ADVERTISEMENT

ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಹಿಂದಿ ರಾಷ್ಟ್ರಭಾಷೆ ಎಂಬ ಮಿಥ್ಯೆ

ಆರ್. ಹರಿಶಂಕರ್
Published 12 ಸೆಪ್ಟೆಂಬರ್ 2020, 17:43 IST
Last Updated 12 ಸೆಪ್ಟೆಂಬರ್ 2020, 17:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಭಾಷಾವಾರು ಪ್ರಾಂತ್ಯ ವಿಂಗಡನೆಯೇ ನಮ್ಮ ಬಹುತ್ವದ ರಾಜಕೀಯವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಹಾಗಾಗಿ, ಕನ್ನಡತನದಿಂದ ಭಾರತೀಯತೆಯ ಸಾರ್ವಭೌಮತ್ವ ನಿಲ್ಲುತ್ತದೆ ಮತ್ತು ಇದು ಖಂಡಿತವಾಗಿಯೂ ಭಾರತೀಯತೆಗೆ ಪೂರಕವಾದುದಾಗಿದೆ.

'ಭಾರತದಲ್ಲಿ ಬಹುಸಂಖ್ಯಾತರು ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಒಪ್ಪಿರಬಹುದು, ಹಿಂದಿಯನ್ನೇ ಮಾತನಾಡುತ್ತಿರಬಹುದು, ದೇವನಾಗರಿ ಭಾಷೆಯಲ್ಲಿ ಬರೆಯುತ್ತಿರಬಹುದು. ಆದರೆ, ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಘೋಷಿಸಿಲು, ಆದೇಶಿಸಲು ಯಾವುದೇ ದಾಖಲೆಗಳಿಲ್ಲ’ ಎಂದುಅರ್ಜಿಯೊಂದರ ವಿಚಾರಣೆ ವೇಳೆ ರಾಷ್ಟ್ರಭಾಷೆಗೆ ಸಂಬಂಧಿಸಿದಂತೆ ಗುಜರಾತ್‌ ಹೈಕೋರ್ಟ್‌ನ ವಿಭಾಗೀಯ ಪೀಠ 2010ರಲ್ಲಿ ತನ್ನ ಅಭಿಪ್ರಾಯ ದಾಖಲಿಸಿತ್ತು.

2010ರ ಮೇ ತಿಂಗಳಲ್ಲಿ 'ಹಿಂದಿಗೆ ರಾಷ್ಟ್ರಭಾಷೆ ಸ್ಥಾನಮಾನ ನೀಡಲು ಯಾವುದಾದರೂ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ?' ಎಂದು ಉತ್ತರ ಪ್ರದೇಶದ ದಿಯೋರಾ ಕ್ಷೇತ್ರದ ಸಂಸದ ಗೋರಖ್‌ ಪ್ರಸಾದ್‌ ಜೈಸ್ವಾಲ್‌ಅವರು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದರು.'ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಪರಿಗಣಿಸಲು ನಮ್ಮ ಸಂವಿಧಾನದಲ್ಲಿಅವಕಾಶವಿಲ್ಲ' ಎಂದು ಅಂದಿನ ಸರ್ಕಾರ ಜೈಸ್ವಾಲ್ ಅವರಿಗೆ ಸ್ಪಷ್ಟಪಡಿಸಿತ್ತು.

ತುಳು ಹಾಗೂ ಕೊಡವ ಭಾಷೆಗಳನ್ನು ಅಧಿಕೃತ ಭಾಷೆಯ ಪಟ್ಟಿಗೆ ಸೇರಿಸಬೇಕು ಎನ್ನುವ ಬೇಡಿಕೆ ಕುರಿತು 2017ರ ಜುಲೈನಲ್ಲಿ ಸಂಸತ್ತಿನಲ್ಲಿ ಚರ್ಚೆಯ ವೇಳೆಕೇಂದ್ರ ಸಚಿವ ಕಿರಣ್ ರಿಜುಜು,‘ನಾವು ಹಿಂದಿಯನ್ನು ಹೇರುತ್ತಿಲ್ಲ.ರಾಷ್ಟ್ರಭಾಷೆ ಎಂದುಕರೆದಿಲ್ಲ. ಭಾರತದಲ್ಲಿ ಇರುವ ಎಲ್ಲಾ ಅಧಿಕೃತ ಭಾಷೆಗಳೂ ರಾಷ್ಟ್ರಭಾಷೆಗಳೇ. ಆದರೆ ಹಿಂದಿಯನ್ನು ಆಡಳಿತ ಭಾಷೆ ಎಂದು ಒಪ್ಪಿಕೊಳ್ಳಲಾಗಿದೆ. ಹಿಂದಿಗೆ ವಿಶೇಷ ಸ್ಥಾನಮಾನವನ್ನೂ ನೀಡಿಲ್ಲ' ಎಂದು ಪ್ರತಿಕ್ರಿಯಿಸಿದ್ದರು.

ಈಗ ಇವೆಲ್ಲವೂ ನೆನಪಾಗಲು ಕಾರಣವಿದೆ.ಪ್ರತಿವರ್ಷ ಸೆ.14ರ ದಿನಾಂಕವನ್ನು 'ಹಿಂದಿ ದಿವಸ್' ಎಂದು ಆಚರಿಸಲಾಗುತ್ತದೆ. ಆದರೆ ಈಚಿನ ದಿನಗಳಲ್ಲಿ ಹಿಂದಿ ಹೇರಿಕೆಯ ಬಗ್ಗೆ ವಿವಿಧ ಭಾಷಾ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸುವ ದಿನವಾಗಿಯೂ ಸೆ.14 ಗುರುತಿಸಿಕೊಂಡಿದೆ. ಇದಕ್ಕೇ ಇರಬೇಕು, ಸೆ.1ರಿಂದಾಚೆಗೆ ಟ್ವಿಟರ್‌ನಲ್ಲಿ #StopHindiImposition ಹ್ಯಾಷ್‌ಟ್ಯಾಗ್ ಹಲವು ಬಾರಿ ಟ್ರೆಂಡಿಂಗ್ ಆಗಿತ್ತು.

ಹಿಂದಿ ರಾಷ್ಟ್ರಭಾಷೆಯೇ?

ಹಿಂದಿ ರಾಷ್ಟ್ರಭಾಷೆಯಲ್ಲ. ಅದು ಈ ದೇಶದ ಹಲವು ಅಧಿಕೃತ ಭಾಷೆಗಳಲ್ಲಿ ಒಂದು ಎಂಬುದನ್ನು ಸಾರಿಸಾರಿ ಹೇಳುತ್ತಿವೆ ಮೇಲಿನ ಈ ಮೂರು ಪ್ರಸಂಗಗಳು. ಅಷ್ಟಕ್ಕೂ ಈ ನೆಲದ ಸಂವಿಧಾನದಲ್ಲೇ ರಾಷ್ಟ್ರಭಾಷೆ ಎಂಬ ಕಲ್ಪನೆಗೆ ಅವಕಾಶವಿಲ್ಲ.

ಭಾರತದಲ್ಲಿ 22 ಅಧಿಕೃತ ಭಾಷೆಗಳಿವೆ. ಸಂವಿಧಾನದ 343ನೇ ವಿಧಿಯ ಪ್ರಕಾರ ಹಿಂದಿ ಅಥವಾ ಇಂಗ್ಲಿಷ್‌ ಅನ್ನು ಆಡಳಿತ ಭಾಷೆಯಾಗಿ ಬಳಸಲಾಗುತ್ತಿದೆ. ಆದರೆ, ರಾಜ್ಯಗಳು ಅವುಗಳದ್ದೇ ಪ್ರಾದೇಶಿಕ ಭಾಷೆಯನ್ನು ಮತ್ತು ಇಂಗ್ಲಿಷ್‌ ಅನ್ನು ಸಂವಹನ ಮತ್ತು ಆಡಳಿತ ಭಾಷೆಗಳಾಗಿ ಬಳಸುತ್ತಿವೆ. ಇದರ ಜತೆಗೆ ಯಾವುದಾದರೂಇನ್ನೊಂದು ಭಾಷೆಯನ್ನು ಅಧಿಕೃತವಾಗಿ ಬಳಸಲು ರಾಜ್ಯಗಳಿಗೆ ಅವಕಾಶನೀಡಲಾಗಿದೆ. ಆದರೆ, 22 ಭಾಷೆಗಳನ್ನು ಒಟ್ಟಾಗಿ ಅಧಿಕೃತ ಭಾಷೆಗಳೆಂದು ಘೋಷಿಸಲಾಗಿದ್ದು, ಅವುಗಳೆಲ್ಲವೂ ರಾಷ್ಟ್ರ ಭಾಷೆಗಳೇ ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಇಷ್ಟಾದರೂ, ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸಲು ಕೇಂದ್ರದಲ್ಲಿ ಆಡಳಿತ ನಡೆಸುವ ಸರ್ಕಾರಗಳುಹವಣಿಸುತ್ತಲೇ ಇರುತ್ತವೆ. ಅದಕ್ಕೆ ಕಾರಣಗಳೂ ಇವೆ. ಹಿಂದಿ ಭಾಷಿಕರು ಅಧಿಕ ಸಂಖ್ಯೆಯಲ್ಲಿರುವುದು, ಹಿಂದಿ ಭಾಷಿಕ ಪ್ರದೇಶಗಳೂ ದೊಡ್ಡದಾಗಿರುವುದು. ಹೀಗಾಗಿ ಹಿಂದಿ ಭಾಷಿಕರನ್ನು ಒಲಿಸಿಕೊಂಡು ರಾಜಕೀಯದ ಬೆಳೆ ಬೆಳೆಯುವ ಹುನ್ನಾರ ಕೇಂದ್ರದಲ್ಲಿ ಆಡಳಿತ ನಡೆಸುವ ರಾಜಕೀಯ ಪಕ್ಷಗಳಲ್ಲಿ ಕಂಡು ಬರುತ್ತದೆ. ಅದು ಸರ್ಕಾರದ ನೀತಿಯಲ್ಲಿಯೂ ಕಾಣಿಸಿಕೊಳ್ಳುತ್ತದೆ.

ದೇಶದಲ್ಲಿ ಹಿಂದಿ ಭಾಷಿಕರು ಬಹುಸಂಖ್ಯಾತರಲ್ಲ

ಹಿಂದಿ ಭಾಷಿಕರು ರಾಜಕೀಯವಾಗಿ ಪ್ರಬಲರಿರಬಹುದು. ಆದರೆ, ಬಹುಸಂಖ್ಯಾತರು ಎಂಬ ಮಾತನ್ನು ಸಾರಾಸಗಟಾಗಿ ಒಪ್ಪಲು ಸಾಧ್ಯವಿಲ್ಲ. ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ವಿಮರ್ಶಾತ್ಮಕವಾಗಿ ನೋಡಿದರೆ ಬೇರೆಯದ್ದೇ ಆದ ವಿಚಾರ ಗೋಚರಿಸುತ್ತದೆ.

2011ರ ಜನಗಣತಿಯ ಪ್ರಕಾರ ದೇಶದ 121 ಕೋಟಿ ಜನಸಂಖ್ಯೆಯ ಪೈಕಿ 52 ಕೋಟಿ ಮಂದಿ ಹಿಂದಿಯನ್ನು ತಮ್ಮ ಆಡು ಭಾಷೆಯಾಗಿ ಘೋಷಿಸಿಕೊಂಡಿದ್ದಾರೆ. ಆದರೆ, 32 ಕೋಟಿ ಮಂದಿ ಮಾತ್ರ ಹಿಂದಿ ಮಾತೃಭಾಷೆ ಎಂದು ಹೇಳಿಕೊಂಡಿದ್ದಾರೆ. ಅಂದರೆ, ದೇಶದ ಶೇ 44ರಷ್ಟು ಮಂದಿ ಮಾತ್ರ ಹಿಂದಿಯನ್ನು ಮಾತನಾಡುತ್ತಾರೆ. ಮಿಕ್ಕ ಶೇ 66ರಷ್ಟು ಮಂದಿ ಇತರ ಭಾಷೆಗಳನ್ನು ಮಾತನಾಡುತ್ತಾರೆ ಎಂದಾಯಿತು. ಶೇ 25ರಷ್ಟು ಮಂದಿಗೆ ಮಾತ್ರ ಹಿಂದಿ ಮಾತೃಭಾಷೆ. ಅಂದರೆ, ಇನ್ನುಳಿದ ಶೇ 75ರಷ್ಟು ಮಂದಿಯ ಮಾತೃಭಾಷೆಗಳು ಬೇರಯವು. ಈ ಲೆಕ್ಕದಲ್ಲಿ ಯೋಚಿಸಿ ನೋಡಿ. ಭಾಷಿಕಬಹುಸಂಖ್ಯಾತರು ಯಾರು? ಹಿಂದಿ ಮಾತನಾಡುವವರೇ ಅಥವಾ ಇತರ ಭಾಷಿಕರೇ?

ಅನಿವಾರ್ಯತೆಗೆ ದೂಡುವ ಹುನ್ನಾರ

ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ, ತ್ರಿಭಾಷಾ ಸೂತ್ರದ ಮೂಲಕ, ಪರೀಕ್ಷೆಗಳಿಗೆ ಅರ್ಜಿ ಹಾಕಲು ಹಿಂದಿ ಕಡ್ಡಾಯ ಎನ್ನುವ ಮೂಲಕ, ಕೇಂದ್ರ ಸರ್ಕಾರಗಳು ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನಗಳನ್ನು ನಡೆಸಿಕೊಂಡೇ ಬರುತ್ತಿವೆ. ವಿದ್ಯಾರ್ಥಿಗಳನ್ನು, ಜನರನ್ನು ಅನಿವಾರ್ಯತೆಗೆ ದೂಡಿ ಹಿಂದಿ ಕಲಿಸಿಕೊಡುವ ಹುನ್ನಾರವಿದು. ಜನರನ್ನು ಅನಿವಾರ್ಯತೆಗೆ ಸಿಲುಕಿಸಿ ಹಿಂದಿಯನ್ನು ಹೇರುವ ಈ ವಿಧಾನವನ್ನು ಅಪಮಾರ್ಗದ ಮೂಲಕ ರಾಷ್ಟ್ರಭಾಷೆಯ ಸ್ಥಾನಮಾನ ಗಿಟ್ಟಿಸಿಕೊಳ್ಳುವ ಪ್ರಯತ್ನ ಎಂದು ಭಾಷಾ ಹೋರಾಟಗಾರರು ಆಭಿಪ್ರಾಯಡುತ್ತಾರೆ.

ಹಿಂದಿಗೆ ರಾಷ್ಟ್ರಭಾಷೆಯ ಸ್ಥಾನ ದಕ್ಕಿಸಿಕೊಡಲು ಹೊರಟ ಕೆಲ ಮಂದಿ, ಜನರ ಆತ್ಮಾಭಿಮಾನವನ್ನು ಕೆರಳಿಸಿ, ರಾಷ್ಟ್ರಪ್ರೇಮದಂಥ ಭಾವನಾತ್ಮಕ ವಿಚಾರಗಳನ್ನು ಚರ್ಚೆಯ ಮುನ್ನೆಲೆಗೆ ತರುತ್ತಿರುವುದು ಈಚೆಗಿನ ದಿನಗಳಲ್ಲಿ ಕಂಡುಬರುತ್ತಿರುವ ಪ್ರಮುಖ ಬೆಳವಣಿಗೆ. ‘ಯಾರು ಹಿಂದಿ ಮಾತನಾಡುವುದಿಲ್ಲವೋ ಅವರು ಹಿಂದೂಸ್ಥಾನದಲ್ಲಿರಲು ಯೋಗ್ಯರಲ್ಲ’ ಎನ್ನುವುದು, ‘ಹಿಂದೂಸ್ಥಾನದಲ್ಲಿರುವವರೆಲ್ಲರೂ ಹಿಂದಿ ಮಾತನಾಡಲೇಬೇಕು, ಇಲ್ಲವಾದರೆ ಅವರೆಲ್ಲರೂ ರಾಷ್ಟ್ರದ್ರೋಹಿಗಳು, ರಾಷ್ಟ್ರಪ್ರೇಮವಿಲ್ಲದವರು’ ಎಂಬ ಪೊಳ್ಳು ವಾದಗಳನ್ನು ಮುಂದಿಡಲಾಗುತ್ತಿದೆ. ಆದರೆ, ಭಾರತ ಬಹುತ್ವದಿಂದ ರೂಪುಗೊಂಡ, ಭಾಷಾವಾರು ಪ್ರಾಂತ್ಯಗಳ ಮೂಲಕ ರಚನೆಗೊಂಡ ದೇಶ ಎಂಬುದನ್ನು ಈ ಮಂದಿ ಮರೆಯುತ್ತಾರೆ. ಇದು ದೇಶದ ಅಖಂಡತೆಯನ್ನೇ ಪ್ರಶ್ನೆ ಮಾಡಿದ ರೀತಿ. ಇದು ರಾಷ್ಟ್ರದ್ರೋಹಕ್ಕೆ ಸಮ ಎಂಬುದು ಅವರ ಅರಿವಿಗೇ ಬಾರದೇ ಹೋಗಿರುವುದು ಶೋಚನೀಯ ಸಂಗತಿ.

ಭಾರತೀಯತೆ ಮತ್ತು ಕನ್ನಡತನ

‘ಭಾರತೀಯತೆ’ ಎನ್ನುವುದು ಉಪಖಂಡದ ನೂರಾರು ಪ್ರಾದೇಶಿಕ ಅಸ್ಮಿತೆಗಳ ಒಟ್ಟು ಮೊತ್ತ. ಭಾರತೀಯತೆಯೊಂದೇ ಅಖಂಡವಾದ ಪರಿಕಲ್ಪನೆಯಲ್ಲ. ಹಾಗಾಗಿಯೇ ಸಂವಿಧಾನದ ಪೀಠಿಕೆಯಲ್ಲಿ ನಮ್ಮನ್ನು ‘ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಪ್ರಾದೇಶಿಕ ಅಸ್ಮಿತೆಗಳು ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯದ ಹಲವು ನೆಲೆಗಳನ್ನು ಹೊಂದಿದ್ದರೂ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿಸುವಾಗ ನುಡಿಯ ಹಿನ್ನೆಲೆಯಲ್ಲಿ ನಮ್ಮನ್ನು ವಿಂಗಡಿಸಿ ಗುರುತಿಸಿಕೊಂಡಿದ್ದೇವೆ. ಈ ಭಾಷಾವಾರು ಪ್ರಾಂತ್ಯ ವಿಂಗಡನೆಯೇ ನಮ್ಮ ಬಹುತ್ವದ ರಾಜಕೀಯವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಹಾಗಾಗಿ, ಕನ್ನಡತನದಿಂದ ಭಾರತೀಯತೆಯ ಸಾರ್ವಭೌಮತ್ವ ಗಟ್ಟಿಯಾಗುತ್ತದೆ ಮತ್ತು ಇದು ಖಂಡಿತವಾಗಿಯೂ ಭಾರತೀಯತೆಗೆ ಪೂರಕವಾದುದಾಗಿದೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.