ಮುಂಬೈ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಮೊಕದ್ದಮೆಯ ತನಿಖೆಯನ್ನು ಪೂರ್ಣಗೊಳಿಸಲಾಗಿದೆ. ತನಿಖೆಯನ್ನು ಸಮಾಪ್ತಿಗೊಳಿಸುವಂತೆ ಶಿಫಾರಸು ಮಾಡಿರುವ ತನಿಖಾಧಿಕಾರಿಯು ಸಂಬಂಧಪಟ್ಟ ಅಧಿಕಾರಿಗೆ ಈ ಕುರಿತು ವರದಿ ಸಲ್ಲಿಸಿದ್ದಾರೆ ಎಂದು ಬಾಂಬೆ ಹೈಕೋರ್ಟ್‌ಗೆ ಸಿಬಿಐ ಸೋಮವಾರ ತಿಳಿಸಿದೆ.
ದಾಭೋಲ್ಕರ್ ಹತ್ಯೆ ಪ್ರಕರಣದ ತನಿಖೆಯ ಸದ್ಯದ ಸ್ಥಿತಿ ಕುರಿತು ಮಾಹಿತಿ ನೀಡುವಂತೆ ಹೈಕೋರ್ಟ್ ಈ ತಿಂಗಳ ಆರಂಭದಲ್ಲಿ ಹೇಳಿತ್ತು. ಈ ಮೊಕದ್ದಮೆಯಲ್ಲಿ ಈ ವರೆಗೂ ಐವರು ಆರೋಪಿಗಳ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ ಎಂದು ಸಿಬಿಐ ಪರವಾಗಿ ಹೈಕೋರ್ಟ್‌ನಲ್ಲಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್(ಎಎಸ್‌ಜಿ) ಅನಿಲ್ ಸಿಂಗ್ ಅವರು ನ್ಯಾಯಮೂರ್ತಿಗಳಾದ ಎ.ಎಸ್. ಗಡ್ಕರಿ ಮತ್ತು ಪಿ.ಡಿ. ನಾಯಕ್ ಅವರಿದ್ದ ವಿಭಾಗೀಯ ಪೀಠಕ್ಕೆ ತಿಳಿಸಿದರು.
ಈ ಮೊಕದ್ದಮೆಯ ತನಿಖೆಯನ್ನು ಸಿಬಿಐ ಸಂಪೂರ್ಣಗೊಳಿಸಿದೆ. 32 ಸಾಕ್ಷಿಗಳಲ್ಲಿ 15 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಮೊಕದ್ದಮೆ ಸಮಾಪ್ತಿಗೊಳಿಸುವಂತೆ ಶಿಫಾರಸು ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ತನಿಖಾಧಿಕಾರಿಯು ವರದಿ ಸಲ್ಲಿಸಿದ್ದಾರೆ. ಅಂತಿಮ ನಿರ್ಧಾರವನ್ನು ಸಂಬಂಧಪಟ್ಟ ಅಧಿಕಾರಿ ತೆಗೆದುಕೊಳ್ಳಬೇಕಿದೆ ಎಂದು ಅನಿಲ್ ಸಿಂಗ್ ಹೇಳಿದ್ದಾರೆ. ಜೊತೆಗೆ, ಸಮಾಪ್ತಿ ವರದಿ ಕುರಿತು ನಿರ್ಧಾರ ಕೈಗೊಳ್ಳಲು ಸಿಬಿಐಗೆ ಮೂರು ವಾರಗಳ ಕಾಲಾವಕಾಶವನ್ನೂ ನೀಡುವಂತೆಯೂ ಅವರು ಪೀಠಕ್ಕೆ ಮನವಿ ಮಾಡಿದ್ದಾರೆ.
ಮನವಿಗೆ ಸಮ್ಮತಿಸಿದ ಹೈಕೋರ್ಟ್, ಈ ಮೊಕದ್ದಮೆಯ ಮುಂದಿನ ವಿಚಾರಣೆಯನ್ನು ಮೂರು ವಾರಗಳ ನಂತರ ನಿಗದಿಪಡಿಸಿದೆ.
ಇದೇ ವೇಳೆ, ಸಿಬಿಐ ತನಿಖೆ ಕುರಿತು ಹೈಕೋರ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ದಾಭೋಲ್ಕರ್ ಮಗಳ ಪರ ವಕೀಲರು, ಈ ಮೊಕದ್ದಮೆಯ ತನಿಖೆಯನ್ನು ಸಿಬಿಐ ಸಮರ್ಪಕವಾಗಿ ನಡೆಸಿಲ್ಲ. ಮೊಕದ್ದಮೆ ಕುರಿತ ಸಾಕಷ್ಟು ಅಂಶಗಳ ಕುರಿತು ಇನ್ನೂ ತನಿಖೆ ನಡೆಸಬೇಕಿದೆ ಎಂದಿದ್ದಾರೆ. ಜೊತೆಗೆ, ಈ ತನಿಖೆಯ ಪ್ರಕ್ರಿಯೆಗಳ ಮೇಲ್ವಿಚಾರಣೆ ನಡೆಸುವಂತೆ ಅವರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿ ಸಂಸ್ಥಾಪಕ ನರೇಂದ್ರ ದಾಭೋಲ್ಕರ್ ಅವರನ್ನು 2013ರ ಆಗಸ್ಟ್‌ನಲ್ಲಿ ಪುಣೆಯಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಆರೋಪಿಗಳು ಮೂಲಭೂತವಾದಿ ಸಂಘಟನೆಯಾದ ‘ಸನಾತನ ಸಂಸ್ಥಾ’ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.