ADVERTISEMENT

ಟಿಡಿಪಿ ಅಧಿಕಾರಕ್ಕೆ ಬಂದರೆ ‘ಸೂಪರ್ ಸಿಕ್ಸ್’ ಭರವಸೆ ಜಾರಿ: ನಾರಾ ಲೋಕೇಶ್‌

120 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಯಾತ್ರೆ ಆರಂಭಿಸಿದ ನಾರಾ ಲೋಕೇಶ್

ಪಿಟಿಐ
Published 11 ಫೆಬ್ರುವರಿ 2024, 13:59 IST
Last Updated 11 ಫೆಬ್ರುವರಿ 2024, 13:59 IST
ನಾರಾ ಲೋಕೇಶ್
ನಾರಾ ಲೋಕೇಶ್   

ಇಚ್ಛಾಪುರಂ: ಆಂಧ್ರಪ್ರದೇಶದಲ್ಲಿನ 120 ವಿಧಾನಸಭಾ ಕ್ಷೇತ್ರಗಳ ಜನಸಾಮಾನ್ಯರು ಸೇರಿದಂತೆ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ತಲುಪಲು ತೆಲುಗುದೇಶಂ (ಟಿಡಿಪಿ) ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್‌ ಅವರು ಭಾನುವಾರ ಶ್ರೀಕಾಕುಳಂ ಜಿಲ್ಲೆಯ ಇಚ್ಛಾಪುರಂನಿಂದ ರಾಜಕೀಯ ಯಾತ್ರೆ ಆರಂಭಿಸಿದರು. 

3,132 ಕಿ.ಮೀ ಉದ್ದದ ‘ಯುವ ಗಳಂ’ ಪಾದಯಾತ್ರೆ ಕೊನೆಗೊಳಿಸಿದ ಸ್ಥಳದಿಂದಲೇ ಆರಂಭವಾದ ‘ಶಂಕರವರ್ಮ’ ಹೆಸರಿನ ಯಾತ್ರೆಯು, ಟಿಡಿಪಿ ಅಧಿಕಾರಕ್ಕೆ ಬಂದರೆ ಜಾರಿಗೊಳಿಸಲಿರುವ ಭವಿಷ್ಯದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ತಳಮಟ್ಟದಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಸನ್ಮಾನಿಸುವ ಉದ್ದೇಶವನ್ನು ಹೊಂದಿದೆ.

‘ಯುವ ಗಳಂ’ ಪಾದಯಾತ್ರೆಯು ತಲುಪದ ಸ್ಥಳಗಳಲ್ಲಿ ಈ ರಾಜಕೀಯ ಯಾತ್ರೆ ನಡೆಯಲಿದೆ.

ADVERTISEMENT

‘ಟಿಡಿಪಿ ಅಧಿಕಾರಕ್ಕೆ ಬಂದರೆ ‘ಸೂಪರ್ ಸಿಕ್ಸ್‌’ ಭರವಸೆಗಳನ್ನು ಜಾರಿಗೆ ತರಲಾಗುವುದು. ಇದರಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ವರ್ಷಕ್ಕೆ ಪ್ರತಿ ಮನೆಗೆ ಮೂರು ಗ್ಯಾಸ್‌ ಸಿಲಿಂಡರ್‌ ಉಚಿತ, 20 ಲಕ್ಷ ಉದ್ಯೋಗಾವಕಾಶ ಅಥವಾ ತಿಂಗಳಿಗೆ ₹3 ಸಾವಿರ ನಿರುದ್ಯೋಗ ಭತ್ಯೆ ನೀಡುವುದು ಸೇರಿವೆ’ ಎಂದು ನಾರಾ ಲೋಕೇಶ್‌ ಹೇಳಿದರು.

‘ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿ ಮುಗಿಯುತ್ತಾ ಬಂದಿದೆ. 4 ವರ್ಷ 10 ತಿಂಗಳ ಅವಧಿಯಲ್ಲಿ ಶಿಕ್ಷಕರ ನೇಮಕಾತಿ ಅಧಿಸೂಚನೆ ಪ್ರಕಟಿಸದೆ ಆಂಧ್ರಪ್ರದೇಶದ ಯುವ ಸಮೂಹವನ್ನು ವಂಚಿಸಿದೆ’ ಎಂದು ನಾರಾ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.