ಕೋಲ್ಕತ್ತ: ‘ನಬನ್ನಾ ಅಭಿಯಾನ್’ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಪಶ್ಚಿಮ ಬಂಗಾಳ ಸರ್ಕಾರದ ಸಚಿವಾಲಯದ ಕಡೆ ನುಗ್ಗಲು ಪ್ರಯತ್ನಿಸಿದಾಗ ಕೋಲ್ಕತ್ತ ಹಾಗೂ ನೆರೆಯ ಹೌರಾದ ಕೆಲವು ಪ್ರದೇಶಗಳಲ್ಲಿ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಂಗಳವಾರ ಸಂಘರ್ಷ ಉಂಟಾಯಿತು.
ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆಯ ಕಾರಣಕ್ಕೆ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು. ಈ ಒತ್ತಾಯದೊಂದಿಗೆ ರಾಜ್ಯದ ಸಚಿವಾಲಯ ತಲುಪಲು ಅವರು ಯತ್ನಿಸಿದರು.
ಎಂ.ಜಿ. ರಸ್ತೆ ಹಾಗೂ ಹೇಸ್ಟಿಂಗ್ಸ್ ರಸ್ತೆಯಲ್ಲಿ, ಪ್ರಿನ್ಸೇಪ್ ಘಾಟ್, ಸಂತರಾಗಾಛಿ ಮತ್ತು ಹೌರಾ ಮೈದಾನದ ಸಮೀಪ ಘರ್ಷಣೆ ನಡೆದಿದೆ. ಈ ವೇಳೆ ಪೊಲೀಸರಿಗೆ ಹಾಗೂ ಪ್ರತಿಭಟನಕಾರರಿಗೆ ಗಾಯಗಳಾಗಿವೆ.
ಭದ್ರತಾ ಪಡೆಗಳ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು, ಜಲಫಿರಂಗಿ ಬಳಸಿ ನೀರು ಹಾರಿಸಿದರು. ಅಲ್ಲದೆ, ಅಶ್ರುವಾಯು ಶೆಲ್ ಕೂಡ ಪ್ರಯೋಗಿಸಿದರು.
ರಾಜ್ಯದ ಸಚಿವಾಲಯದ ಕಡೆ ಸಾಗುವ ಮಾರ್ಗಕ್ಕೆ ಅಡ್ಡವಾಗಿ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಉರುಳಿಸಲು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ಯತ್ನಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರು ಪೊಲೀಸರನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದರು, ಅವರು ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
‘ಉದ್ರಿಕ್ತ ಗುಂಪುಗಳನ್ನು ನಿಯಂತ್ರಣಕ್ಕೆ ತರುವ ಕೆಲಸದಲ್ಲಿ ನಮಗೆ ಅನುಭವ ಇದೆ. ನಮ್ಮ ಅಧಿಕಾರಿಗಳು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಹಲವರನ್ನು ಬಂಧಿಸಿದ್ದೇವೆ. ಕಾನೂನಿಗೆ ಅನುಗುಣವಾಗಿ ಕ್ರಮ ಜರುಗಿಸಲಾಗುತ್ತದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಪೊಲೀಸರು ನಮಗೆ ಹೊಡೆದಿದ್ದು ಏಕೆ? ನಾವು ಕಾನೂನು ಉಲ್ಲಂಘಿಸಿಲ್ಲ. ಹತ್ಯೆಗೀಡಾದ ವೈದ್ಯೆಗೆ ನ್ಯಾಯ ಕೊಡಿಸಬೇಕು ಎಂದು ಕೋರಿ ನಾವು ಶಾಂತಿಯುತವಾಗಿ ರ್‍ಯಾಲಿ ನಡೆಸುತ್ತಿದ್ದೇವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೊಣೆ ಹೊತ್ತುಕೊಳ್ಳಬೇಕು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಮಹಿಳಾ ಪ್ರತಿಭಟನಕಾರರೊಬ್ಬರು ಹೇಳಿದರು.
ಇಂದು ಬಂಗಾಳ ಬಂದ್‌ಗೆ ಬಿಜೆಪಿ ಕರೆ
ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಮೇಲೆ ಪೊಲೀಸರು ಕ್ರಮ ಜರುಗಿಸಿರುವುದನ್ನು ಪ್ರತಿಭಟಿಸಿ ಬುಧವಾರ 12 ತಾಸುಗಳ ಪಶ್ಚಿಮ ಬಂಗಾಳ ಬಂದ್ ನಡೆಸಬೇಕು ಎಂದು ಬಿಜೆಪಿ ಕರೆ ನೀಡಿದೆ.
ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿಚಾರವಾಗಿ ಜನರಲ್ಲಿ ಇರುವ ನೋವನ್ನು ದುರ್ಬಳಕೆ ಮಾಡಿಕೊಂಡು, ರಾಜ್ಯದಲ್ಲಿ ಅಶಾಂತಿಗೆ ಪ್ರಚೋದನೆ ನೀಡಲು ಬಿಜೆಪಿ ಉದ್ದೇಶಿಸಿದೆ ಎಂಬುದನ್ನು ಬಂದ್ ಕರೆಯು ತೋರಿಸುತ್ತಿದೆ ಎಂದು ಆಡಳಿತಾರೂಢ ಟಿಎಂಸಿ ಆರೋಪಿಸಿದೆ.
ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಬಂದ್ ಶುರುವಾಗಲಿದೆ. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.
‘ಈ ಸರ್ವಾಧಿಕಾರಿ ಸರ್ಕಾರವು ಜನರ ದನಿಗೆ ಕಿವಿಗೊಡುತ್ತಿಲ್ಲ. ಹೀಗಾಗಿ ಬಂದ್‌ಗೆ ಕರೆ ನೀಡಬೇಕಾಗಿದೆ’ ಎಂದು ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ಸುಕಾಂತ ಮಜುಮ್‌ದಾರ್ ಹೇಳಿದ್ದಾರೆ.
‘ಛಾತ್ರ ಸಮಾಜ ಪ್ರಾಯೋಜಿತ ನಬನ್ನಾ ಅಭಿಯಾನ್‌ಗೆ ಬಿಜೆಪಿಯ ಬೆಂಬಲ ಇದೆ ಎಂಬುದನ್ನು ಹಿಂದಿನಿಂದಲೂ ಹೇಳುತ್ತಿದ್ದೇವೆ. ವಿದ್ಯಾರ್ಥಿಗಳ ವೇಷದಲ್ಲಿದ್ದ ಕಿಡಿಗೇಡಿಗಳು ತೊಂದರೆ ಸೃಷ್ಟಿಸಿದ್ದನ್ನು ಕಂಡಾಗ ಇದು ಗೊತ್ತಾಗುತ್ತದೆ’ ಎಂದು ಟಿಎಂಸಿಯ ಕುನಾಲ್ ಘೋಷ್ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಶಾಂತಿಯುತ ಪ್ರತಿಭಟನಕಾರರನ್ನು ಈ ರೀತಿ ನಡೆಸಿಕೊಂಡರೆ, ನಾವು ಇಡೀ ರಾಜ್ಯವನ್ನು ಬಂದ್ ಮಾಡಿಸುತ್ತೇವೆಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ
ಬುಧವಾರ ಬಂದ್‌ಗೆ ಅವಕಾಶ ಕೊಡುವುದಿಲ್ಲ. ಜನರು ಬಂದ್‌ನಲ್ಲಿ ಭಾಗಿಯಾಗಬಾರದು ಎಂದು ನಾವು ಒತ್ತಾಯಿಸುತ್ತಿದ್ದೇವೆಆಲಾಪನ್ ಬಂದೋಪಾಧ್ಯಾಯ ಮುಖ್ಯಮಂತ್ರಿಯವರ ಮುಖ್ಯ ಸಲಹೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.