ಇಂಫಾಲ್: ಬಹುಸಂಖ್ಯಾತ ಮೈಟಿ ಸಮುದಾಯವನ್ನು ಎಸ್‌ಟಿಗೆ ಸೇರಿಸಿದ ಆದೇಶ ವಿರೋಧಿಸಿ ಮಣಿಪುರದಲ್ಲಿ ತೀವ್ರ ಪ್ರತಿಭಟನೆ ಮತ್ತು ಹಿಂಸಾಚಾರ ನಡೆಯುತ್ತಿದೆ. ತಮ್ಮ ತವರು ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಒಲಿಂಪಿಕ್ ಪದಕ ವಿಜೇತೆ, ಬಾಕ್ಸರ್ ಹಾಗೂ ರಾಜ್ಯಸಭಾ ಸದಸ್ಯೆ ಮೇರಿ ಕೋಮ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
‘ಮಣಿಪುರದ ಪರಿಸ್ಥಿತಿ ನಿಜಕ್ಕೂ ದುಃಖ ತಂದಿದೆ. ಇಷ್ಟು ಹಿಂಸಾಚಾರ ನಡೆಯಬಹುದು ಎಂದು ನಾನೂ ಎಂದೂ ಊಹಿಸಿರಲಿಲ್ಲ. ಕಳೆದ ರಾತ್ರಿಯಿಂದ ಅತ್ಯಂತ ಭಯದ ವಾತಾವರಣ ಸೃಷ್ಟಿಯಾಗಿದೆ’ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
‘ರಾಜ್ಯದಲ್ಲಿ ಶಾಂತಿ ಮತ್ತು ಭದ್ರತೆ ಖಚಿತಪಡಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಕೇಳುತ್ತೇನೆ. ಇದು ನನ್ನ ಮನವಿ’ ಎಂದು ಅವರು ಹೇಳಿದ್ದಾರೆ.
‘ರಾಜ್ಯದ ಎಲ್ಲ ಸಮುದಾಯಗಳ ಜನರನ್ನು ನಾನು ಗೌರವಿಸುತ್ತೇನೆ. ನಾವೆಲ್ಲರೂ ಏಕೆ ಶಾತಿಯಿಂದ ಬದುಕಬಾರದು? ಇದು ನನ್ನ ಪ್ರಶ್ನೆ. ನಾವು ಶಾಂತಿಯುತವಾಗಿ ಜೀವಿಸಿದರೆ ಅದು ನಮ್ಮೆಲ್ಲರಿಗೂ ಉತ್ತಮ. ಈ ಹಿಂಸಾಚಾರದಲ್ಲಿ ಕೆಲವರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವುದು ದುರದೃಷ್ಟಕರ’ ಎಂದೂ ಮೇರಿ ಕೋಮ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂಸಾಚಾರ ಆದಷ್ಟು ಬೇಗ ಅಂತ್ಯವಾಗಬೇಕು. ಎಲ್ಲವೂ ಸರಿಹೋಗಲೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಈ ಮಧ್ಯೆ, ಹಿಂಸಾಚಾರದ ಚಿತ್ರಗಳನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ಮೇರಿಕೋಮ್, ‘ನನ್ನ ರಾಜ್ಯ ಮಣಿಪುರ ಹೊತ್ತಿ ಉರಿಯುತ್ತಿದೆ. ದಯವಿಟ್ಟು ಸಹಾಯ ಮಾಡಿ ಎಂದು ಬರೆದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಟ್ಯಾಗ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.