ADVERTISEMENT

ಶ್ರೀಮಂತ -ಬಡವರಿಗಾಗಿ ಎರಡು ಪ್ರತ್ಯೇಕ ಭಾರತ ನಿರ್ಮಿಸಿದ್ದಾರೆ ಮೋದಿ: ರಾಹುಲ್ ಟೀಕೆ

ಪಿಟಿಐ
Published 10 ಮೇ 2022, 11:34 IST
Last Updated 10 ಮೇ 2022, 11:34 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ದಾಹೋದ್, ಗುಜರಾತ್: ‘ದೇಶದ ಸಂಪನ್ಮೂಲವನ್ನು ಕೆಲವೇ ಶ್ರೀಮಂತರಿಗೆ ಒಪ್ಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮಂತ ಮತ್ತು ಬಡವರಿಗಾಗಿ ಎರಡು ಪ್ರತ್ಯೇಕ ಭಾರತ ನಿರ್ಮಿಸಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಇದೇ ವರ್ಷ ನಡೆಯಲಿರುವ ಗುಜರಾತ್‌ ವಿಧಾನಸಭೆ ಚುನಾವಣೆಗೆ ದಾಹೋದ್ ಜಿಲ್ಲೆಯಲ್ಲಿ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಿದ ಅವರು, ‘ಗುಜರಾತ್‌ನಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ’ ಎಂದು ಹೇಳಿದರು.

‘2014ರಲ್ಲಿ ಪ್ರಧಾನಿಯಾಗುವ ಮೊದಲು ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಗುಜರಾತ್‌ನಲ್ಲಿ ಆರಂಭಿಸಿದ್ದ ಕೆಲಸವನ್ನೇ ಈಗ ಅವರು ದೇಶದಾದ್ಯಂತ ಮಾಡುತ್ತಿದ್ದಾರೆ. ಅದುವೇ ಗುಜರಾತ್‌ ಮಾದರಿಯಾಗಿದೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಇಂದು ಎರಡು ಭಾರತ ನಿರ್ಮಾಣವಾಗಿದೆ. ಒಂದು ಶ್ರೀಮಂತರಿಗೆ, ಮತ್ತೊಂದು ಬಡವರಿಗೆ. ಕಾಂಗ್ರೆಸ್‌ ಎರಡು ಭಾರತ ಬಯಸುವುದಿಲ್ಲ. ಬಿಜೆಪಿ ಆಡಳಿತದಲ್ಲಿ ನೀರು, ಅರಣ್ಯ ಸೇರಿ ಶ್ರೀಸಾಮಾನ್ಯರ ಸಂಪನ್ಮೂಲವನ್ನು ಕೆಲವರಿಗೇ ಒಪ್ಪಿಸಲಾಗುತ್ತಿದೆ’ ಎಂದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬುಡಕಟ್ಟು ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಈ ಸರ್ಕಾರ ನಿಮಗೆ ಏನನ್ನೂ ಉಳಿಸುವುದಿಲ್ಲ. ಎಲ್ಲವನ್ನು ಕಸಿದುಕೊಳ್ಳಲಿದೆ. ನೀವು ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳಬೇಕು. ಆಗಷ್ಟೇ ಅವು ಉಳಿದುಕೊಳ್ಳಲಿವೆ’ ಎಂದು ಹೇಳಿದರು.

‘ಕೊರೊನಾ ಅವಧಿಯಲ್ಲಿ ಗಂಟೆ ಬಾರಿಸಲು, ಮೊಂಬತ್ತಿ ಬೆಳಗಿಸಲುಪ್ರಧಾನಿ ಜನರಿಗೆ ತಿಳಿಸಿದ್ದರು. ಆದರೆ, ಕೋವಿಡ್‌ನಿಂದ ಮೂರು ಲಕ್ಷ ಜನರು ಸತ್ತಾಗ, ಗಂಗಾ ನದಿಯಲ್ಲಿ ಹೆಣಗಳು ತುಂಬಿದ್ದವು. ಕೊರೊನಾದಿಂದ ದೇಶದಲ್ಲಿ 50–60 ಲಕ್ಷ ಜನರು ಸತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.