ADVERTISEMENT

ಜ. 22ರಂದು ಮನೆಯಲ್ಲಿ ದೀಪ ಹಚ್ಚಿದರೆ ಬಡತನ ನಿರ್ಮೂಲನೆಗೆ ಪ್ರೇರಣೆ: PM ಮೋದಿ

ಪಿಟಿಐ
Published 19 ಜನವರಿ 2024, 12:39 IST
Last Updated 19 ಜನವರಿ 2024, 12:39 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಸೊಲ್ಲಾಪುರ: ‘ನಮ್ಮ ಸರ್ಕಾರವು ಭಗವಾನ್ ರಾಮನ ಆದರ್ಶನಗಳಿಂದ ಪ್ರೇರಣೆ ಪಡೆದಿದೆ. ಹೀಗಾಗಿ ಪ್ರತಿಯೊಬ್ಬರೂ ಜ. 22ರಂದು ರಾಮ ಜ್ಯೋತಿಯನ್ನು ಬೆಳಗಬೇಕು. ಅದು ಅವರ ಬದುಕಿನಲ್ಲಿನ ಬಡತ ನಿರ್ಮೂಲನೆಗೆ ಪ್ರೇರಣೆಯಾಗಬೇಕು’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ₹ 2 ಸಾವಿರ ಕೋಟಿ ಮೊತ್ತದ 8 ಅಮೃತ (ಅಟಲ್ ಮಿಷನ್‌ ನಗರ ರೂಪಾಂತರ ಹಾಗೂ ಪುನರ್‌ನವೀಕರಣ ಯೋಜನೆ) ಯೋಜನೆಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ADVERTISEMENT

‘ಮೂರನೇ ಬಾರಿ ಜನಾಶೀರ್ವಾದದೊಂದಿಗೆ ಮೋದಿ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗುವುದು. ಆ ಮೂಲಕ ಜಗತ್ತಿನ ಅಗ್ರ ಮೂರು ಆರ್ಥಿಕ ಶಕ್ತಿಗಳಲ್ಲಿ ಭಾರತಕ್ಕೆ ಸ್ಥಾನ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

‘ಮೋದಿಯ ಗ್ಯಾರಂಟಿ ಎಂದರೆ, ಗ್ಯಾರಂಟಿ ಸಂಪೂರ್ಣ ಜಾರಿ ಎಂದರ್ಥ. ಬದ್ಧತೆಗಳನ್ನು ಗೌರವಿಸಲು ರಾಮ ನಮಗೆ ಕಲಿಸಿದ್ದಾರೆ. ಬಡವರ ಕಲ್ಯಾಣಕ್ಕಾಗಿ ನಾವು ಹಾಕಿಕೊಂಡಿರುವ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ನಾವು ಹಾಕಿಕೊಂಡಿದ್ದೇವೆ’ ಎಂದು ಮೋದಿ ಹೇಳಿದ್ದಾರೆ.

‘ತನ್ನ ಜನರ ಸಂತೋಷಕ್ಕಾಗಿ ಭಗವಾನ್ ರಾಮ ಕೆಲಸ ಮಾಡಿದ್ದಾರೆ. ನನ್ನ ಸರ್ಕಾರವೂ ಬಡ ಜನರ ಸಬಲೀಕರಣಕ್ಕೆ ಮುಡಿಪಾಗಿದೆ. ಅವರ ಕಠಿಣ ಪರಿಸ್ಥಿತಿಯನ್ನು ದೂರಗೊಳಿಸಲು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಇದರ ಭಾಗವಾಗಿಯೇ ಶೌಚಾಲಯ ಹಾಗೂ ಮನೆಗಳನ್ನು ನಿರ್ಮಿಸಿದ್ದೇವೆ. ಮೋದಿಯ ‘ಮರ್ಯಾದೆಯ ಗ್ಯಾರಂಟಿ’ಯಾಗಿ 10 ಕೋಟಿ ಶೌಚಾಲಯ ಮತ್ತು 4 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ’ ಎಂದು ಹೇಳಿದರು.

‘‘ಹಿಂದೆ ಅರ್ಧ ರೊಟ್ಟಿ ತಿನ್ನೋಣ’ ಎಂಬ ಘೋಷಣೆ ಇತ್ತು. ಮೋದಿ ಗ್ಯಾರೆಂಟಿಯಲ್ಲಿ ಪ್ರತಿಯೊಬ್ಬರೂ ಪೂರ್ಣ ರೊಟ್ಟಿಯನ್ನು ತಿನ್ನುವಂತಾಗಲಿದೆ. ಹಿಂದಿನ ಸರ್ಕಾರದ ನಿಯತ್ತು, ನೀತಿ ಮತ್ತು ನಿಷ್ಠೆ ಸ್ಪಷ್ಟವಾಗಿರಲಿಲ್ಲ. ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರವು ಒಟ್ಟು ₹ 30 ಲಕ್ಷ ಕೋಟಿಯನ್ನು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಸಿದೆ. ಇದರಿಂದಾಗಿ 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ’ ಎಂದು ಪ್ರಧಾನಿ ಹೇಳಿದರು.

‘ಕಳೆದ ಹಲವು ವರ್ಷಗಳಿಂದ ಪುಟ್ಟ ಕುಟೀರದಲ್ಲಿ ರಾಮನ ಪೂಜೆ ನಡೆಯುತ್ತಿದೆ ಎಂಬ ನೋವು ಇನ್ನು ಮುಂದೆ ಇರದು. ಜ. 22ರಂದು ರಾಮಮಂದಿರದಲ್ಲಿ ಭಗವಾನ್ ರಾಮ ವಿರಾಜಮಾನನಾಗಿ ನೆಲೆ ನಿಲ್ಲಲಿದ್ದಾನೆ’ ಎಂದರು.

ಮುಖ್ಯಮಂತ್ರಿ ಏಕನಾಥ ಶಿಂಧೆ, ಅಜಿತ್ ಪವಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.