ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರನ್ನು ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ನಿರ್ಬಂಧಿತ ರಜೆಯಲ್ಲಿ ತೆರಳುವಂತೆ ಸಂಸ್ಥೆ ಆದೇಶ ನೀಡಿದೆ.ಇದೀಗ ಜಂಟಿ ನಿರ್ದೇಶಕ ಎಂ.ನಾಗೇಶ್ವರ ರಾವ್ ಅವರನ್ನು ಸಿಬಿಐ ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟ ಸರ್ಕಾರಕ್ಕೆ ಮತ್ತು ಸಿಬಿಐ ಸಂಸ್ಥೆಗೆ ತಲೆನೋವು ತಂದೊಡ್ಡಿತ್ತು.ಇಬ್ಬರ ನಡುವಣ ಜಗಳದ ಕಿಡಿ ಕಳೆದ ಅಕ್ಟೋಬರ್‌ನಲ್ಲಿಯೇ ಕಾಣಿಸಿಕೊಂಡಿತ್ತು. ಅಸ್ತಾನಾ ಅವರಿಗೆ ವಿಶೇಷ ನಿರ್ದೇಶಕರಾಗಿ ಬಡ್ತಿ ನೀಡುವುದನ್ನು ಅಲೋಕ್ ವಿರೋಧಿಸಿದ್ದರು. ಅಸ್ತಾನಾ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳಿವೆ ಎಂದು ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ಅಲೋಕ್ ಅವರು ಪತ್ರ ಬರೆದಿದ್ದರು.
ಆದರೆ, ಅಸ್ತಾನಾ ಅವರ ಬಡ್ತಿ ತಡೆಯಲು ಅಲೋಕ್ ಅವರಿಗೆ ಸಾಧ್ಯವಾಗಲಿಲ್ಲ.
ನೇಮಕಾತಿಯಂತಹ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಪ್ರತಿನಿಧಿಯಾಗಿ ಅಸ್ತಾನಾ ಅವರು ಕೆಲಸ ಮಾಡಲಾಗದು ಎಂದು ಇದೇ ಜುಲೈನಲ್ಲಿ ಸಿವಿಸಿಗೆ ಅಲೋಕ್ ಅವರು ತಿಳಿಸಿದ್ದರು.
ಕಳೆದ ತಿಂಗಳು, ಅಲೋಕ್ ವಿರುದ್ಧವೂ ಅಸ್ತಾನಾ ಅವರು ಸಿವಿಸಿಗೆ ದೂರು ನೀಡಿ ತಮ್ಮ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇಬ್ಬರು ಅಧಿಕಾರಿಗಳ ಜಗಳ ತಾರಕಕ್ಕೇರುತ್ತಿದ್ದಂತೆ ಮಂಗಳವಾರ ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ ನೇಮಕಾತಿ ಸಮಿತಿಯ ತುರ್ತು ಸಭೆ ಕರೆದು ಈ ತೀರ್ಮಾನ ಕೈಗೊಂಡಿದ್ದಾರೆ.
ಇದನ್ನೂ ಓದಿ
ಕಲಹದ ಹಾದಿ
* ರಾಕೇಶ್ ಅಸ್ತಾನಾ ಅವರನ್ನು ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಿ 2016ರ ಡಿಸೆಂಬರ್‌ನಲ್ಲಿ ಸರ್ಕಾರವು ಆದೇಶ ಹೊರಡಿಸಿತು
* ಅಸ್ತಾನಾ ನೇಮಕದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ
* ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ ಅವರನ್ನು ನೇಮಿಸಿ 2017ರ ಜನವರಿ 19ರಂದು ಸರ್ಕಾರ ಆದೇಶ ಹೊರಡಿಸಿತು
* ಅಲೋಕ್ ವರ್ಮಾ ಅವರ ಆಕ್ಷೇಪದ ಮಧ್ಯೆಯೂ ಸಿಬಿಐ ವಿಶೇಷ ನಿರ್ದೇಶಕರಾಗಿ ಅಸ್ತಾನಾ ಅವರಿಗೆ ಬಡ್ತಿ ನೀಡಿದ್ದನ್ನು ಕೇಂದ್ರ ಜಾಗೃತ ಆಯೋಗ (ಸಿವಿಸಿ) ಅನುಮೋದಿಸಿತು
* ಸಿಬಿಐ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ತಮ್ಮನ್ನು ಪ್ರತಿನಿಧಿಸುವ ಅಧಿಕಾರ ಅಸ್ತಾನಾ ಅವರಿಗಿಲ್ಲ ಎಂದು ವರ್ಮಾ ಅವರು ಸಿವಿಸಿಗೆ ಪತ್ರ ಬರೆದರು
* ಇದೇ ಸೆಪ್ಟೆಂಬರ್‌ನಲ್ಲಿ ಅಸ್ತಾನಾ ಅವರು ವರ್ಮಾ ವಿರುದ್ಧ ಸಿವಿಸಿಗೆ ದೂರು ನೀಡಿದರು
* ಅಕ್ಟೋಬರ್ 15ರಂದು ಅಸ್ತಾನಾ ವಿರುದ್ಧ ಸಿಬಿಐನಲ್ಲೇ ಪ್ರಕರಣ ದಾಖಲಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.