ನವದೆಹಲಿ: ಆಸಿಯಾನ್ ದೇಶಗಳ ಜತೆ ಸಾಮಾಜಿಕ, ಹಣಕಾಸು, ಡಿಜಿಟಲ್ ಒಳಗೊಂಡಂತೆ ಎಲ್ಲ ರೀತಿಯ ಸಂಪರ್ಕ ವೃದ್ಧಿಗೆ ಭಾರತ ಆದ್ಯತೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.
ಆಸಿಯಾನ್ ದೇಶಗಳ ‘ವರ್ಚುವಲ್’ ಸಮಾವೇಶದಲ್ಲಿ ಪ್ರಧಾನಿ ಮಾತನಾಡಿದರು. ಈ ಪ್ರದೇಶದ ಭದ್ರತೆ ಮತ್ತು ಅಭಿವೃದ್ಧಿಗೆ ಕಾರಣವಾಗುವ ರೀತಿಯಲ್ಲಿ ಎಲ್ಲ ದೇಶಗಳನ್ನು ಆಸಿಯಾನ್ ಒಕ್ಕೂಟವು ಒಗ್ಗೂಡಿಸಿಕೊಂಡು ಹೋಗಬೇಕಾದ ಅಗತ್ಯ ಇದೆ ಎಂದು ಮೋದಿ ಅವರು ಹೇಳಿದರು.
ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶದ ಬಗ್ಗೆಭಾರತ ಹಾಗೂ ಆಸಿಯಾನ್‌ನ ದೃಷ್ಟಿಕೋನ ಹಾಗೂ ಒಳನೋಟಗಳಲ್ಲಿ ಸಾಮ್ಯ ಇದೆ ಎಂದವರು ತಿಳಿಸಿದ್ದಾರೆ.
‘ಆಸಿಯಾನ್ ದೇಶಗಳು ಹಾಗೂ ಭಾರತದ ನಡುವೆ ಭೌತಿಕ, ಆರ್ಥಿಕ, ಸಾಮಾಜಿಕ, ಸಾಗರೋತ್ತರ ಸಂಪರ್ಕ ಅದ್ಯತೆ ಪಡೆದಿದ್ದು, ಈ ದಿಸೆಯಲ್ಲಿ ಕೆಲವು ವರ್ಷಗಳಿಂದ ನಾವು ಇನ್ನಷ್ಟು ಹತ್ತಿರವಾಗಿದ್ದೇವೆ’ ಎಂದು ಮೋದಿ ಅಭಿಪ್ರಾಯಪಟ್ಟರು.
ಆಗ್ನೇಯ ಏಷ್ಯಾ ದೇಶಗಳ ಸಂಘಟನೆ (ಆಸಿಯಾನ್) ಪ್ರಾದೇಶಿಕವಾಗಿ ಅತ್ಯಂತ ಪ್ರಭಾವಿ ಸಂಘಟನೆಗಳಲ್ಲಿ ಒಂದೆನಿಸಿದ್ದು, ಭಾರತ, ಅಮೆರಿಕ, ಜಪಾನ್, ಚೀನಾ ಹಾಗೂ ಆಸ್ಟ್ರೇಲಿಯಾಗಳ ಜತೆ ನಿಕಟ ಸಂಪರ್ಕ ಹೊಂದಿದೆ.
ಪೂರ್ವ ಲಡಾಖ್ ಹಾಗೂ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ದೇಶವು ಆಕ್ರಮಣಕಾರಿ ನಿಲುವು ತಳೆದಿರುವ ಮಧ್ಯೆಯೇ ಸಮಾವೇಶ ನಡೆದಿದೆ. ಚೀನಾ ಜೊತೆ ಹಲವು ದೇಶಗಳು ಭೌಗೋಳಿಕ ಸಂಘರ್ಷ ಎದುರಿಸುತ್ತಿವೆ.
10 ದೇಶಗಳ ಆಸಿಯಾನ್ ಕೂಟದಲ್ಲಿ ಇಂಡೊನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಪುರ, ಥಾಯ್ಲೆಂಡ್, ಬ್ರೂನೆ, ವಿಯೆಟ್ನಾಂ, ಲಾವೋಸ್, ಮ್ಯಾನ್ಮಾರ್ ಹಾಗೂ ಕಾಂಬೊಡಿಯಾ ಇವೆ.
ಜಲಮಾರ್ಗ ಸ್ಥಿರತೆ ಕುರಿತು ಚರ್ಚೆ
ದಕ್ಷಿಣ ಚೀನಾ ಸಮುದ್ರದ ಸದ್ಯದ ಸ್ಥಿತಿಗತಿಗಳ ಕುರಿತು ಭಾರತ–ಆಸಿಯಾನ್ ದೇಶಗಳು ಚರ್ಚೆ ನಡೆಸಿದವು. ಈ ಭಾಗದಲ್ಲಿ ಶಾಂತಿ, ಸ್ಥಿರತೆ, ಸುರಕ್ಷತೆ ಹಾಗೂ ಭದ್ರತೆ ಕಾಯ್ದುಕೊಳ್ಳುವ ಅಗತ್ಯವನ್ನು ಪರ್ಯಾಲೋಚಿಸಿದವು. ಪೆಸಿಫಿಕ್ ಸಾಗರದಲ್ಲಿ ಮುಕ್ತ ಸಾರಿಗೆ ಬಗ್ಗೆಯೂ ಚರ್ಚೆ ನಡೆಯಿತು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಅತಿಕ್ರಮಣಕಾರಿ ವರ್ತನೆಯ ನಡುವೆಯೇ ಈ ಚರ್ಚೆ ಮಹತ್ವ ಪಡೆದಿದೆ.
ಪ್ರಧಾನಿ ಮೋದಿ ಅವರು ‘ಕೋವಿಡ್ ಆಸಿಯಾನ್ ನಿಧಿ’ಗೆ ಸುಮಾರು ₹7.5 ಕೋಟಿ ದೇಣಿಗೆ ಘೋಷಿಸಿದರು. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಿನ ಯತ್ನಕ್ಕೆ ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.