ನವದೆಹಲಿ : ಜಮ್ಮು ಕಾಶ್ಮೀರದ ಪರಿಸ್ಥಿತಿಯ ಅಧ್ಯಯನ ನಡೆಸಲು ಬಂದಿರುವ ಐರೋಪ್ಯ ಒಕ್ಕೂಟದ 27 ಮಂದಿ ಸಂಸದರ ತಂಡವು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.
ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದತಿಯ ಬಳಿಕ ಇಲ್ಲಿಗೆ ಭೇಟಿ ನೀಡುತ್ತಿರುವ ವಿದೇಶಿ ಪ್ರತಿನಿಧಿಗಳ ಮೊದಲ ತಂಡ ಇದಾಗಿದೆ. ಕಣಿವೆಯ ಸ್ಥಿತಿಗತಿಯ ಬಗ್ಗೆ ಜಗತ್ತಿಗೆ ಪಾಕಿಸ್ತಾನವು ನೀಡಿರುವ ಚಿತ್ರಣವನ್ನು ಬದಲಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಇಟ್ಟಿರುವ ಮಹತ್ವದ ಹೆಜ್ಜೆ ಎಂದು ಇದನ್ನು ಬಣ್ಣಿಸಲಾಗಿದೆ.
ಈ ತಂಡದ ಪ್ರತಿನಿಧಿಗಳ ಜೊತೆ ಮಾತನಾಡಿದ ಮೋದಿ, ‘ಭಯೋತ್ಪಾದನೆಯನ್ನು ಬೆಂಬಲಿಸುವವರು ಮತ್ತು ಅದರ ಪ್ರಾಯೋಜಕರ ವಿರುದ್ಧ ತುರ್ತಾಗಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಭಯೋತ್ಪಾದನೆಯ ವಿರುದ್ಧ ಶೂನ್ಯ ತಾಳಿಕೆಯ ಧೋರಣೆಯನ್ನು ಅನುಸರಿಸಬೇಕು’ ಎಂದು ಯಾವುದೇ ರಾಷ್ಟ್ರದ ಹೆಸರನ್ನು ಪ್ರಸ್ತಾಪಿಸದೆ ಹೇಳಿದರು.
‘ಜಮ್ಮು ಕಾಶ್ಮೀರ ಮತ್ತು ಲಡಾಖ್‌ಗೆ ಭೇಟಿ ನೀಡುವುದರಿಂದ ಈ ತಂಡಕ್ಕೆ ಅಲ್ಲಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯದ ಸ್ಪಷ್ಟ ತಿಳಿವಳಿಕೆ ಲಭ್ಯವಾಗಲಿದೆ. ಆ ಭಾಗದ ಆಡಳಿತ ಮತ್ತು ಅಭಿವೃದ್ಧಿಯ ಅಗತ್ಯಗಳ ಬಗ್ಗೆಯೂ ಚಿತ್ರಣ ನೀಡಲಿದೆ’ ಎಂದು ಭೇಟಿಯ ಬಳಿಕ ಪ್ರಧಾನಿ ಕಚೇರಿಯು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಆಗಬೇಕಾದ ಅಭಿವೃದ್ಧಿ ಹಾಗೂ ಆ ಭಾಗದ ಜನರ ಆದ್ಯತೆಗಳ ಬಗ್ಗೆಯೂ ಸ್ಪಷ್ಟವಾದ ಕಲ್ಪನೆ ಈ ಪ್ರತಿನಿಧಿಗಳಿಗೆ ಮನವರಿಕೆಯಾಗಬಹುದೆಂಬ ಆಶಾಭಾವನೆಯನ್ನು ಮೋದಿ ವ್ಯಕ್ತಪಡಿಸಿದ್ದಾರೆ.
ಜಮ್ಮು ಕಾಶ್ಮೀರದ ಈಗಿನ ಸ್ಥಿತಿಗತಿ ಹಾಗೂ ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಈ ಪ್ರದೇಶದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಡೊಭಾಲ್ ಅವರು ನಿಯೋಗಕ್ಕೆ ಮಾಹಿತಿ ನಿಡಿದರು.
ತಂಡದವರಿಗಾಗಿ ಡೊಭಾಲ್ ಏರ್ಪಡಿಸಿದ್ದ ಔತಣಕೂಟದಲ್ಲಿ ಜಮ್ಮು ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ಮುಜಪ್ಫರ್ ಬೇಗ್, ಪಿಡಿಪಿಯ ಮಾಜಿ ಮುಖಂಡ ಅಲ್ತಾಫ್ ಬುಖಾರಿ ಹಾಗೂ ಇತರ ಕೆಲವು ನಾಯಕರು ಪಾಲ್ಗೊಂಡಿದ್ದರು.
ಎರಡು ದಿನಗಳ ಕಾಲ ಕಾಶ್ಮೀರದಲ್ಲಿ ಪ್ರವಾಸ ಮಾಡಲಿರುವ ತಂಡವು ಅಲ್ಲಿನ ಅಧಿಕಾರಿಗಳು ಹಾಗೂ ಸ್ಥಳೀಯರ ಜೊತೆ ಮಾತುಕತೆ ನಡೆಸಲಿದೆ. ಆನಂತರ ಜಮ್ಮು ಕಾಶ್ಮೀರ ರಾಜ್ಯಪಾಲರನ್ನು ಭೇಟಿಮಾಡಿ ಕೊನೆಯಲ್ಲಿ ಪತ್ರಿಕಾಗೋಷ್ಠಿಯನ್ನೂ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತಿಗೆ ಅವಮಾನ
ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ಐರೋಪ್ಯ ಒಕ್ಕೂಟದ ಸಂಸದರ ತಂಡಕ್ಕೆ ಅನುಮತಿ ನೀಡಿರುವುದಕ್ಕೆ ವಿರೋಧಪಕ್ಷಗಳು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿವೆ. ‘ನಮ್ಮ ಸಂಸದರಿಗೆ ನೀಡದಿರುವ ಅವಕಾಶವನ್ನು ವಿದೇಶಿಯರಿಗೆ ನೀಡಲಾಗುತ್ತಿದೆ. ಇದು ಸಂಸತ್ತು ಹಾಗೂ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ’ ಎಂದು ವಿರೋಧಪಕ್ಷಗಳು ಆರೋಪಿಸಿವೆ.
ವಿಶೇಷಾಧಿಕಾರ ರದ್ದತಿಯ ಬಳಿಕ ಜಮ್ಮು ಕಾಶ್ಮೀರದ ಜನರನ್ನು ಭೇಟಿಮಾಡಲು ಹೋಗಿದ್ದ ರಾಹುಲ್‌ಗಾಂಧಿ ಹಾಗೂ ಗುಲಾಂನಬಿ ಆಜಾದ್ ಅವರನ್ನು ಶ್ರೀನಗರ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಿದ ಘಟನೆಯನ್ನು ಉಲ್ಲೇಖಿಸಿದ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ‘ಜಮ್ಮು ಕಾಶ್ಮೀರದ ಜನರನ್ನು ಭೇಟಿ ಮಾಡುವುದರಿಂದ ಭಾರತೀಯ ರಾಜಕಾರಣಿಗಳನ್ನು ತಡೆಯಲಾಗಿತ್ತು. ಹೀಗಿರುವಾಗ, ರಾಷ್ಟ್ರೀಯತೆಯ ಚಾಂಪಿಯನ್ ಎನಿಸಿಕೊಂಡ ‘ವಿಶಾಲಹೃದಯದ’ವರು ಐರೋಪ್ಯ ಒಕ್ಕೂಟದ ರಾಜಕಾರಣಿಗಳಿಗೆ ಅವಕಾಶ ನೀಡಲು ಸಾಧ್ಯವಾದದ್ದು ಹೇಗೆ’ ಎಂದು ಪ್ರಶ್ನಿಸಿದ್ದಾರೆ.
‘ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ. ರಾಜ್ಯವು ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಜಗತ್ತಿಗೆ ತಿಳಿಸಲು ಮೋದಿ ನೇತೃತ್ವದ ಸರ್ಕಾರವು ಮಾಡಿರುವ ಹತಾಶ ಪ್ರಯತ್ನವಿದು’ ಎಂದು ಜಮ್ಮು ಕಾಶ್ಮೀರರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ಇದು ನಮ್ಮ ರಾಷ್ಟ್ರೀಯ ನೀತಿಗೆ ವಿರುದ್ಧವಾದುದು. ಅನೈತಿಕವಾದ ಈ ಭೇಟಿಯನ್ನು ಕೂಡಲೇ ರದ್ದುಪಡಿಸಬೇಕು
-ಸುಬ್ರಮಣಿಯನ್ ಸ್ವಾಮಿ,ರಾಜ್ಯಸಭೆ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.