ತಿಂಕ್ಸುಕಿಯಾ(ಅಸ್ಸಾಂ): ‘67 ವರ್ಷವಾಯಿತು... ಇಲ್ಲಿರುವ ಬೇಲೂರು ಹಳೇಬೀಡನ್ನೇ ನೋಡಲಾಗಲಿಲ್ಲವಲ್ಲ,’ ಎಂದು ಬೇಸರಿಸಿಕೊಂಡರು ಆ ತಾಯಿ. ತಾಯಿಯ ಬೇಸರದ ನುಡಿಗೆ ಮರುಗಿದ ಈಶ್ರವಣಕುಮಾರ ತನ್ನ ಬಜಾಜ್ ಚೇತಕ್ ಸ್ಕೂಟರ್‌ನಲ್ಲೇ ಇಡೀ ಭಾರತದ ತೀರ್ಥಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ. ಬೇಲೂರು ಹಳೇಬೀಡು ಮೂಲಕ ಆರಂಭವಾಗಿರುವ ಇವರ ತೀರ್ಥ ಯಾತ್ರೆ ಈಗ ನೇಪಾಳ, ಭೂತಾನ್‌ಗಳನ್ನು ಸುತ್ತಿದೆ.
ಅಂದಹಾಗೆ ಇವರ ಹೆಸರು ಡಿ. ಕೃಷ್ಣಕುಮಾರ್. ವಯಸ್ಸು 40 ವರ್ಷ. ಮೈಸೂರಿನವರು. 70 ವರ್ಷದ ತಮ್ಮ ತಾಯಿ ಚೂಡಾರತ್ನ ಅವರನ್ನು ತಮ್ಮ ತಂದೆ ಕೊಡಿಸಿದ ‘ಬಜಾಜ್ ಚೇತಕ್’ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ತೀರ್ಥಯಾತ್ರೆ ಮಾಡಿಸುತ್ತಿದ್ದಾರೆ. 2018ರ ಜನವರಿ 16ರ ರಂದು ಮೈಸೂರಿನಿಂದ ಯಾತ್ರೆ ಆರಂಭಿಸಿರುವ ಇವರು, ಇದುವರೆಗೆ ಸಾವಿರಾರು ಕಿಲೋಮೀಟರ್ ಯಾತ್ರೆಯನ್ನು ತಮ್ಮ ತಾಯಿಯೊಂದಿಗೆ ಸ್ಕೂಟರ್‌ನಲ್ಲಿ ಕ್ರಮಿಸಿದ್ದಾರೆ.
ಇದನ್ನೂ ಓದಿ:ಸ್ಕೂಟರ್‌ನಲ್ಲಿ ಆಧುನಿಕ ಶ್ರವಣಕುಮಾರನ ತೀರ್ಥಯಾತ್ರೆ
ಕೃಷ್ಣಕುಮಾರ್ ಮತ್ತು ಅವರ ತಾಯಿ ಚೂಡಾರತ್ನಮ್ಮ ಅವರು ಭಾನುವಾರ ಅಸ್ಸಾಂನ ತಿಂಕ್ಸುಕಿಯಾಕ್ಕೆ ಭೇಟಿ ನೀಡಿದ್ದರು. ಸ್ಕೂಟರ್‌ನಲ್ಲಿ ಯಾತ್ರೆಗೆ ಬಂದಿದ್ದ ಅವರನ್ನು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ಮಾತನಾಡಿಸಿದೆ. ಈ ವೇಳೆ ಮಾತನಾಡಿರುವ ಕೃಷ್ಣಕುಮಾರ್, ‘ಇದು ಮಾತೃ ಸೇವಾ ಸಂಕಲ್ಪ ಯಾತ್ರೆ. ನಾನು ನನ್ನ ತಾಯಿ ಈ ಯಾತ್ರೆಯನ್ನು 2018ರ ಜನವರಿ 16ರಂದು ಆರಂಭಿಸಿದೆವು. ಕರ್ನಾಟಕ ತೀರ್ಥ ಕ್ಷೇತ್ರಗಳಿಗೆಲ್ಲ ಭೇಟಿ ಕೊಟ್ಟ ನಂತರ ನಾವು ಕೇರಳಕ್ಕೆ ಹೋದೆವು. ನಂತರ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ಚತ್ತೀಸ್‌ಗಢ, ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರಕ್ಕೆ ಹೋಗಿದ್ದೆವು. ಅಷ್ಟೇ ಅಲ್ಲ, ಪಕ್ಕದ ನೇಪಾಳ, ಭೂತಾನವನ್ನೂ ನಾವು ನೋಡಿದ್ದೇವೆ. ಸದ್ಯ ಅಸ್ಸಾಂನಲ್ಲಿದ್ದೇವೆ. ಪರಶುರಾಮ ಕುಂಡ ಇರುವ ಅರುಣಾಚಲ ಪ್ರದೇಶಕ್ಕೆ ಈಗ ತೆರಳುತ್ತಿದ್ದೇವೆ,’ಎಂದು ಅವರು ಹೇಳಿಕೊಂಡಿದ್ದಾರೆ.
ಈ ಇಡೀ ಯಾತ್ರೆಯನ್ನು ಕೃಷ್ಣಕುಮಾರ್ ಅವರು ತಮ್ಮ ಚೇತಕ್ ಸ್ಕೂಟರ್‌ನಲ್ಲೇ ಪೂರ್ಣಗೊಳಿಸಿದ್ದಾರೆ ಎಂಬುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.