ADVERTISEMENT

ಸನ್ನದ್ಧ ಸೇನೆಯೇ ಆದ್ಯತೆ: ನೂತನ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ

ಗೌರವ ವಂದನೆ ಸ್ವೀಕಾರ ಕಾರ್ಯಕ್ರಮದ ಬಳಿಕ ಸೇನೆಯ ನೂತನ ಮುಖ್ಯಸ್ಥರ ಮಾತು

​ಪ್ರಜಾವಾಣಿ ವಾರ್ತೆ
Published 1 ಮೇ 2022, 15:21 IST
Last Updated 1 ಮೇ 2022, 15:21 IST
ವಾಯುಪಡೆ ಮುಖ್ಯಸ್ಥ ವಿ.ಆರ್‌. ಚೌಧರಿ, ಭೂಸೇನೆಯ ಮುಖ್ಯಸ್ಥ ಮನೋಜ್‌ ಪಾಂಡೆ ಮತ್ತು ನೌಕಾಪಡೆಯ ಮುಖ್ಯಸ್ಥ ಆರ್‌. ಹರಿಕುಮಾರ್‌ ಅವರು ಗೌರವ ವಂದನೆ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡರು ಪಿಟಿಐ ಚಿತ್ರ
ವಾಯುಪಡೆ ಮುಖ್ಯಸ್ಥ ವಿ.ಆರ್‌. ಚೌಧರಿ, ಭೂಸೇನೆಯ ಮುಖ್ಯಸ್ಥ ಮನೋಜ್‌ ಪಾಂಡೆ ಮತ್ತು ನೌಕಾಪಡೆಯ ಮುಖ್ಯಸ್ಥ ಆರ್‌. ಹರಿಕುಮಾರ್‌ ಅವರು ಗೌರವ ವಂದನೆ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡರು ಪಿಟಿಐ ಚಿತ್ರ   

ನವದೆಹಲಿ: ಸದ್ಯದ ಹಾಗೂ ಭವಿಷ್ಯದ ಭದ್ರತಾ ಅಪಾಯಗಳನ್ನು ಎದುರಿಸುವ ದಿಸೆಯಲ್ಲಿ ಸೇನೆಯನ್ನು ಗರಿಷ್ಠ ಮಟ್ಟದ ಕಾರ್ಯಾಚರಣೆ ಸನ್ನದ್ಧ ಸ್ಥಿತಿಯಲ್ಲಿ ಇರಿಸುವುದೇ ತಮ್ಮ ಆದ್ಯತೆಯಾಗಿದೆ ಎಂದು ಸೇನೆಯನೂತನ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಭಾನುವಾರ ಹೇಳಿದ್ದಾರೆ.

ಪೂರ್ವಲಡಾಖ್‌ನಲ್ಲಿ ಚೀನಾದಿಂದ ಎದುರಾಗಿರುವ ಬಿಕ್ಕಟ್ಟು, ಜಮ್ಮು– ಕಾಶ್ಮೀರದಲ್ಲಿ ಗಡಿಯಾಚೆಗಿನ ಭಯೋತ್ಪಾದನಾ ಚಟುವಟಿಕೆ ಸವಾಲುಗಳು ಎದುರಾಗಿರುವ ಈ ಸಮಯದಲ್ಲಿ ಪಾಂಡೆ ಅವರ ಈ ಮಾತು ಮಹತ್ವ ಪಡೆದಿದೆ.

ಅಧಿಕಾರ ಸ್ವೀಕರಿಸಿದ ಮರುದಿನ ಮಾತನಾಡಿದ ಅವರು, ‘ಜಾಗತಿಕ ಮಟ್ಟದಲ್ಲಿ ಭೌಗೋಳಿಕ, ರಾಜಕೀಯ ಪರಿಸ್ಥಿತಿಗಳು ತ್ವರಿತಗತಿಯಲ್ಲಿ ಬದಲಾಗುತ್ತಿದೆ. ಅದರ ಹಲವು ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ’ ಎಂದರು. ನೌಕಾಪಡೆ ಹಾಗೂ ವಾಯುಪಡೆಗಳ ಜೊತೆಗೂಡಿ ಸೇನಾಪಡೆಯು ಎಂತಹ ಸವಾಲಿನ ಪರಿಸ್ಥಿತಿಯನ್ನಾದರೂ ಜಂಟಿಯಾಗಿ ಎದುರಿಸಲಿದೆ ಎಂದು ಹೇಳಿದ್ದಾರೆ.

ಈಗ ನಡೆಯುತ್ತಿರುವ ಸೇನಾ ಸುಧಾರಣೆಗಳು, ದಕ್ಷತೆಯನ್ನು ಹೆಚ್ಚಿಸುವ ಸೇನಾ ಪುನರ್‌ರಚನೆ ಕೆಲಸಗಳು ತಮ್ಮ ಅವಧಿಯಲ್ಲಿ ಆದ್ಯತೆ ಪಡೆಯಲಿವೆ ಎಂದಿರುವ ಅವರು, ರಕ್ಷಣಾ ಕ್ಷೇತ್ರವು ಸ್ವಾವಲಂಬನೆ ಸಾಧಿಸುವುದಕ್ಕೂ ಹೆಚ್ಚಿನ ಗಮನ ನೀಡುವ ಭರವಸೆ ಕೊಟ್ಟರು.

ಸೌತ್ ಬ್ಲಾಕ್‌ನಲ್ಲಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ವಾಯುಪಡೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿ.ಆರ್. ಚೌಧರಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಅವರು ಉಪಸ್ಥಿತರಿದ್ದರು.

ಮೂರೂ ಪಡೆಗಳ ನಡುವೆ ಸಹಕಾರ ಹೆಚ್ಚಿಸುವುದು ಹಾಗೂ ಇತರೆ ಸಂಸ್ಥೆಗಳ ಜೊತೆ ಸಂಪರ್ಕ ಸಾಧಿಸುವ ಮೂಲಕ ದೇಶ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಳ್ಳುವುದಾಗಿ ಪಾಂಡೆ ತಿಳಿಸಿದರು. ಹಿಂದಿನ ಸೇನಾ ಮುಖ್ಯಸ್ಥರ ಉತ್ತಮ ಕೆಲಸಗಳನ್ನು ಮುಂದುವರಿಸುವ ಬದ್ಧತೆ ವ್ಯಕ್ತಪಡಿಸಿದ ಅವರು, ಸೈನಿಕರು ಹಾಗೂ ಸಿಬ್ಬಂದಿಯ ಕಲ್ಯಾಣವೂ ತಮ್ಮ ಆದ್ಯತೆಗಳಲ್ಲಿ ಸೇರಿದೆ ಎಂದು ಹೇಳಿದರು.

ನೌಕಾಪಡೆ ಹಾಗೂ ವಾಯುಪಡೆಯ ಮುಖ್ಯಸ್ಥರುಸಮಾರಂಭದಲ್ಲಿ ಉಪಸ್ಥಿತ ಇದ್ದುದರ ಕುರಿತು ಮಾತನಾಡಿದ ಪಾಂಡೆ, ಒಟ್ಟಿಗೇ ಬೆಳೆದ ಮೂವರು ಇದೀಗ ಒಂದೇ ಅವಧಿಯಲ್ಲಿ ಮೂರು ಸೇನೆಗಳ ನೇತೃತ್ವ ವಹಿಸಿದ್ದೇವೆ ಎಂದರು. ಈ ಮೂವರೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ 61ನೇ ಕೋರ್ಸ್‌ನಲ್ಲಿ ಸಹಪಾಠಿಗಳಾಗಿದ್ದರು.

ಎಂಜಿನಿಯರಿಂಗ್‌ ವಿಭಾಗದಿಂದ ಆಯ್ಕೆಯಾದ ಮೊದಲ ಸೇನಾ ಮುಖ್ಯಸ್ಥರಾಗಿರುವ ಪಾಂಡೆ, ಸೇನೆಯ ಎಲ್ಲ ಪಡೆಗಳು ಹಾಗೂ ಸೇವೆಗಳಿಗೆ ಸಮಾನ ಅವಕಾಶ ಸಿಗಬೇಕು ಎಂದರು.ಜನರಲ್ ಎಂ.ಎಂ. ನರವಣೆ ಅವರಿಂದ ತೆರವಾದ ಸ್ಥಾನಕ್ಕೆ ಪಾಂಡೆ ಅವರು ನೇಮಕಗೊಂಡಿದ್ದು, 29ನೇ ಸೇನಾ ಮುಖ್ಯಸ್ಥರಾಗಿ ಶನಿವಾರ ಅಧಿಕಾರ ವಹಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.