ನವದೆಹಲಿ: ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕದ ಮೊದಲ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಸತತ 11ನೇ ಬಾರಿಗೆ ಧ್ವಜಾರೋಹಣ ಮಾಡಿದ ಅವರು, 98 ನಿಮಿಷಗಳ ಸುದೀರ್ಘ ಭಾಷಣ ಮಾಡಿದರು. ವಿಕಸಿತ ಭಾರತ, ತಮ್ಮ ಸರ್ಕಾರದ ಸಾಧನೆ, ಮುನ್ನೋಟ, ಸವಾಲುಗಳು ಭಾಷಣದಲ್ಲಿ ಪ್ರಸ್ತಾಪವಾದವು.
ಅವರ ಭಾಷಣದ ಪ್ರಮುಖ ಐದು ಅಂಶಗಳು ಇಲ್ಲಿವೆ
ಈಗಿರುವ ನಾಗರಿಕ ಸಂಹಿತೆಯನ್ನು ‘ಕೋಮುವಾದಿ ನಾಗರಿಕ ಸಂಹಿತೆ’ ಎಂದು ಕರೆದ ಪ್ರಧಾನಿ ಮೋದಿ, ಭಾರತಕ್ಕೆ ‘ಜಾತ್ಯತೀತ ನಾಗರಿಕ ಸಂಹಿತೆ’ಯ ಅಗತ್ಯ ಇದೆ ಎಂದು ಪ್ರತಿಪಾದಿಸಿದರು. ‘ನಾಗರಿಕ ಸಂಹಿತೆ ಕುರಿತು ಸುಪ್ರೀಂ ಕೋರ್ಟ್ ಹಲವು ಬಾರಿ ಚರ್ಚೆ ನಡೆಸಿದೆ. ಈಗ ನಮ್ಮಲ್ಲಿರುವುದು ಕೋಮುವಾದಿ ನಾಗರಿಕ ಸಂಹಿತೆ. ಅದರಲ್ಲಿ ತಾರಮತ್ಯವಿದೆ. ಸಂವಿಧಾನ ಕರ್ತೃಗಳ ದೂರದೃಷ್ಟಿಯನ್ನು ಈಡೇರಿಸುವುದು ನಮ್ಮ ಕರ್ತವ್ಯ’ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಬಾರಿಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲೂ, ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಒಂದು ದೇಶ ಒಂದು ಚುನಾವಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದರು. ಈ ಬಗ್ಗೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ರಚಿಸಲಾದ ಸಮಿತಿಯು ಒಂದು ದೇಶ ಒಂದು ಚುನಾವಣೆ ಬಗ್ಗೆ ಶಿಫಾರಸು ಮಾಡಿದೆ ಎಂದು ಹೇಳಿದ್ದಾರೆ.
‘ಪದೇ ಪದೇ ನಡೆಯುವ ಚುನಾವಣೆಗಳು ದೇಶದಲ್ಲಿ ಸಮಸ್ಯೆ ಉಂಟು ಮಾಡುತ್ತಿವೆ. ನೀತಿಗಳು ಹಾಗೂ ಕೆಲಸಗಳಿಗೆ ಚುನಾವಣೆ ಜೊತೆ ಸಂಬಂಧವಿದೆ. ಇದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಒಂದು ದೇಶ ಒಂದು ಚುನಾವಣೆ ಪ್ರಮುಖವಾದದ್ದು. ಸಂವಿಧಾನವನ್ನು ಅರ್ಥ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು ಒಂದು ದೇಶ ಒಂದು ಚುನಾವಣೆಗೆ ಬೆಂಬಲಿಸಬೇಕು ಎಂದು ನಾನು ಕೋರುತ್ತೇನೆ’ ಎಂದರು.
ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿಯ ಕೊಲೆ ಪ್ರಕರಣವನ್ನು ಭಾಷಣದಲ್ಲಿ ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ರಾಜ್ಯಗಳು ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
‘ಕೆಲವೊಂದು ವಿಚಾರಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಾಗಿದೆ. ನಮ್ಮ ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತಿದೆ. ಈ ಬಗ್ಗೆ ಜನರಲ್ಲಿ ಆಕ್ರೋಶವಿದೆ. ಅದು ನನಗೆ ಅರಿವಾಗುತ್ತದೆ. ಮಹಿಳೆಯರನ್ನು ಅವಮಾನಿಸುವವರ ವಿರುದ್ಧ ತ್ವರಿತ ತನಿಖೆ ನಡೆಸಿ, ಶಿಕ್ಷೆ ನೀಡುವ ಅಗತ್ಯವಿದೆ. ಈ ತೆರನಾದ ಹಲವು ಘಟನೆಗಳು ನಡೆಯುತ್ತಿವೆ. ಆದರೆ ಆರೋಪಿಗಳನ್ನು ಶಿಕ್ಷಿಸುವ ಕುರಿತು ಯಾವುದೇ ಮತುಗಳು ಕೇಳಿ ಬರುವುದಿಲ್ಲ. ಹೀಗಾಗಿ ಆರೋಪಿಗಳಿಗೆ ಭಯ ಇಲ್ಲ. ಮಹಿಳೆಯರನ್ನು ನಿಂದಿಸುವರಲ್ಲಿ ನಾವು ಭಯ ಹುಟ್ಟಿಸಬೇಕಿದೆ’ ಎಂದು ಪ್ರಧಾನಿ ಹೇಳಿದರು.
ದೇಶದ ಜನರು ಭ್ರಷ್ಟಾಚಾರದಿಂದ ಬೇಸತ್ತು ಹೋಗಿದ್ದು, ನಾವು ಅದರ ವಿರುದ್ದ ಸಮರ ಸಾರಿದ್ದೇವೆ. ಇದಕ್ಕಾಗಿ ನಾನು ಬೆಲೆ ತೆರಬೇಕಾಯಿತು. ಆದರೆ ದೇಶದ ವಿಷಯಕ್ಕೆ ಬಂದರೆ ಬೆಲೆ ತೆರಬೇಕಾಗಿಲ್ಲ. ಭಷ್ಟಾಚಾರದ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ ಎಂದು ಪ್ರಧಾನಿ ಹೇಳಿದರು.
ಕುಟುಂಬ ರಾಜಕಾರಣದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಜಕೀಯ ಹಿನ್ನೆಲೆ ಇಲ್ಲದ ಒಂದು ಲಕ್ಷ ಯುವಕರನ್ನು ರಾಜಕೀಯಕ್ಕೆ ತರುವ ಅಗತ್ಯವಿದೆ. ಈ ಸಂಖ್ಯೆ ಪಂಚಾಯತ್‌ನಿಂದ ಸಂಸತ್‌ವರೆಗೂ ಏರಿಕೆಯಾಗಬೇಕು. ಇಂಥ ಜನರು ರಾಜಕೀಯಕ್ಕೆ ಬರುವುದರಿಂದ ಹೊಸ ಆಲೋಚನೆಗಳು ಬರುತ್ತವೆ ಎಂದರು.
ಕೆಂಪುಕೋಟೆಯಿಂದ ಬಾಂಗ್ಲಾದೇಶಕ್ಕೂ ಪ್ರಧಾನಿ ಮೋದಿ ಸಂದೇಶ ರವಾನಿಸಿದರು. ಬಾಂಗ್ಲಾದೇಶದಲ್ಲಿ ಶೀಘ್ರದಲ್ಲೇ ಎಲ್ಲವೂ ತಿಳಿಯಾಗಲಿದೆ ಎಂದು ಭಾವಿಸುವೆ. ಬಾಂಗ್ಲಾದೇಶದ ಹಿಂದೂಗಳು, ಅಲ್ಲಿನ ಅಲ್ಪಸಂಖ್ಯಾತರು ಸುರಕ್ಷಿತವಾಗಿರಬೇಕೆಂದು ನಮ್ಮ 140 ಕೋಟಿ ಜನರು ಬಯಸುತ್ತಾರೆ. ನಮ್ಮ ನೆರೆಯ ದೇಶಗಳು ಶಾಂತಿ ಮತ್ತು ಸಂತೋಷದ ಹಾದಿಯಲ್ಲಿ ಸಾಗಬೇಕೆಂದು ನಾವು ಬಯಸುತ್ತೇವೆ. ನಾವು ಬಾಂಗ್ಲಾದೇಶದ ಹಿತೈಷಿಗಳಾಗಿ ಇರುತ್ತೇವೆ ಎಂದು ಪ್ರಧಾನಿ ಹೇಳಿದರು.
(ಏಜೆನ್ಸಿ ಮಾಹಿತಿಗಳಿಂದ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.