕು ದೇಶದ ಬಡತನವನ್ನು ನಿವಾರಿಸಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.
ಇಲ್ಲಿ ₹2,000 ಕೋಟಿ ಮೊತ್ತದ ಎಂಟು ‘ಅಮೃತ್’ (ಪುನರುಜ್ಜೀವನ ಮತ್ತು ನಗರ ಪರಿವರ್ತನೆಗಾಗಿ ಅಟಲ್ ಮಿಷನ್) ಯೋಜನೆಗೆ ಅಡಿಗಲ್ಲು ಹಾಕಿದ ಪ್ರಧಾನಿ ಮೋದಿ, ನಂತರ ನಡೆದ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
‘ವಿಶ್ವದ ಮೂರು ಪ್ರಬಲ ಆರ್ಥಿಕ ಶಕ್ತಿಗಳ ಸಾಲಿನಲ್ಲಿ ಭಾರತವನ್ನೂ ಸೇರಿಸುವುದು ‘ಮೋದಿ ಗ್ಯಾರಂಟಿ’ ಆಗಿರಲಿದೆ. ಇದನ್ನು ಜನರ ಆಶೀರ್ವಾದದೊಂದಿಗೆ ನನ್ನ ಮೂರನೇ ಆಡಳಿತಾವಧಿಯಲ್ಲಿ ಸಾಧಿಸಲಾಗುವುದು’ ಎಂದು ಭರವಸೆ ನೀಡಿದರು.
‘ಮೋದಿ ಗ್ಯಾರಂಟಿ ಅಂದರೆ, ಸಾಕಾರಗೊಳ್ಳುವ ಗ್ಯಾರಂಟಿ. ಅಂತಹ ಬದ್ಧತೆಯನ್ನು ರಾಮ ನಮಗೆ ಕಲಿಸಿದ್ದಾನೆ. ಬಡವರ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ನಾವು ಹಾಕಿಕೊಂಡ ಗುರಿಗಳನ್ನು ಸಾಧಿಸುತ್ತೇವೆ’ ಎಂದು ಅವರು ಹೇಳಿದರು.
ಮಹಾರಾಷ್ಟ್ರದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆ (ಪಿಎಂಎವೈ ಅರ್ಬನ್) ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ 90,000 ಮನೆಗಳನ್ನು ಮತ್ತು ಕೈಮಗ್ಗ ಕಾರ್ಮಿಕರಿಗೆ, ಚಿಂದಿ ಆಯುವವರು, ಬೀಡಿ ಕಟ್ಟುವವರಿಗಾಗಿ ರಾಯನಗರ ಹೌಸಿಂಗ್ ಸೊಸೈಟಿ ನಿರ್ಮಿಸಿರುವ 15 ಸಾವಿರ ಮನೆಗಳನ್ನು ಅವರು ಉದ್ಘಾಟಿಸಿದರು.
‘ಇಂಥ ಮನೆಯನ್ನು ಹೊಂದಬೇಕು ಎಂದು ನಾನು ಚಿಕ್ಕವನಿದ್ದಾಗ ಕನಸು ಕಂಡಿದ್ದೆ’ ಎಂದು ಹೇಳಿದ ಮೋದಿ, ಈ ವೇಳೆ ಗದ್ಗದಿತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.