ತಿರುವನಂತಪುರ : ಕೋವಿಡ್ ಅವಧಿಯಲ್ಲಿ ಉಂಟಾದ ನಷ್ಟದಿಂದಾಗಿ 2021–22ರ ಹಣಕಾಸು ವರ್ಷದಲ್ಲಿ ತೆರಿಗೆ ವಿಧಿಸಬಹುದಾದ ಆದಾಯದಲ್ಲಿ ಕೇವಲ ₹ 680ಕ್ಕೆ ಇಳಿಕೆಯಾಗಿತ್ತು ಎಂದು ತಿರುವನಂತಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಗುರುವಾರ ಹೇಳಿದ್ದಾರೆ.
ಕಾಂಗ್ರೆಸ್‌ನ ಶಶಿ ತರೂರ್ ವಿರುದ್ಧ ಕಣಕ್ಕಿಳಿದಿರುವ ರಾಜೀವ್ ಅವರು, 2021–22ರಲ್ಲಿನ ತೆರಿಗೆ ವಿಧಿಸಬಹುದಾದ ಆದಾಯದ ಬಗ್ಗೆ ಕಾಂಗ್ರೆಸ್ ಪ್ರಚಾರ ನಡೆಸಲು ಯೋಜಿಸಿದೆ ಎಂದು ಟೀಕಿಸಿದ್ದಾರೆ.
‘ನಾನು ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಇದ್ದೇನೆ. ನನ್ನ ಆದಾಯವು ಸಂಸದ/ಸಚಿವರ ಸಂಬಳ, ಸವಲತ್ತುಗಳು, ಬಡ್ಡಿ/ಲಾಭಾಂಶ, ಉಳಿತಾಯ/ಹೂಡಿಕೆಯನ್ನು ಮಾತ್ರ ಅವಲಂಬಿಸಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘2021–22ನೇ ಸಾಲಿನಲ್ಲಿ ಕೋವಿಡ್ ಅವಧಿಯಲ್ಲಿ ವ್ಯವಹಾರದ ಪಾಲುದಾರಿಕೆಯಲ್ಲಿ ಉಂಟಾದ ನಷ್ಟದಿಂದಾಗಿ ತೆರಿಗೆ ವಿಧಿಸಬಹುದಾದ ಆದಾಯವು ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಅವರು ಹೇಳಿದ್ದಾರೆ.
‘18 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಕಳಂಕ ರಹಿತನಾಗಿದ್ದೇನೆ. ತಿರುವನಂತಪುರದಲ್ಲಿ ನಾನು ಸ್ಪರ್ಧಿಸಿದಾಗಿನಿಂದ ಕಾಂಗ್ರೆಸ್ ನಾಯಕರು ನನ್ನ ಖ್ಯಾತಿಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ರಾಜೀವ್ ಆರೋಪಿಸಿದ್ದಾರೆ.
ಕಾಂಗ್ರೆಸ್ ದೂರು: ರಾಜೀವ್ ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಘೋಷಿಸಿರುವ ಆಸ್ತಿಗಳ ನಡುವೆ ಹೊಂದಾಣಿಕೆ ಇಲ್ಲ ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಕುರಿತು ಪರಿಶೀಲಿಸುವಂತೆ ಆಯೋಗವು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಗೆ (ಸಿಬಿಡಿಟಿ) ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ರಾಜೀವ್ ಅವರಿಂದ ಸ್ಪಷ್ಟನೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.