ADVERTISEMENT

ನಾನು ಭಯೋತ್ಪಾದಕನಲ್ಲ: ಅರವಿಂದ ಕೇಜ್ರಿವಾಲ್‌ ಸಂದೇಶ

ಪಿಟಿಐ
Published 16 ಏಪ್ರಿಲ್ 2024, 13:01 IST
Last Updated 16 ಏಪ್ರಿಲ್ 2024, 13:01 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ‘ನನ್ನ ಹೆಸರು ಅರವಿಂದ ಕೇಜ್ರಿವಾಲ್‌, ನಾನು ಭಯೋತ್ಪಾದಕನಲ್ಲ’ ಎಂದು ತಿಹಾರ್‌ ಜೈಲಿನಿಂದ ದೆಹಲಿ ಮುಖ್ಯಮಂತ್ರಿ ದೇಶದ ಜನರಿಗೆ ಸಂದೇಶ ಕಳುಹಿಸಿದ್ದಾರೆ ಎಂದು ಎಎಪಿ ನಾಯಕ ಸಂಜಯ್‌ ಸಿಂಗ್ ಮಂಗಳವಾರ ಹೇಳಿದರು.

ಬಿಜೆಪಿಯು ದುರುದ್ದೇಶ ಮತ್ತು ಸೇಡಿನಿಂದ ಕೇಜ್ರಿವಾಲ್‌ ಅವರನ್ನು ಮಣಿಸಲು ಪ್ರಯತ್ನಿಸುತ್ತಿದೆ. ಆದರೆ ಈ ರೀತಿಯ ಯತ್ನಗಳಿಂದ ಅವರು ಇನ್ನಷ್ಟು ಬಲಶಾಲಿಯಾಗುತ್ತಾರೆ ಎಂದು ಸಿಂಗ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಿಹಾರ್‌ ಜೈಲಿನಲ್ಲಿರುವ ‘ಕುಖ್ಯಾತ ಕ್ರಿಮಿನಲ್‌’ ಒಬ್ಬರಿಗೆ ಅವರ ಪತ್ನಿ ಮತ್ತು ವಕೀಲರನ್ನು ಬ್ಯಾರಕ್‌ನಲ್ಲಿ ಭೇಟಿಯಾಗಲು ಅನುಮತಿ ನೀಡಲಾಗಿತ್ತು. ಆದರೆ, ಕೇಜ್ರಿವಾಲ್‌ ಅವರನ್ನು ಪಂಜಾಬ್‌ನ ಮುಖ್ಯಮಂತ್ರಿ ಭಗವಂತ ಮಾನ್‌ ಅವರು ಭೇಟಿಯಾದಾಗ ಅಡ್ಡವಾಗಿ ಗಾಜಿನ ಗೋಡೆ ಇತ್ತು ಎಂದು ಸಿಂಗ್‌ ಬೇಸರ ವ್ಯಕ್ತಪಡಿಸಿದರು.

ADVERTISEMENT

ಜೈಲಿನಲ್ಲಿ ತನ್ನನ್ನು ಈ ರೀತಿ ನೋಡಿಕೊಳ್ಳುತ್ತಿರುವುದರಿಂದ ನೊಂದಿರುವ ಕೇಜ್ರಿವಾಲ್‌ ಅವರು ದೇಶದ ಜನರಿಗೆ ‘ನನ್ನ ಹೆಸರು ಅರವಿಂದ ಕೇಜ್ರಿವಾಲ್ ಮತ್ತು ನಾನು ಭಯೋತ್ಪಾದಕನಲ್ಲ’ ಎಂದು ಸಂದೇಶ ಕಳುಹಿಸಿದ್ದಾರೆ ಎಂದರು.

2010ರಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅಭಿನಯದ ‘ಮೈ ನೇಮ್‌ ಇಸ್‌ ಖಾನ್‌’ ಚಿತ್ರ ಬಿಡುಗಡೆಯಾಗಿತ್ತು. ಅದರಲ್ಲಿ ಖಾನ್‌ ಅವರು ‘ಮೈ ನೇಮ್‌ ಇಸ್‌ ಖಾನ್‌ ಮತ್ತು ನಾನು ಭಯೋತ್ಪಾದಕನಲ್ಲ’ ಎಂದು ಅವರು ಹೇಳಿದ್ದರು. ಇದೀಗ ದೆಹಲಿ ಮುಖ್ಯಮಂತ್ರಿಯೂ ಅದೇ ದಾಟಿಯಲ್ಲಿ ಸಂದೇಶ ರವಾನಿಸಿದ್ದಾರೆ.

ದೆಹಲಿ ಅಬಕಾರಿ ನೀತಿಯೊಂದಿಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಳೆದ ತಿಂಗಳು ಜೈಲಿನಿಂದ ಹೊರಬಂದಿರುವ ಸಿಂಗ್‌, ‘ತಿಹಾರ್ ಜೈಲು ಸಂಖ್ಯೆ 2ರಲ್ಲಿ ಕುಖ್ಯಾತ ಕ್ರಿಮಿನಲ್‌ ತನ್ನ ವಕೀಲ ಮತ್ತು ಪತ್ನಿಯನ್ನು ಬ್ಯಾರಕ್‌ನಲ್ಲಿಯೇ ಭೇಟಿಯಾಗುತ್ತಾರೆ. ಜೈಲಿನ ಕಚೇರಿಯಲ್ಲಿ ಇತರ ಕೈದಿಗಳ ಮಾತುಕತೆಗಳು ನಡೆಯುತ್ತವೆ’ ಎಂದು ಆರೋಪಿಸಿದರು. ಆದರೆ ಅವರು ಯಾರೊಬ್ಬರ ಹೆಸರನ್ನೂ ಉಲ್ಲೇಖಿಸಲಿಲ್ಲ.

ಜೈಲಿನಲ್ಲಿನ ಕೈದಿಗಳ ನಡುವೆ ಯಾವುದೇ ರೀತಿಯ ಭೇದ ಅಥವಾ ವ್ಯತ್ಯಾಸ ಮಾಡುತ್ತಿಲ್ಲ. ಜೈಲು ಕೈಪಿಡಿಯಲ್ಲಿ ಇರುವಂತೆ ಪ್ರತಿ ಕೈದಿಯ ಮೂಲಭೂತ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲಾಗಿದೆ. ಯಾರಿಗೂ ವಿಶೇಷ ಅವಕಾಶ ಅಥವಾ ಸವಲತ್ತನ್ನು ನೀಡಿಲ್ಲ ಎಂದು ಪೊಲೀಸ್‌ ಮಹಾ ನಿರ್ದೇಶಕ (ಜೈಲು) ಸಂಜಯ್‌ ಬನಿವಾಲ್‌ ಸೋಮವಾರ ಪ್ರತಿಕ್ರಿಯಿಸಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.