ನವದೆಹಲಿ: ಮೋದಿ ಅವರು ತಮ್ಮ ಎರಡನೇ ಅವಧಿಗೆ ಸಂಪುಟ ರಚಿಸುವ ನಿಟ್ಟಿನಲ್ಲಿ ಎಲ್ಲ ಸಂಪ್ರದಾಯಗಳನ್ನು ಮುರಿದು ಮುನ್ನಡೆದಿದ್ದಾರೆ. ಜಾತಿ ರಾಜಕೀಯವನ್ನು ಮೀರಿಸಿ ಅನೇಕ ಕಡೆಗಳಲ್ಲಿ ಚುನಾವಣೆಯನ್ನು ಗೆದ್ದಿರುವ ಮೋದಿ ಅವರು ಸಂಪುಟ ರಚನೆಯಲ್ಲೂ ಜಾತಿಗೆ ಅಷ್ಟು ಪ್ರಾಧಾನ್ಯ ನೀಡಲಿಲ್ಲ.
ಹಿರಿಯ ಮುಖಂಡರಿಗೆ ಆದ್ಯತೆ ನೀಡಬೇಕು ಎಂಬ ಸಂಪ್ರದಾಯಕ್ಕೂ ಮೋದಿ ಅಷ್ಟಾಗಿ ಜೋತು ಬಿದ್ದಿಲ್ಲ. ಹಿಂದಿನ ಸಂಪುಟದಲ್ಲಿ ಸಚಿವರಾದ ಅನೇಕರನ್ನು ಕೈಬಿಟ್ಟಿರುವ ಮೋದಿ, ಕೆಲವು ಹೊಸಬರಿಗೆ ಆದ್ಯತೆ ನೀಡಿದ್ದಾರೆ. ಕಳೆದ ಬಾರಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದಿರುವವರನ್ನು ಕೈಬಿಟ್ಟಿದ್ದಾರೆ. ಸಂಪುಟದಲ್ಲಿ 19 ಮಂದಿ ಹೊಸಬರಿಗೆ ಅವಕಾಶ ನೀಡಿದ್ದಾರೆ.
ಬಿಜೆಪಿಯ ಮುಖ್ಯಸ್ಥರಾಗಿ ನಾಲ್ಕು ರಾಜ್ಯಗಳಲ್ಲಿ ಪಕ್ಷದ ಭರ್ಜರಿ ಗೆಲುವಿಗೆ ಕಾರಣರಾಗಿದ್ದ ನಾಲ್ಕು ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 18 ಸ್ಥಾನಗಳನ್ನು ಪಡೆದಿರುವುದರಿಂದ ಮತ್ತು ಸದ್ಯದಲ್ಲೇ ಅಲ್ಲಿ ವಿಧಾನಸಭಾ ಚುನಾವಣೆಯೂ ಬರಲಿರುವ ಕಾರಣಕ್ಕೆ ಆ ರಾಜ್ಯದ ದೇಬಶ್ರೀ ಚೌಧರಿ ಅವರಿಗೆ ಸ್ಥಾನ ಲಭಿಸಿದೆ.
ಬಿಜೆಪಿಗೆ 303 ಸ್ಥಾನಗಳು ಲಭಿಸಿದ್ದರ ಪರಿಣಾಮ ಎನ್‌ಡಿಎ ಮಿತ್ರಪಕ್ಷಗಳ ಮೆಲಾಗಿದೆ. ಎನ್‌ಡಿಎ ಒಳಗಿರುವ ಪಕ್ಷಗಳೆಲ್ಲ ತಲಾ ಒಂದು ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾದ ಸ್ಥಿತಿ ಬಂದಿದೆ. ಈ ಕಾರಣಕ್ಕೇ ಜೆಡಿಯು ಸಂಪುಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದೆ. ಹೊಸ ಸಂಪುಟದಲ್ಲಿ ಆರು ಮಹಿಳೆಯರು ಸ್ಥಾನ ಪಡೆದಿದ್ದಾರೆ.
37ಜನರು ಹೊರಕ್ಕೆ: ಸುಷ್ಮಾ ಸ್ವರಾಜ್, ಜೆ.ಪಿ. ನಡ್ಡಾ ಸೇರಿದಂತೆ 37 ಮಂದಿಯನ್ನು ಈ ಬಾರಿ ಕೈಬಿಡಲಾಗಿದೆ. ಇವರಲ್ಲಿ ಸುಷ್ಮಾ ಅವರಿಗೆ ಆರೋಗ್ಯದ ಸಮಸ್ಯೆಯಾದರೆ ಜೆ.ಪಿ. ನಡ್ಡಾ ಅವರು ಬಿಜೆಪಿ ಅಧ್ಯಕ್ಷರಾಗುವ ನಿರೀಕ್ಷೆ ಇದೆ.
ಕಳೆದ ಸಂಪುಟದಲ್ಲಿದ್ದ 25 ಸಂಪುಟದರ್ಜೆ ಸಚಿವರಲ್ಲಿ 9 ಮಂದಿ ಈ ಬಾರಿ ಸ್ಥಾನ ಕಳೆದುಕೊಂಡಿದ್ದಾರೆ. ಕರ್ನಾಟಕದ ಅನಂತಕುಮಾರ್ ಹೆಗಡೆ ಹಾಗೂ ರಮೇಶ್ ಜಿಗಜಿಣಗಿ ಸ್ಥಾನ ಕಳೆದುಕೊಂಡಿದ್ದಾರೆ.
ಸಂಪುಟದಲ್ಲಿ ಇನ್ನೂ 23 ಸ್ಥಾನಗಳು ಖಾಲಿ ಇರುವುದರಿಂದ ಅಪ್ನಾ ದಳದ ಅನುಪ್ರಿಯಾ ಪಟೇಲ್ ಹಾಗೂ ಇತರ ಕೆಲವರು ಮುಂದಿನ ದಿನಗಳಲ್ಲಿ ಸಂಪುಟ ಸೇರಬಹುದು ಎಂದು ನಿರೀಕ್ಷಿಸಲಾಗಿದೆ.
ಸಚಿವರ ಪಟ್ಟಿ...
ಅಮಿತ್ ಶಾ (54) ಬಿಜೆಪಿ
ವಿದ್ಯಾರ್ಹತೆ: ಬಿಎಸ್‌ಸಿ (ಬಯೊ ಕೆಮಿಸ್ಟ್ರಿ)
ಕ್ಷೇತ್ರ: ಗಾಂಧಿನಗರ/ ಗುಜರಾತ್
ಬಿಜೆಪಿಯ ‘ಚುನಾವಣಾ ಚಾಣಕ್ಯ’ ಎನಿಸಿಕೊಂಡಿರುವ ಅಮಿತ್ ಶಾ ಪಕ್ಷವನ್ನು ಎರಡು ಬಾರಿ ಅಧಿಕಾರಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಮೋದಿ ಅವರ ಅತ್ಯಂತ ಆತ್ಮೀಯರಾಗಿರುವ ಇವರು ಗುಜರಾತ್‌ನಿಂದ ನಾಲ್ಕು ಬಾರಿ ಶಾಸಕರಾಗಿ, ಸಚಿವರೂ ಆಗಿದ್ದರು. 2014ರ ಲೋಕಸಭಾ ಚುನಾವಣೆಗೂ ಮುನ್ನ ಅಮಿತ್ ಶಾ ಅವರನ್ನು ಉತ್ತಪಪ್ರದೇಶದ ಪ್ರಭಾರಿಯಾಗಿ ನೇಮಕ ಮಾಡಲಾಗಿತ್ತು.
ಪರಿಣಾಮ 2014ರ ಚುನಾವಣೆಯಲ್ಲಿ ಬಿಜೆಪಿ ಅಲ್ಲಿ 71 ಸ್ಥಾನಗಳನ್ನು ಗೆದ್ದಿತು. 2014ರಲ್ಲಿ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಬಾರಿ ಗಾಂಧಿನಗರ ಕ್ಷೇತ್ರದಿಂದ ಸಂಸತ್ತನ್ನು ಪ್ರವೇಶಿಸಿ, ಮೊದಲಬಾರಿಗೆ ಕೇಂದ್ರದಲ್ಲಿ ಸಚಿವರಾಗಿದ್ದಾರೆ.
**
ನಿತಿನ್ ಗಡ್ಕರಿ (62), ಬಿಜೆಪಿ
ವಿದ್ಯಾರ್ಹತೆ: ಎಂ.ಕಾಂ. ಎಲ್‌ಎಲ್‌ಬಿ, ವ್ಯಾಪಾರ ನಿರ್ವಹಣೆಯಲ್ಲಿ ಡಿಪ್ಲೋಮಾ
ಕ್ಷೇತ್ರ/ರಾಜ್ಯ: ನಾಗ್ಪುರ (ಮಹಾರಾಷ್ಟ್ರ)
ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರು, ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಸಚಿವರಾಗಿ, ರಸ್ತೆ ಸಾರಿಗೆ, ಹೆದ್ದಾರಿ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಖಾತೆಗಳನ್ನು ನಿಭಾಯಿಸಿದ್ದರು. ಎಬಿವಿಪಿಯಲ್ಲಿ ವಿದ್ಯಾರ್ಥಿ ನಾಯಕರಾಗಿದ್ದ ಗಡ್ಕರಿ, ಬಿಜೆಪಿ ಯುವ ಮೋರ್ಚಾ ಸೇರಿ ರಾಜಕೀಯ ಜೀವನ ಆರಂಭಿಸಿದರು. ಪಕ್ಷದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಗಡ್ಕರಿ ಅವರಿಗೆ ‘ಮೂಲಸೌಕರ್ಯ’ ಅತ್ಯಂತ ಆಸಕ್ತಿಯ ವಿಷಯ.
ಮಹಾರಾಷ್ಟ್ರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಸಂದರ್ಭದಲ್ಲಿ ಮುಂಬೈನಲ್ಲಿ ಹಲವು ಮೇಲ್ಸುತುವೆಗಳನ್ನು ನಿರ್ಮಿಸಿದ್ದರು ಮತ್ತು ಮುಂಬೈ–ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಿಸಿದ್ದು ಖ್ಯಾತಿ ತಂದುಕೊಟ್ಟಿತು. ಖಾಸಗೀಕರಣಕ್ಕೆ ಆದ್ಯತೆ ನೀಡುವ ಗಡ್ಕರಿ ಬೃಹತ್ ಯೋಜನೆಗಳಿಗೆ ಆದ್ಯತೆ ನೀಡುತ್ತಾರೆ. ಇವರ ಕೈಗೊಂಡ ಯೋಜನೆಗಳನ್ನು ವಿರೋಧ ಪಕ್ಷದ ಸದಸ್ಯರು ಸೇರಿದಂತೆ ಎಲ್ಲರೂ ಶ್ಲಾಘಿಸಿದ್ದರು. ಪ್ರಧಾನಿ ಹುದ್ದೆಗೂ ಇವರ ಹೆಸರು ಚರ್ಚೆಗೆ ಬಂದಿತ್ತು.
**
ರಾಮ್‌ವಿಲಾಸ್ ಪಾಸ್ವಾನ್ (72) ಎಲ್‌ಜೆಪಿ
ವಿದ್ಯಾರ್ಹತೆ: ಎಂ.ಎ, ಎಲ್‌ಎಲ್‌ಬಿ
ರಾಜ್ಯಸಭೆಯಿಂದ ಆಯ್ಕೆಯಾಗಬೇಕಿದೆ
ಎಲ್‌ಜೆಪಿ ಮುಖ್ಯಸ್ಥರಾಗಿರುವ ಮಾಜಿ ಸಚಿವ ಪಾಸ್ವಾನ್ ಈ ಬಾರಿ ಚುನಾವಣೆಗೆ ಸ್ಪರ್ಧಿಸಲಿಲ್ಲ. ಬಿಹಾರದಿಂದ ಅವರನ್ನು ರಾಜ್ಯಸಭೆಗೆ ಆಯ್ಕೆಮಾಡುವ ನಿರೀಕ್ಷೆ ಇದೆ. 1977ರಿಂದ ಲೋಕಸಭೆಗೆ ಆಯ್ಕೆಯಾಗುತ್ತಾ ಬಂದಿರುವ ಪಾಸ್ವಾನ್ ಅವರಿಗೆ ಆರು ಮಂದಿ ಪ್ರಧಾನಿಗಳ ಜೊತೆಗೆ ಕೇಂದ್ರದಲ್ಲಿ ಸಚಿವರಾಗಿ ಕೆಲಸಮಾಡಿರುವ ಅನುಭವ ಇದೆ. ಜನರ ನಾಡಿಮಿಡಿತವನ್ನು ಅರಿಯುವಲ್ಲಿ ಪಾಸ್ವಾನ್‌ಗೆ ಸರಿಸಾಟಿ ಯಾರೂ ಇಲ್ಲ ಎಂಬ ಮಾತಿದೆ.
**
ರವಿಶಂಕರ ಪ್ರಸಾದ್ (64) ಬಿಜೆಪಿ
ವಿದ್ಯಾರ್ಹತೆ: ಎಂ.ಎ, ಎಲ್‌ಎಲ್‌ಬಿ
ಕ್ಷೇತ್ರ: ಪಟ್ನಾಸಾಹಿಬ್/ ಬಿಹಾರ
ಪಟ್ನಾ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದ ರವಿಶಂಕರ್ ಅವರು ಮೇವು ಹಗರಣದಲ್ಲಿ ಲಾಲು ವಿರುದ್ಧ ವಾದಿಸಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆದರು. ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ, ವಾಜಪೇಯಿ ನೇತೃತ್ವದ ಕೆಂದ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ನೇಮಕ ಮಾಡಲಾಯಿತು. ಮೋದಿ ನೇತೃತ್ವದ ಸರ್ಕಾರದಲ್ಲಿ ಸಂಪುಟದರ್ಜೆಯ ಸಚಿವರಾಗಿ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಶತ್ರುಘ್ನ ಸಿನ್ಹಾ ಅವರನ್ನು ಸೋಲಿಸಿ, ಇದೇ ಮೊದಲಬಾರಿಗೆ ಅವರು ಲೋಕಸಭೆ ಪ್ರವೇಶಿಸಿದ್ದಾರೆ.
**
ಪಿಯೂಷ್ ಗೊಯಲ್ (55), ಬಿಜೆಪಿ
ವಿದ್ಯಾರ್ಹತೆ: ಚಾರ್ಟರ್ಡ್ ಅಕೌಂಟಂಟ್ ಮತ್ತು ಕಾನೂನು ಪದವಿ.
ಕ್ಷೇತ್ರ/ರಾಜ್ಯ: ಮುಂಬೈ
ರಾಜ್ಯಸಭಾ ಸದಸ್ಯರಾಗಿರುವ ಪಿಯೂಷ್ ಗೊಯಲ್, ಎನ್‌ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ಸಚಿವರಾಗಿ ರೈಲ್ವೆ, ಕಲ್ಲಿದ್ದಲು, ವಿದ್ಯುತ್, ನವೀಕರಿಸಬಹುದಾದ ಇಂಧನ, ಗಣಿ ಖಾತೆಗಳನ್ನು ನಿಭಾಯಿಸಿದ್ದಾರೆ. ಹಂಗಾಗಿ ಹಣಕಾಸು ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಅವರು 2019ರ ಬಜೆಟ್ ಮಂಡಿಸಿದ್ದರು. 34 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಪಕ್ಷದಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿ ಮತ್ತು ರಾಷ್ಟ್ರೀಯ ಖಜಾಂಚಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಕಂಪನಿಗಳ ಬೆಳವಣಿಗೆಗೆ ಕಾರ್ಯತಂತ್ರ ರೂಪಿಸಲು ಆಡಳಿತ ಮಂಡಳಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿರುವ ಪಿಯೂಷ್, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾದ ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ತಂದೆ ದಿವಂಗತ ವೇದಪ್ರಕಾಶ್ ಗೋಯಲ್ ಅವರು ಕೇಂದ್ರ ಸಚಿವರಾಗಿದ್ದರು ಮತ್ತು ಬಿಜೆಪಿಯ ರಾಷ್ಟ್ರೀಯ ಖಜಾಂಚಿಯಾಗಿದ್ದರು. ಇವರ ತಾಯಿ ಚಂದ್ರಕಾಂತಾ ಗೋಯಲ್ ಅವರು ಮೂರು ಬಾರಿ ಮುಂಬೈನಿಂದ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದರು.
**
ನಿರ್ಮಲಾ ಸೀತಾರಾಮನ್ (60), ಬಿಜೆಪಿ
ವಿದ್ಯಾರ್ಹತೆ: ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
ಕ್ಷೇತ್ರ/ರಾಜ್ಯ: ಮದುರೈ (ತಮಿಳುನಾಡು)
ರಾಜ್ಯಸಭಾ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್ ಅವರು, 2017ರಲ್ಲಿ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇಂದಿರಾಗಾಂಧಿ ಬಳಿಕ ರಕ್ಷಣಾ ಖಾತೆ ನಿಭಾಯಿಸಿದ ಮೊದಲ ಮಹಿಳೆ ಎನ್ನುವ ಖ್ಯಾತಿ ಇವರದ್ದು. 2008ರಲ್ಲಿ ಬಿಜೆಪಿ ಸೇರಿದ ಇವರು ವಕ್ತಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಸೇನೆ, ವಾಯು ಪಡೆ ಮತ್ತು ನೌಕಾಪಡೆ ಬಲವರ್ಧನೆಗೆ ಶ್ರಮಿಸಿದ ಇವರು, ರಫೇಲ್ ಯುದ್ಧ ವಿಮಾನ ಖರೀದಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಸರ್ಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.
ತಮಿಳುನಾಡಿನ ಮದುರೈನಲ್ಲಿ ಜನಿಸಿದ ಸೀತಾರಾಮನ್, ಜವಾಹರಾಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರುವ ಸೀತಾರಾಮನ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅಧ್ಯಯನ ಮಾಡಿದ್ದಾರೆ.
**
ಧರ್ಮೇಂದ್ರ ಪ್ರಧಾನ್ (60), ಬಿಜೆಪಿ
ವಿದ್ಯಾರ್ಹತೆ: ಎಂ.ಎ.
ಕ್ಷೇತ್ರ/ರಾಜ್ಯ: ಒಡಿಶಾ
ಕೇಂದ್ರದ ಮಾಜಿ ಸಚಿವ ದೇಬೇಂದ್ರ ಪ್ರಧಾನ್ ಅವರ ಪುತ್ರ ಧರ್ಮೇಂದ್ರ ಪ್ರಧಾನ್, ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿ ಅನಿಲ ಖಾತೆ ಸಚಿವರಾಗಿದ್ದರು. ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಯೋಜನೆ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2004ರಲ್ಲಿ ಸಂಸದರಾಗಿ ಒಡಿಶಾದ ದೇವಗಡ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2009ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಧಾನ್ ಅವರನ್ನು ಬಿಹಾರದಿಂದ 2012ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಳಿಕ, ಮಧ್ಯಪ್ರದೇಶದಿಂದ 2018ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ಒಡಿಶಾದಲ್ಲಿ ಬಿಜೆಪಿ ನೆಲೆಯನ್ನು ವಿಸ್ತರಿಸಲು ಅವರು ಶ್ರಮಿಸಿದ್ದಾರೆ.
ಇದನ್ನೂ ಓದಿ...ಮನೇಕಾ ಹಂಗಾಮಿ ಸ್ಪೀಕರ್?
**
ಸ್ಮೃತಿ ಇರಾನಿ (43) ಬಿಜೆಪಿ
ವಿದ್ಯಾರ್ಹತೆ: 12ನೇ ತರಗತಿ
ಕ್ಷೇತ್ರ: ಅಮೇಠಿ/ ಉತ್ತರಪ್ರದೇಶ
ಮಾಡೆಲಿಂಗ್, ಟಿ.ವಿ. ಧಾರಾವಾಹಿಗಳ ಮೂಲಕ ಜನತೆಗೆ ಪರಿಚಿತರಾಗಿದ್ದ ಸ್ಮೃತಿ ಇರಾನಿ, 2014ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿಯಿಂದ ಕಾಂಗ್ರೆಸ್‌ನ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. ಆನಂತರ ರಾಜ್ಯಸಭೆಯ ಮೂಲಕ ಸಂಸತ್ತನ್ನು ಪ್ರವೇಶಿಸಿ ಕೇಂದ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾದರು.
ಜೆಎನ್‌ಯು ವಿವಾದದ ನಂತರ ಅವರ ಖಾತೆಯನ್ನು ಬದಲಿಸಿ ಅವರಿಗೆ ಜವಳಿ ಖಾತೆಯ ಹೊಣೆ ನೀಡಲಾಯಿತು. 2019ರ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರನ್ನು ಅಮೇಠಿ ಕ್ಷೇತ್ರದಲ್ಲೇ ಸೋಲಿಸಿದ್ದಾರೆ.
**
ಗಿರಿರಾಜ್ ಸಿಂಗ್ (66) ಬಿಜೆಪಿ
ವಿದ್ಯಾರ್ಹತೆ: ಪದವಿ
ಕ್ಷೇತ್ರ: ಬೇಗುಸರಾಯ್/ ಬಿಹಾರ
ಬಿಜೆಪಿಯ ಅತ್ಯಂತ ವಿವಾದಾತ್ಮಕ ನಾಯಕರಲ್ಲಿ ಗಿರಿರಾಜ್ ಸಿಂಗ್ ಅವರ ಹೆಸರೂ ಸೇರುತ್ತದೆ. 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಉಗ್ರ ಹಿಂದುತ್ವವನ್ನು ಮುಂದಿಟ್ಟುಕೊಂಡೇ ಸಿಂಗ್ ರಾಜಕಾರಣ ಮಾಡಿದ್ದಾರೆ. ಕಳೆದ ಸರ್ಕಾರದಲ್ಲೂ ಸಚಿವರಾಗಿದ್ದ ಸಿಂಗ್ ಈ ಬಾರಿ ಕನ್ಹಯ್ಯಾ ಕುಮಾರ್ ಅವರನ್ನು ಸೋಲಿಸಿ ಗಮನಸೆಳೆದಿದ್ದಾರೆ.
ಹರ್‌ಸಿಮ್ರತ್ ಕೌರ್ ಬಾದಲ್ (52) ಶಿರೋಮಣಿ ಅಕಾಲಿ ದಳ
ವಿದ್ಯಾರ್ಹತೆ: ಪದವೀಧರೆ (ಜವಳಿ ವಿನ್ಯಾಸ).
ಕ್ಷೇತ್ರ: ಬಟಿಂಡ/ ಪಂಜಾಬ್
ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದ ಹರ್‌ಸಿಮ್ರತ್ ಕೌರ್ ಬಾದಲ್ ಎರಡನೇ ಬಾರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಸಂಪುಟದಲ್ಲಿ ಅವರು ಆಹಾರ ಸಂಸ್ಕರಣೆ ಖಾತೆ ಸಚಿವೆಯಾಗಿದ್ದರು. ಶಿರೋಮಣಿ ಅಕಾಲಿ ದಳದ ಅಧ್ಯಕ್ಷರಾಗಿರುವ ಇವರ ಪತಿ ಸುಖ್‌ಬಿರ್ ಸಿಂಗ್ ಬಾದಲ್ ಪಂಜಾಬ್‌ನ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ತಂದೆ ಪ್ರಕಾಶ್ ಸಿಂಗ್‌ಬಾದಲ್ ನಾಲ್ಕು ಬಾರಿ ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದರು. ಮೂರನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
**
ಪ್ರಕಾಶ್ ಜಾವಡೇಕರ್, (68) ಬಿಜೆಪಿ
ವಿದ್ಯಾರ್ಹತೆ: ಪದವೀಧರ
ರಾಜ್ಯಸಭೆ ಸದಸ್ಯ/ ಮಹಾರಾಷ್ಟ್ರ
ಪ್ರಕಾಶ್ ಜಾವಡೇಕರ್ ಬಿಜೆಪಿಯಲ್ಲಿ ಪ್ರಮುಖ ಹೆಸರು. ಎರಡು ಅವಧಿಗೆ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಪ್ರಧಾನಿ ನರೇಂದ್ರಮೋದಿ ಸಂಪುಟದಲ್ಲಿ ವಿವಿಧ ಖಾತೆಗಳನ್ನು ನಿಭಾಯಿಸಿದ್ದು, ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಕಾಲೇಜು ದಿನಗಳಲ್ಲಿ ಎಬಿವಿಪಿ ಜೊತೆಗೆ ಗುರುತಿಸಿಕೊಂಡಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆಮನೆ ವಾಸವನ್ನು ಅನುಭವಿಸಿದ್ದಾರೆ. ಹಲವು ವರ್ಷಗಳ ಕಾಲ ಬಿಜೆಪಿ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದಾರೆ.
**
ಸಂಜೀವ್ ಬಲಿಯಾನ್ (46) ಬಿಜೆಪಿ
ವಿದ್ಯಾರ್ಹತೆ: ಪದವೀಧರ
ಕ್ಷೇತ್ರ: ಮುಕಪ್ಫರ್‌ನಗರ/ ಉತ್ತರಪ್ರದೇಶ
ಜಾಟ್ ಸಮುದಾಯದ ಮುಖಂಡರಾದ ಸಂಜೀವ್ ಬಲಿಯಾನ್, ಈ ಬಾರಿ ಕ್ಷೇತ್ರದಲ್ಲಿ ರಾಷ್ಟ್ರೀಯ ಲೋಕದಳ ಅಧ್ಯಕ್ಷ ಅಜಿತ್ ಸಿಂಗ್ ವಿರುದ್ಧ ಜಯಗಳಿಸಿದ್ದು, 2ನೇ ಬಾರಿಗೆ ಲೋಕಸಭೆ ಪ್ರವೇಶಿಸಿದವವರು. 2013 ಮುಜಪ್ಫರ್‌ನಗರ ಕೋಮುಗಲಭೆಯ ಆರೋಪಿಯೂ ಹೌದು. ವೃತ್ತಿಯಿಂದ ಪಶುವೈದ್ಯ.
2014ರಲ್ಲಿಯೂ ಮೋದಿ ಸರ್ಕಾರದಲ್ಲಿ ಕೃಷಿ ಖಾತೆ ರಾಜ್ಯ ಸಚಿವರಾಗಿದ್ದರು. 2017ರಲ್ಲಿ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಸುಮಾರು 60 ಜನರ ಬಲಿ ಪಡೆದ ಮುಜಾಫನಗರದ ಕೋಮುಗಲಭೆಯ ಆರೋಪಿ. ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.
**
ರಾಜನಾಥ್ ಸಿಂಗ್ (67) ಬಿಜೆಪಿ
ವಿದ್ಯಾರ್ಹತೆ: ಸ್ನಾತಕೋತ್ತರ ಪದವೀಧರರ
ಕ್ಷೇತ್ರ: ಲಖನೌ/ ಉತ್ತರಪ್ರದೇಶ
ಬಿಜೆಪಿಯ ಹಿರಿಯ ನಾಯಕ, ಮೋದಿ ಸರ್ಕಾರದಲ್ಲಿ ಗೃಹಸಚಿವರಾಗಿದ್ದವರು. ಮಾಜಿ ಪ್ರಧಾನಿ ಎ.ಬಿ. ವಾಜಪೇಯಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರು. ಮೂರನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಈ ಚುನಾವಣೆಯಲ್ಲಿ ಲಖನೌ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಪೂನಂ ಸಿನ್ಹಾ ವಿರುದ್ಧ ಗೆದ್ದಿದ್ದಾರೆ. ರಾಜಕೀಯ ಪ್ರವೇಶಕ್ಕೂ ಮೊದಲು ಉಪನ್ಯಾಸರಾಗಿದ್ದರು. ವಿದ್ಯಾರ್ಥಿ ಜೀವನದಿಂದಲೂ ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತ. ಆರಂಭದ ದಿನಗಳಲ್ಲಿ ಎಬಿವಿಪಿ ಸಂಘಟನಾ ಕಾರ್ಯದರ್ಶಿಯಾಗಿದ್ದರು. 1994ರಲ್ಲಿ ರಾಜ್ಯಸಭೆ ಸದಸ್ಯರೂ ಆಗಿದ್ದರು.
**
ದೇಬಶ್ರೀ ಚೌಧುರಿ (48) ಬಿಜೆಪಿ (ರಾಜ್ಯ ಸಚಿವೆ)
ವಿದ್ಯಾರ್ಹತೆ: ಸ್ನಾತಕೋತ್ತರ ಪದವೀಧರೆ
ಕ್ಷೇತ್ರ: ರಾಯಗಂಜ್, ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ದೇಬಶ್ರೀ ಚೌಧುರಿ ಅವರು ಇದೇ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. 2016ರಲ್ಲಿ ವಿಧಾನಸಭೆ ಮತ್ತು 2014ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದರೂ ಪರಾಭವಗೊಂಡಿದ್ದರು. ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ್ ಜಿಲ್ಲೆಯ ಬಲೂರ್‌ಘಾಟ್ ಮೂಲದ ಇವರು ಸದ್ಯ ಕೋಲ್ಕತ್ತ ನಿವಾಸಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮುನ್ನ ಅವರು ರಾಜ್ಯ ಎಬಿವಿಪಿ ಅಧ್ಯಕ್ಷೆಯಾಗಿ ಹಾಗೂ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.
**
ರಮೇಶ್ ಪೋಖ್ರಿಯಾಲ್ ನಿಶಾಂಕ್(59) ಬಿಜೆಪಿ
ವಿದ್ಯಾರ್ಹತೆ: ಪಿಎಚ್.ಡಿ,
ಕ್ಷೇತ್ರ: ಹರಿದ್ವಾರ/ ಉತ್ತರಾಖಂಡ
ಉತ್ತರಾಖಂಡದ ಐದನೇ ಮುಖ್ಯಮಂತ್ರಿಯಾಗಿದ್ದ ನಿಶಾಂಕ್ ಅವರು ಪ್ರಸಿದ್ಧ ಹಿಂದಿ ಸಾಹಿತಿಯೂ ಹೌದು. ಕಾದಂಬರಿ, ಕವನಸಂಕಲನ, ಪ್ರವಾಸ ಕಥನ ಸೇರಿದಂತೆ 36 ಕೃತಿಗಳನ್ನು ರಚಿಸಿದ್ದಾರೆ. ಉತ್ತರಪ್ರದೇಶ ಮತ್ತು ಉತ್ತರಾಖಂಡದಿಂದ ಅವರು ಐದುಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮುಖಂಡ ನಿತಿನ್ ಗಡ್ಕರಿ, ಯೋಗ ಗುರು ರಾಮದೇವ್ ಅವರ ಆಪ್ತರಾಗಿಯೂ ನಿಶಾಂಕ್ ಗುರುತಿಸಿಕೊಂಡಿದ್ದಾರೆ. 2014ರಲ್ಲಿ ಹರಿದ್ವಾರದಿಂದ ಮೊದಲಬಾರಿಗೆ ಅವರು ಸಂಸತ್ತಿಗೆ ಆಯ್ಕೆಯಾಗಿದ್ದರು.
**
ಅರ್ಜುನ್ ಮುಂಡ (51) ಬಿಜೆಪಿ
ವಿದ್ಯಾರ್ಹತೆ: ಪದವೀಧರ
ಕ್ಷೇತ್ರ: ಖುಂತಿ/ ಜಾರ್ಖಂಡ್
ಜಾರ್ಖಂಡ್‌ನ ಬುಡಕಟ್ಟು ಸಮುದಾಯದ ನಾಯಕರಾದ ಮುಂಡ, ಬಿಹಾರ ವಿಭಜನೆಗೂ ಮುನ್ನ ಜಾರ್ಖಂಡ್ ಮುಕ್ತಿ ಮೋರ್ಚಾದಿಂದ (ಜೆಎಂಎಂ) ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1980ರಲ್ಲಿ ರಾಜಕೀಯ ಜೀವನ ಆರಂಭಿಸಿದ ಮುಂಡಾ ಶಿಬುಸೊರೇನ್ ಜತೆ ಪ್ರತ್ಯೇಕ ರಾಜ್ಯ ರಚನೆಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಜಾರ್ಖಂಡ್ ರಾಜ್ಯ ರಚನೆಯಾದ ನಂತರ ಆನಂತರ ಬಿಜೆಪಿ ಸೇರಿಕೊಂಡರು. ಅಲ್ಲಿ ರಚನೆಯಾದ ಬಿಜೆಪಿ ಸರ್ಕಾರದಲ್ಲಿ ಬುಡಕಟ್ಟು ಅಭಿವೃದ್ಧಿ ಸಚಿವರಾದರು. 2003ರಲ್ಲಿ ಅವರು ಜಾರ್ಖಂಡ್‌ನ ಮುಖ್ಯಮಂತ್ರಿಯೂ ಆದರು.
ಒಟ್ಟಾರೆ ಮೂರುಬಾರಿ ಅವರು ಮುಖ್ಯಮಂತ್ರಿಯಾದರೂ ರಾಜಕೀಯ ಏರಿಳಿತದಿಂದಾಗಿ ಅವಧಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈಬಾರಿ ಖುಂತಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
**
ಕಿರಣ್ ರಿಜಿಜು (48), ಬಿಜೆಪಿ (ರಾಜ್ಯ ಸಚಿವ)
ವಿದ್ಯಾರ್ಹತೆ: ಬಿ.ಎ. ಎಲ್‌ಎಲ್‌ಬಿ
ಕ್ಷೇತ್ರ/ರಾಜ್ಯ: ಅರುಣಾಚಲಪ್ರದೇಶ
ಈಶಾನ್ಯ ರಾಜ್ಯಗಳ ಧ್ವನಿ ಎಂದೇ ಗುರುತಿಸಲಾಗಿರುವ ಕಿರಣ್ ರಿಜಿಜು, ಅರುಣಾಚಲ ಪ್ರದೇಶದ ಪಶ್ಚಿಮ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಗೃಹ ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಉತ್ತಮ ವಾಗ್ಮಿಯಾಗಿರುವ ರಿಜಿಜು, ಈಶಾನ್ಯ ರಾಜ್ಯದ ಪ್ರಮುಖ ನಾಯಕರಾಗಿದ್ದಾರೆ.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸದಸ್ಯ ಸೇರಿದಂತೆ ಹಲವು ಹುದ್ದೆಗಳಲ್ಲಿ ರಿಜಿಜು ಕಾರ್ಯನಿರ್ವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ಇವರು ನೇಮಕಗೊಂಡಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿಯೂ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರವಾಸ ರಿಜಿಜು ಅವರ ಆಸಕ್ತಿಯಾಗಿದ್ದು, ಹಲವು ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ರಿಜಿಜು ಪತ್ನಿ ಜೊರಾಮ್ ರಿನಾ ರಿಜಿಜು ಇತಿಹಾಸ ಉಪನ್ಯಾಸಕರಾಗಿದ್ದಾರೆ.
**
ಡಾ. ಹರ್ಷ ವರ್ಧನ್ (65 ) ಬಿಜೆಪಿ
ವಿದ್ಯಾರ್ಹತೆ: ಎಂ.ಬಿ.ಬಿ.ಎಸ್. ಎಂ.ಎಸ್.
ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ, ಭೂವಿಜ್ಞಾನ ಸಚಿವರಾಗಿ ಡಾ. ಹರ್ಷವರ್ಧನ್ ಕಾರ್ಯನಿರ್ವಹಿಸಿದ್ದಾರೆ. 1993ರಲ್ಲಿ ದೆಹಲಿ ವಿಧಾನಸಭೆಗೆ ಆಯ್ಕೆಯಾಗುವ ಮೂಲ ಸಾರ್ವಜನಿಕ ಜೀವನಕ್ಕೆ ಡಾ. ಹರ್ಷವರ್ಧನ್ ಕಾಲಿಟ್ಟರು. ಬಳಿಕ, 1998, 2003, 2008 ಮತ್ತು 2013ರಲ್ಲಿ ಸತತವಾಗಿ ದೆಹಲಿ ವಿಧಾನಸಭೆಗೆ ಆಯ್ಕೆಯಾದರು.
2014ರಲ್ಲಿ ದೆಹಲಿಯ ಚಾಂದನಿ ಚೌಕ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. ಆರೋಗ್ಯ, ಶಿಕ್ಷಣ, ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಿಸರ ಕ್ಷೇತ್ರಗಳಿಗೆ ಹರ್ಷವರ್ಧನ್ ಆದ್ಯತೆ ನೀಡಿದ್ದಾರೆ. ತಂಬಾಕಿನ ದುಷ್ಪರಿಣಾಮಗಳ ಕುರಿತ ಹೋರಾಟದಲ್ಲೂ ಇವರು ಮುಂಚೂಣಿಯಲ್ಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ನಿಷೇಧಿಸುವ ಕುರಿತ ಕಾನೂನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ರಾಜ್ಯದ ಕೇಂದ್ರ ಸಚಿವರ ಸಂಕ್ಷಿಪ್ತ ಪರಿಚಯ
ಹೆಸರು: ಪ್ರಹ್ಲಾದ ಜೋಶಿ (57), ಬಿಜೆಪಿ
ವಿದ್ಯಾರ್ಹತೆ: ಬಿ.ಎ
ಕ್ಷೇತ್ರ: ಧಾರವಾಡ, ಕರ್ನಾಟಕ
ನಿರ್ವಹಿಸಿದ ಹುದ್ದೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ (2013–16), ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ.
ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಜೋಶಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ. ಒಂಬತ್ತು ವರ್ಷದ ಬಾಲಕನಾಗಿದ್ದಾಗಲೇ ಆರ್‌ಎಸ್‌ಎಸ್ ನಲ್ಲಿ ಸಕ್ರಿಯ. 1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ‘ಈದ್ಗಾ ಮೈದಾನ ಉಳಿಸಿ ಹೋರಾಟ’ದ ಸಂದರ್ಭದಲ್ಲಿ ವಿವಾದಿತ ಪ್ರದೇಶದಲ್ಲಿ ರಾಷ್ಟ್ರಧ್ವಜ ಹಾರಿಸಿ ಗಮನ ಸೆಳೆದಿದ್ದರು.
ಉದ್ಯಮಿಯೂ ಆಗಿರುವ ಅವರು ‘ವಿಭವ’ ಕೆಮಿಕಲ್ಸ್ ಕಂಪನಿ ಮುನ್ನಡೆಸುತ್ತಿದ್ದಾರೆ. ಜೋಶಿ ಅವರಿಗೆ ಪತ್ನಿ ಜ್ಯೋತಿ, ಪುತ್ರಿಯರಾದ ಅರ್ಪಿತಾ, ಅನುಷಾ ಮತ್ತು ಅನನ್ಯಾ ಇದ್ದಾರೆ.
**
ಹೆಸರು: ಸುರೇಶ ಅಂಗಡಿ
ಹೆಸರು: ಸುರೇಶ ಅಂಗಡಿ (64), ಬಿಜೆಪಿ
ವಿದ್ಯಾರ್ಹತೆ: ಬಿ.ಕಾಂ, ಎಲ್.ಎಲ್.ಬಿ
ಕ್ಷೇತ್ರ: ಬೆಳಗಾವಿ, ಕರ್ನಾಟಕ
2004ರಿಂದ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅಂಗಡಿ ಲಿಂಗಾಯತ– ಬಣಜಿಗ ಸಮುದಾಯಕ್ಕೆ ಸೇರಿದ್ದಾರೆ. ಯುವಕರಾಗಿದ್ದಾಗಲೇ ಬಿಜೆಪಿಗೆ ಸೇರ್ಪಡೆ. ಜಿಲ್ಲಾ ಘಟಕದ ಅಧ್ಯಕ್ಷ ಸೇರಿದಂತೆ ವಿವಿಧ ಸ್ಥಾನಗಳಲ್ಲಿ ಕಾರ್ಯನಿರ್ವಹಣೆ. ಜತೆಗೆ ಸಿಮೆಂಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಅವರಿಗೆ ಪತ್ನಿ ಮಂಗಳಾ, ಪುತ್ರಿಯರಾದ ಸ್ಫೂರ್ತಿ ಹಾಗೂ ಶ್ರದ್ಧಾ ಇದ್ದಾರೆ. ಮಗಳು ಶ್ರದ್ಧಾ ಅವರ ವಿವಾಹವನ್ನು ಶಾಸಕ, ಜಗದೀಶ ಶೆಟ್ಟರ್ ಅವರ ಪುತ್ರನೊಂದಿಗೆ ನೆರವೇರಿಸಿದ್ದಾರೆ.
**
ಹೆಸರು: ಡಿ.ವಿ.ಸದಾನಂದ ಗೌಡರ ಪರಿಚಯ
ಹೆಸರು: ಡಿ.ವಿ.ಸದಾನಂದ ಗೌಡ (66), ಬಿಜೆಪಿ
ವಿದ್ಯಾರ್ಹತೆ: ಬಿಎಸ್‌ಸಿ, ಎಲ್‌ಎಲ್ ಬಿ
ಕ್ಷೇತ್ರ: ಬೆಂಗಳೂರು ಉತ್ತರ, ಕರ್ನಾಟಕ
2004ರಿಂದ ಸತತ ನಾಲ್ಕು ಬಾರಿ ವಿವಿಧ ಕ್ಷೇತ್ರಗಳಿಂದ ಸಂಸದರಾಗಿ ಆಯ್ಕೆಯಾಗಿರುವ ಡಿವಿಎಸ್ ಒಕ್ಕಲಿಗ ಗೌಡಸಮುದಾಯಕ್ಕೆ ಸೇರಿದ್ದಾರೆ. ಯುವಕರಾಗಿದ್ದಾಗಲೇ ಎಬಿವಿಪಿ, ಜನಸಂಘ–ಬಿಜೆಪಿಯಲ್ಲಿ ಸಕ್ರಿಯ. ಪುತ್ತೂರು, ಸುಳ್ಯಗಳಲ್ಲಿ ವಕೀಲಿ ವೃತ್ತಿ ನಡೆಸುತ್ತಲೇ ಪಕ್ಷವ ವಿವಿಧ ವಿಭಾಗಗಳಲ್ಲಿ ಸೇವೆ. 1994ರಿಂದ ಸತತ ಎರಡು ಬಾರಿ ಪುತ್ತೂರಿನಿಂದ ವಿಧಾನಸಭೆಗೆ ಆಯ್ಕೆ.2006ರಲ್ಲಿ ರಾಜ್ಯ ಬಿಜೆಪಿಅಧ್ಯಕ್ಷ. 2011ರಲ್ಲಿ ರಾಜ್ಯದ 20ನೇ ಮುಖ್ಯಮಂತ್ರಿಯಾಗಿ11 ತಿಂಗಳ ಅಧಿಕಾರ.
ಅವರಿಗೆ ಪತ್ನಿ ಡಾಟಿ, ಪುತ್ರ ಕಾರ್ತಿಕ್‌ಇದ್ದಾರೆ.
****
ನರೇಂದ್ರ ಸಿಂಗ್ ತೋಮಾರ್ (61) ಬಿಜೆಪಿ
ವಿದ್ಯಾರ್ಹತೆ: ಪದವಿ
ಕ್ಷೇತ್ರ: ಮೊರೇನಾ (ಮಧ್ಯಪ್ರದೇಶ)
ಈ ಹಿಂದಿನ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು. ಈ ಹಿಂದೆ ಗ್ವಾಲಿಯರ್ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಅವರು, ಈ ಬಾರಿ ಮೊರೇನಾ ಕ್ಷೇತ್ರದಿಂದ ಜಯಗಳಿಸಿದ್ದಾರೆ.
***
ಮುಕ್ತಾರ್ ಅಬ್ಬಾಸ್ ನಖ್ವಿ 61, ಬಿಜೆಪಿ
ವಿದ್ಯಾರ್ಹತೆ: ಪದವೀಧರ, ರಾಜ್ಯಸಭೆ ಸದಸ್ಯ
ಮುಕ್ತಾರ್ ಅಬ್ಬಾಸ್ ನಖ್ವಿ,ಬಿಜೆಪಿ ಪ್ರಮುಖ ಮುಸಲ್ಮಾನ ನಾಯಕರಲ್ಲಿ ಒಬ್ಬರು. ಜಾರ್ಖಂಡ್ ಮತ್ತು ಉತ್ತರಪ್ರದೇಶ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈ ಮೊದಲು ಮೋದಿ ಸಂಪುಟದಲ್ಲಿ ಅಲ್ಪಸಂಖ್ಯಾತರ ಖಾತೆ ಸಚಿವನಾಗಿದ್ದರು. ನಖ್ವಿ ಅವರು ಬಿಜೆಪಿ ವಕ್ತಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
***
ತಾವರ್ ಚಂದ್ ಗೆಹ್ಲೋಟ್, 70, ಬಿಜೆಪಿ
ವಿದ್ಯಾರ್ಹತೆ: ಪದವೀಧರರು, ರಾಜ್ಯಸಭೆ ಸದಸ್ಯ, ಮಧ್ಯಪ್ರದೇಶ
ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿದ್ದ ತಾವರ್ ಚಂದ್ ಗೆಹ್ಲೋಟ್ ಪ್ರಸ್ತುತ ರಾಜ್ಯಸಭೆಯ ಸದಸ್ಯ. ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದು, ಮಧ್ಯಪ್ರದೇಶದ ಶಜಾಪುರ ಕ್ಷೇತ್ರವನ್ನು ಸ್ಪರ್ಧಿಸುತ್ತಿದ್ದರು.
2009ರಲ್ಲಿ ಪರಾಭವಗೊಂಡಿದ್ದರು. ಬಿಜೆಪಿಯ ದಲಿತ ಮುಖಂಡರಲ್ಲಿ ಪ್ರಮುಖರು. ವಿದ್ಯಾರ್ಥಿನಾಯಕರಾಗಿ ರಾಜಕೀಯ ಜೀವನ ಆರಂಭಿಸಿದ್ದರು. ಆರ್‌ಎಸ್‌ಎಸ್ ಶಾಖೆ ಪ್ರಮುಖರಾಗಿ, ಬಿಜೆಪಿಯ ವಿವಿಧ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
***
ಗಜೇಂದ್ರ ಸಿಂಗ್ ಶೇಖಾವತ್, 51, ಬಿಜೆಪಿ
ವಿದ್ಯಾರ್ಹತೆ: ಪದವೀಧರ, ಜೋಧ್‌ಪುರ/ರಾಜಸ್ಥಾನ
ನರೇಂದ್ರ ಮೋದಿ ಸಂಪುಟದಲ್ಲಿ ಕೃಷಿ ಖಾತೆ ರಾಜ್ಯ ಸಚಿರಾಗಿದ್ದ ಗಜೇಂದ್ರ ಸಿಂಗ್ ಶೇಖಾವತ್ ಮತ್ತೊಮ್ಮೆ ಸಂಪುಟ ಸೇರಿದ್ದಾರೆ. ಈಚಿನ ಚುನಾವಣೆಯಲ್ಲಿ ಶೇಖಾವತ್ ಅವರು ರಾಜಸ್ಥಾನದ ಮುಖ್ಯಮಂತ್ರಿ ಅವರ ಪುತ್ರ ವೈಭವ್ ಅವರ ವಿರುದ್ಧ ಜಯಗಳಿಸಿದ್ದರು.
ವಿದ್ಯಾರ್ಥಿ ಹಂತದಲ್ಲಿಯೇ ನಾಯಕತ್ವ ಗುಣ ಪ್ರದರ್ಶಿಸಿದ್ದ ಶೇಖಾವತ್ ಜೋಧ್‌ಪುರದ ಜೈನಾರಾಯಣ್ ವ್ಯಾಸ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ನಾಯಕರಾಗಿದ್ದರು.
***
ಮಹೇಂದ್ರನಾಥ ಪಾಂಡೆ (62), ಬಿಜೆಪಿ
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ
ಕ್ಷೇತ್ರ: ಚಂದ್ರೋಲಿ, ಉತ್ತರಪ್ರದೇಶ.
ಎರಡನೇ ಬಾರಿ ಲೋಕಸಭೆಗೆ ಆಯ್ಕೆ. ಈ ಹಿಂದಿನ ಸರ್ಕಾರದಲ್ಲಿ 2016 ರಿಂದ 2017ರ ಅವಧಿಯಲ್ಲಿ ಮಾನವಸಂಪನ್ಮೂಲ ಖಾತೆ ರಾಜ್ಯ ಸಚಿವರಾಗಿದ್ದರು. ಬಿಜೆಪಿ ಉತ್ತರಪ್ರದೇಶ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದರು.
****
ಅರವಿಂದ ಗಣಪತ್ ಸಾವಂತ್ (67), ಶಿವಸೇನೆ
ವಿದ್ಯಾರ್ಹತೆ: ಬಿಎಸ್‌ಸಿ, ಕ್ಷೇತ್ರ: ಮುಂಬೈ ದಕ್ಷಿಣ
ಎರಡನೇ ಬಾರಿ ಲೋಕಸಭೆಗೆ ಆಯ್ಕೆ. ಮುಂಬೈ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಿಲಿಂದ್ ದೇವ್ರಾ ವಿರುದ್ಧ ಜಯ. ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಆಯ್ಕೆಯಾಗಿರುವ ಶಿವಸೇನಾ ಸಂಸದ ಅರವಿಂದ ಸಾವಂತ್, ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಮಧ್ಯಮ ವರ್ಗದ ಕುಟುಂಬ ಹಿನ್ನೆಲೆಯ ಸಾವಂತ್, ಮಹಾನಗರ ಟೆಲಿಫೋನ್ ನಿಗಮದಲ್ಲಿ (ಎಂಟಿಎನ್‌ಎಲ್) ಕಾರ್ಯನಿರ್ವಹಿಸುತ್ತಿದ್ದರು. 1990ರಲ್ಲಿ ಎಂಟಿಎನ್‌ಎಲ್‌ನಲ್ಲಿ ಶಿವಸೇನಾ ಘಟಕ ಆರಂಭಿಸುವ ಕಾರ್ಯಕ್ಕೆ ಅವರು ಚಾಲನೆ ನೀಡಿದ್ದರು. 1990ರಲ್ಲಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದರು. ಉತ್ತಮ ವಾಗ್ಮಿಯಾಗಿರುವ ಸಾವಂತ್, ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ಎರಡು ಬಾರಿ ಆಯ್ಕೆಯಾಗಿದ್ದರು.
***
ಸುಬ್ರಹ್ಮಣ್ಯಂ ಜೈಶಂಕರ್, 64, ಬಿಜೆಪಿ
ವಿದ್ಯಾರ್ಹತೆ: ಎಂ.ಎ., ರಾಜ್ಯಶಾಸ್ತ್ರ
ಸುಬ್ರಹ್ಮಣ್ಯಂ ಜೈಶಂಕರ್ ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ. 1977ನೇ ತಂಡದ ಐಎಫ್ಎಸ್ ಅಧಿಕಾರಿ. ಪ್ರಮುಖ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಭಾರತ–ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಜಾರಿಗೆ ಪ್ರಮುಖ ಪಾತ್ರ ವಹಿಸಿದ್ದರು. ಚೀನಾ, ಅಮೆರಿಕ, ಸಿಂಗಪುರದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರಿ ನೀಡಿ ಸರ್ಕಾರ ಗೌರವಿಸಿತ್ತು. ಜನವರಿ 2018ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಬಳಿಕ ಟಾಟಾ ಸಮೂಹದ (ಗ್ಲೋಬಲ್ ಕಾರ್ಪೊರೆಟ್ ಅಫೇರ್ಸ್) ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಈಗ ಆಶ್ಚರ್ಯಕರ ಬೆಳವಣಿಗೆಯಲ್ಲಿ ಕೇಂದ್ರ ಸಂಪುಟ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.