ADVERTISEMENT

ಜನರ ಪಾಲಿಗೆ ವಿಪತ್ತಾಗಿದ್ದ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ: ಮೋದಿ

ಪಿಟಿಐ
Published 30 ಮಾರ್ಚ್ 2021, 14:41 IST
Last Updated 30 ಮಾರ್ಚ್ 2021, 14:41 IST
ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ (ಚಿತ್ರ ಕೃಪೆ: @BJP4India ಟ್ವಿಟರ್‌ ಖಾತೆ)
ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ (ಚಿತ್ರ ಕೃಪೆ: @BJP4India ಟ್ವಿಟರ್‌ ಖಾತೆ)   

ಪುದುಚೇರಿ: ವಿ. ನಾರಾಯಣಸ್ವಾಮಿ ನೇತೃತ್ವದ ಈ ಹಿಂದಿನ ಪುದುಚೇರಿ ಕಾಂಗ್ರೆಸ್ ಸರ್ಕಾರ ಜನರ ಪಾಲಿಗೆ ವಿಪತ್ತಾಗಿ ಪರಿಣಮಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಪುದುಚೇರಿಯಲ್ಲಿ ಚುನಾವಣಾ ಪ್ರಚಾರ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ನಾರಾಯಣಸ್ವಾಮಿ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿತ್ತು ಎಂದು ಹೇಳಿದ್ದಾರೆ.

ಎನ್‌ಡಿಎ ಮೈತ್ರಿಕೂಟವು ಅಭಿವೃದ್ಧಿಗೆ ಬದ್ಧವಾಗಿದೆ. ಚುನಾವಣೆ ಎದುರಿಸುತ್ತಿರುವ ರಾಜ್ಯಗಳಾದ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಲ್ಲಿ ಎನ್‌ಡಿಎ ಮೈತ್ರಿಕೂಟದ ಪರ ಅಲೆ ಇದೆ ಎಂದು ಮೋದಿ ಹೇಳಿದ್ದಾರೆ.

ಪುದುಚೇರಿಯಲ್ಲಿ ಏಪ್ರಿಲ್ 6ರಂದು ಮತದಾನ ನಡೆಯಲಿದೆ.

ಕಳೆದ ಕೆಲವು ವರ್ಷಗಳಲ್ಲಿ ಕಳಪೆ ಸಾಧನೆ ತೋರಿದ ಕಾಂಗ್ರೆಸ್ ಸರ್ಕಾರಗಳ ಪಟ್ಟಿಯಲ್ಲಿ ನಾರಾಯಣಸ್ವಾಮಿ ಸರ್ಕಾರಕ್ಕೆ ವಿಶೇಷ ಸ್ಥಾನವಿದೆ. ಆ ಹೈಕಮಾಂಡ್ ಸರ್ಕಾರವು, ದೆಹಲಿ ಹೈಕಮಾಂಡ್ ಸರ್ಕಾರವು ಶಿಕ್ಷಣ, ವೈದ್ಯಕೀಯ, ಎಸ್‌ಸಿ/ಎಸ್‌ಟಿ ಸಮುದಾಯಗಳ ಕಲ್ಯಾಣ ಸೇರಿದಂತೆ ಎಲ್ಲ ರಂಗಗಳಲ್ಲೂ ವಿಫಲವಾಗಿತ್ತು. ಸರ್ಕಾರದಲ್ಲಿ ಲೂಟಿ ಮಾಡುವುದಕ್ಕಷ್ಟೇ ಪ್ರಾಮುಖ್ಯತೆ ಇತ್ತು ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರೇ ಭ್ರಷ್ಟಾಚಾರದ ಕುರಿತು ಮಾತನಾಡುತ್ತಿದ್ದರು. ಈ ಬಾರಿಯ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಅವರಿಗೇ ಟಿಕೆಟ್ ನೀಡಲಾಗಿಲ್ಲ. ಇಷ್ಟು ವರ್ಷಗಳ ನಿಷ್ಠೆ, ನಾಯಕನ ಚಪ್ಪಲಿಗಳನ್ನು ಎತ್ತುವುದು, ನಾಯಕನನ್ನು (ರಾಹುಲ್ ಗಾಂಧಿ) ಮೆಚ್ಚಿಸಲು ತಪ್ಪು ಅನುವಾದ ಮಾಡುವುದು, ಇಷ್ಟೆಲ್ಲಾ ಮಾಡಿದರೂ ಟಿಕೆಟ್ ದೊರೆಯದಿರುವುದು ಅವರ ಸರ್ಕಾರ ಎಷ್ಟು ಅನಾಹುತಕಾರಿ ಆಗಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.