ಪಾರೊ: ದ್ವಿಪಕ್ಷೀಯ ಸಂಬಂಧ ವೃದ್ಧಿ ಹಾಗೂ ಮಾತುಕತೆ ಉದ್ದೇಶದಿಂದ ಎರಡು ದಿನಗಳ ಭೂತಾನ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯರು ಭೂತಾನ್‌ನಿಂದ ಕಲಿಯುತ್ತಿದ್ದಾರೆ ಎಂದಿದ್ದಾರೆ.
1.3 ಶತಕೋಟಿಭಾರತೀಯರು ನಿಮ್ಮನ್ನು ಹೆಮ್ಮೆ ಮತ್ತು ಖುಷಿಯಿಂದ ಪ್ರೋತ್ಸಾಹಿಸುವುದು ಮಾತ್ರವಲ್ಲದೆ ನಿಮಗೆ ಸಹಯೋಗ ನೀಡುತ್ತಾರೆ. ನಿಮ್ಮಿಂದ ಕಲಿಯುತ್ತಾರೆ ಎಂದಿದ್ದಾರೆ ಮೋದಿ.
ಭಾನುವಾರ ಇಲ್ಲಿನ ರಾಯಲ್ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮೋದಿ, ಸಹಯೋಗ ಬಯಸುವ ಸಾಂಪ್ರದಾಯಿಕ ವಲಯಗಳಿಂದಾಚೆಗೆ ಶಾಲೆಯಿಂದ ಆರಂಭವಾಗಿ ಬಾಹ್ಯಾಕಾಶದವರೆಗೆ, ಡಿಜಿಟಲ್ ಪೇಮೆಂಟ್‌ನಿಂದ ವಿಪತ್ತು ನಿರ್ವಹಣೆವರೆಗೆ ಭಾರತ ನಿಮ್ಮಸಹಕಾರ ಬಯಸುತ್ತದೆ. ಜಗತ್ತು ಇದೀಗ ಹೆಚ್ಚಿನ ಅವಕಾಶಗಳನ್ನ ನೀಡುತ್ತಿದೆ ಎಂದಿದ್ದಾರೆ.
ಅಸಾಮಾನ್ಯ ಸಂಗತಿಗಳನ್ನು ಮಾಡಲು ನಿಮ್ಮಲ್ಲಿ ಶಕ್ತಿ ಮತ್ತು ಸಾಮರ್ಥ್ಯವಿದೆ. ಇದು ಮುಂದಿನ ಪೀಳಿಗೆ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮಲ್ಲಿರುವ ಪ್ರತಿಭೆಯನ್ನು ಪತ್ತೆ ಹಚ್ಚಿ ಅದರಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಿ ಎಂದು ಹೇಳಿದ್ದಾರೆ.
ಭೂತಾನ್‌ನ ಸ್ವಂತ ಉಪಗ್ರಹವನ್ನುಉಡ್ಡಯಣ ಮಾಡುವುದಕ್ಕಾಗಿ ಅದರ ವಿನ್ಯಾಸ ಬಗ್ಗೆ ಕಲಿಯಲು ಭಾರತಕ್ಕೆ ಬರಲು ಸಿದ್ಧರಾಗಿರುವ ಭೂತಾನ್‌ನ ಯುವ ವಿಜ್ಞಾನಿಗಳಿಗೆ ಪ್ರಧಾನಿ ಸ್ವಾಗತ ಕೋರಿದ್ದಾರೆ.
ಭಾರತ- ಭೂತಾನ್ ಸಂಬಂಧದ ಬಗ್ಗೆ ಮಾತನಾಡಿದ ಮೋದಿ, ಕಲಿಕೆಯ ನಮ್ಮ ಸಂಬಂಧ ಪುರಾತನವೂ ಆಧುನಿಕವೂ ಆಗಿದೆ. 20ನೇ ಶತಮಾನದಲ್ಲಿ ಹಲವಾರು ಭಾರತೀಯರು ಭೂತಾನ್‌ಗೆ ಶಿಕ್ಷಕರಾಗಿ ಬಂದಿದ್ದರು. ಭೂತಾನ್‌ನ ಹಳೆಯ ಪೀಳಿಗೆಯವರು ತಮ್ಮ ಶಿಕ್ಷಣದ ವೇಳೆ ಕನಿಷ್ಟ ಒಬ್ಬ ಭಾರತೀಯ ಶಿಕ್ಷಕರನ್ನು ಹೊಂದಿರುತ್ತಾರೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.