ADVERTISEMENT

ರಾಜ್ಯಪಾಲರು–ಸ್ಟಾಲಿನ್‌ ಸರ್ಕಾರ ನಡುವೆ ಮತ್ತೆ ಜಟಾಪಟಿ

ಮುಖ್ಯಮಂತ್ರಿ ವಿದೇಶ ಪ್ರವಾಸ ಟೀಕಿಸಿದ ರವಿ: ಸರ್ಕಾರದ ತಿರುಗೇಟು

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 16:16 IST
Last Updated 6 ಜೂನ್ 2023, 16:16 IST
ಎಂ.ಕೆ. ಸ್ಟಾಲಿನ್‌
ಎಂ.ಕೆ. ಸ್ಟಾಲಿನ್‌   

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಇತ್ತೀಚೆಗೆ ಕೈಗೊಂಡಿದ್ದ ಸಿಂಗಪುರ ಮತ್ತು ಜಪಾನ್‌ ಪ್ರವಾಸವು ರಾಜ್ಯಪಾಲರು ಮತ್ತು ಸರ್ಕಾರದ ನಡುವಣ ಮತ್ತೊಂದು ಸುತ್ತಿನ ಜಟಾಪಟಿಗೆ ನಾಂದಿ ಹಾಡಿದೆ.

ಒಂಬತ್ತು ದಿನಗಳ ಕಾಲ ಎರಡೂ ದೇಶಗಳಿಗೆ ಪ್ರವಾಸ ಕೈಗೊಂಡಿದ್ದ ಸ್ಟಾಲಿನ್, ತಮಿಳುನಾಡಿನಲ್ಲಿ ₹ 3 ಸಾವಿರ ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಹಲವು ಕಂಪನಿಗಳ ಜೊತೆ ಸಹಿ ಹಾಕಿದ್ದರು.

ಊಟಿಯಲ್ಲಿ ಸೋಮವಾರ ನಡೆದ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲಿ ಮಾತನಾಡಿದ ರಾಜ್ಯಪಾಲ ಆರ್‌.ಎನ್. ರವಿ, ‘ವಿದೇಶ ಪ್ರವಾಸ ಕೈಗೊಂಡ ತಕ್ಷಣ ಬಂಡವಾಳ ಹರಿದುಬರುವುದಿಲ್ಲ’ ಎಂದು ಕುಟುಕಿದ್ದಾರೆ. ಇದಕ್ಕೆ ಸರ್ಕಾರ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ನೀವು ರಾಜಕಾರಣಿಯಂತೆ ವರ್ತಿಸುವುದನ್ನು ಮೊದಲು ನಿಲ್ಲಿಸಿ’ ಎಂದು ತಿರುಗೇಟು ನೀಡಿದೆ.

ADVERTISEMENT

ಸಮಾವೇಶದಲ್ಲಿ ಮಾತನಾಡಿದ ರಾಜ್ಯಪಾಲರು, ‘ನಾವು ಹೋಗಿ ಕೇಳಿದರೆ ಅಥವಾ ಮಾತುಕತೆ ನಡೆಸಿದ ತಕ್ಷಣ ವಿದೇಶಿ ಹೂಡಿಕೆದಾರರು ಬರುವುದಿಲ್ಲ. ಅವರು ಇಲ್ಲಿಗೆ ಬರುವಂತಹ ಪೂರಕ ವಾತಾವರಣವನ್ನು ಸೃಷ್ಟಿಸಬೇಕಿದೆ’ ಎಂದರು.

‘ವಿದೇಶಿ ಹೂಡಿಕೆದಾರರು ಚೌಕಾಸಿಯಲ್ಲಿ ಸಿದ್ಧಹಸ್ತರು. ಕಾರ್ಪೊರೇಟ್‌ ಕಂಪನಿಗಳ ಮೌಲ್ಯ ಡಾಲರ್‌ ಲೆಕ್ಕದಲ್ಲಿರುತ್ತದೆ. ಹೂಡಿಕೆಯ ದಾರಿ ಇಲ್ಲದಿದ್ದರೆ ಅವರು ಒಪ್ಪಿಗೆ ನೀಡುವುದಿಲ್ಲ. ನೀವು ಮಾತನಾಡಿದ ತಕ್ಷಣ ಸಾರ್ವಜನಿಕರಂತೆ ತಲೆದೂಗುವುದಿಲ್ಲ. ಅವರು ವಾಸ್ತವ ಪರಿಸ್ಥಿತಿಯನ್ನು ಹೆಚ್ಚು ನಂಬುತ್ತಾರೆ. ಹೂಡಿಕೆ ಮಾಡಿದ ಒಂದು ಡಾಲರ್‌ಗೆ ಕನಿಷ್ಠ ಒಂದೂವರೆ ಡಾಲರ್‌ ಲಾಭ ಸಿಗುತ್ತದೆಂದು ವಿಶ್ವಾಸ ಮೂಡಿದರಷ್ಟೇ ಬಂಡವಾಳ ಹೂಡುತ್ತಾರೆ. ಹಾಗಾಗಿ, ಅವರ ಅಗತ್ಯಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಬೇಕಿದೆ’ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಇದಕ್ಕೆ ಹರಿಯಾಣವನ್ನು ಉದಾಹರಣೆ ನೀಡಿದ ಅವರು, ‘ಅಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಹಾಗಾಗಿ, ಬಂಡವಾಳ ಹೂಡಿಕೆ ಹೆಚ್ಚಿದೆ. ತಮಿಳುನಾಡಿನಲ್ಲೂ ಸೌಕರ್ಯ ಅಭಿವೃದ್ಧಿಪಡಿಸಿದರೆ ವಿದೇಶ ಹೂಡಿಕೆ ಹರಿದು ಬರಲಿದೆ’ ಎಂದರು.

ರಾಜ್ಯದಲ್ಲಿ ಮಾನವ ಸಂಪನ್ಮೂಲ ಕ್ಷೀಣಿಸುತ್ತಿರುವ ಬಗ್ಗೆಯೂ ರಾಜ್ಯಪಾಲರು ಪ್ರಸ್ತಾಪಿಸಿದ್ದು, ‘ಜನರ ಬೇಡಿಕೆ ಮತ್ತು ಅಗತ್ಯತೆಗೆ ಅನುಗುಣವಾಗಿ ಶಿಕ್ಷಣ ಸೌಲಭ್ಯ ಒದಗಿಸಲು ಕಷ್ಟವಾಗುತ್ತಿದೆ’ ಎಂದು ಟೀಕಿಸಿದರು.

ರಾಜ್ಯಪಾಲರ ಹೇಳಿಕೆಗೆ ಹಣಕಾಸು ಸಚಿವ ತಂಗಂ ತೆನ್ನರಸು ಪ್ರತ್ಯುತ್ತರ ನೀಡಿದ್ದು, ‘ಗುಜರಾತ್‌ನಲ್ಲಿ ಅಧಿಕಾರದಲ್ಲಿದ್ದಾಗ ಹೂಡಿಕೆದಾರರನ್ನು ಸೆಳೆಯಲು ನರೇಂದ್ರ ಮೋದಿ ಕೈಗೊಂಡಿದ್ದ ವಿದೇಶ ಪ್ರವಾಸವನ್ನು ರವಿ ಅವರು ಪ್ರಶ್ನಿಸಿದ್ದರೆ? ಎಂದಿದ್ದಾರೆ.

‘ರಾಜ್ಯಪಾಲರು ಸರ್ಕಾರದ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಾರೆ. ಜನ ಗಮನವನ್ನು ಬೇರೆಡೆ ಸೆಳೆಯುವುದು ಇದರ ಹಿಂದಿರುವ ತಂತ್ರ. ಚಿದಂಬರಂ ಪಟ್ಟಣದ ನಟರಾಜ ದೇಗುಲದ ಅರ್ಚಕರ ವಿರುದ್ಧ ಸರ್ಕಾರ ಬಾಲ್ಯವಿವಾಹ ಕಾಯ್ದೆಯಡಿ ಸುಳ್ಳು ಪ್ರಕರಣ ದಾಖಲಿಸಿದೆ ಎಂದು ಆರೋಪಿಸಿದ್ದರು. ಪ್ರಸ್ತುತ ಮಾಧ್ಯಮಗಳಲ್ಲಿ ವಿವಾಹದ  ದೃಶ್ಯಗಳು ‍ಪ್ರಸಾರವಾಗಿವೆ’ ಎಂದಿದ್ದಾರೆ.

‘ಸೋಮವಾರ ಎನ್‌ಐಆರ್‌ಎಫ್‌ ವರದಿ ಬಿಡುಗಡೆಯಾಗಿದೆ. ಇದರ ಅನ್ವಯ ದೇಶದ 100 ಅತ್ಯುತ್ತಮ ವಿಶ್ವವಿದ್ಯಾಲಯಗಳ ಪೈಕಿ 22 ಹಾಗೂ 100 ಅತ್ಯುತ್ತಮ ಕಾಲೇಜುಗಳ ಪೈಕಿ 30 ಕಾಲೇಜುಗಳು ತಮಿಳುನಾಡಿನಲ್ಲಿವೆ’ ಎಂದು ಹೇಳಿದ್ದಾರೆ.

2022ರ ಜನವರಿಯಿಂದ ಪ್ರಸಕ್ತ ವರ್ಷದ ಏಪ್ರಿಲ್‌ವರೆಗೆ ಸರ್ಕಾರ 108 ಕಂಪನಿಗಳ ಜೊತೆಗೆ ₹ 1.80 ಲಕ್ಷ ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸಹಿ ಹಾಕಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.