ಕೋಲ್ಕತ್ತ: ‘ಸಂಕಷ್ಟದಿಂದ ಪಾರಾಗಲು ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ನೆರವಾಗಲಿದ್ದಾರೆ ಎಂಬ ಬಲವಾದ ಭಾವನೆ ನನ್ನದು’ ಎಂದು ‘ರಾ’ (ಆರ್‌ಎಡಬ್ಲ್ಯು) ಮಾಜಿ ಮುಖ್ಯಸ್ಥ ಅಮರಜಿತ್ ಸಿಂಗ್ ದುಲತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಕಳೆದ ಹಲವು ತಿಂಗಳಿನಿಂದ ರಾಜಕೀಯ ಅಸ್ಥಿರತೆಯಿಂದಾಗಿ ಪಾಕಿಸ್ತಾನ ನಲುಗಿದೆ. ಇಂಥ ಸಮಯದಲ್ಲಿ ಆ ರಾಷ್ಟ್ರದ ಬಗ್ಗೆ ಮೋದಿ ಅವರು ಹೊಂದಿರುವ ಮುನಿಸು ಕೂಡ ತಣಿಯಲಿದೆ. ಈ ವರ್ಷವೇ ಅವರು ಪಾಕಿಸ್ತಾನಕ್ಕೆ ಸಹಾಯಹಸ್ತ ಚಾಚುವರು ಎಂಬ ವಿಶ್ವಾಸವನ್ನೂ ಹೊಂದಿರುವೆ’ ಎಂದು ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ‘ಈ ಕುರಿತು ನನಗೆ ಯಾರೂ ಮಾಹಿತಿ ನೀಡಿಲ್ಲ. ನನ್ನ ಮನದಾಳದ ಮಾತುಗಳಿವು’ ಎಂದಿದ್ದಾರೆ.
‘ಪ್ರತಿಯೊಂದು ಸಂದರ್ಭವೂ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಉತ್ತಮ ಸಮಯವೇ ಆಗಿದೆ. ನಮ್ಮ ನೆರೆ ರಾಷ್ಟ್ರಗಳೊಂದಿಗೆ ನಾವು ಮಾತುಕತೆ ನಡೆಸುತ್ತಲೇ ಇರಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.
‘ಪಾಕಿಸ್ತಾನದೊಂದಿಗಿನ ಸಂಬಂಧ ಸುಧಾರಣೆಗೆ ನಡೆಸುವ ಮಾತುಕತೆ ಕೇವಲ ರಾಜತಾಂತ್ರಿಕ ಮಟ್ಟದಲ್ಲಿ ಇದ್ದರೆ ಸಾಲದು. ವಿವಿಧ ಸ್ತರದ ಜನರ ಭಾಗವಹಿಸುವಿಕೆಯೂ ಮುಖ್ಯ’ ಎಂದು ಹೇಳಿದ್ದಾರೆ.
‘ಇರಾನ್, ರಷ್ಯಾ ಹಾಗೂ ಚೀನಾ ನಡುವಿನ ಬಾಂಧವ್ಯ ಗಟ್ಟಿಗೊಳ್ಳುತ್ತಿರುವುದು ಅಪಾಯಕಾರಿ. ಹೀಗಾಗಿ ನೆರೆ ದೇಶಗಳೊಂದಿಗಿನ ನಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಬೇಕು’ ಎಂದು ದುಲತ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.