ನವದೆಹಲಿ: ಸಂಸತ್ತಿನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ನಾಯಕರನ್ನಾಗಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಸಂಸದರು ಶುಕ್ರವಾರ ಅವಿರೋಧವಾಗಿ ಆಯ್ಕೆ ಮಾಡಿದರು. ದೇಶ ವಿದೇಶದ ಗಣ್ಯರ ಸಮ್ಮುಖದಲ್ಲಿ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಭಾನುವಾರ ರಾತ್ರಿ 7.15ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾದ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮೋದಿ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ನಿಯೋಜಿತ ಪ್ರಧಾನಿಯಾಗಿ ಮೋದಿ ಅವರನ್ನು ರಾಷ್ಟ್ರಪತಿ ನೇಮಿಸಿದರು. ‘ಪ್ರಮಾಣವಚನಕ್ಕೆ ಮುನ್ನ ಸಚಿವರ ಪಟ್ಟಿಯನ್ನು ರಾಷ್ಟ್ರಪತಿ ಅವರಿಗೆ ನೀಡುತ್ತೇನೆ’ ಎಂದು ಮೋದಿ ತಿಳಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೋದಿ ಅವರ ಜತೆಗೆ 30 ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಂಭವ ಇದೆ.
ಗುಜರಾತ್ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿಯಾಗಿ ಕಳೆದ 22 ವರ್ಷಗಳಲ್ಲಿ ಬಿಜೆಪಿಯ ಬಹುಮತದ ಸರ್ಕಾರವನ್ನು ಮುನ್ನಡೆಸಿದ್ದ ಮೋದಿ ಅವರು ಮೊದಲ ಬಾರಿಗೆ ಮೈತ್ರಿ ಸರ್ಕಾರ ಮುನ್ನಡೆಸಲು ಸಜ್ಜಾಗಿದ್ದಾರೆ. ಮೈತ್ರಿ ಧರ್ಮ ಪಾಲನೆಯನ್ನು ಗಮನದಲ್ಲಿಟ್ಟುಕೊಂಡು, ದೇಶ ಮುನ್ನಡೆಸಲು ಒಮ್ಮತದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಅದನ್ನು ಮುಂದುವರಿಸುವುದು ತಮ್ಮ ಜವಾಬ್ದಾರಿ ಎಂದೂ ಸ್ಪಷ್ಟಪಡಿಸಿದರು.
‘ಪರಸ್ಪರ ನಂಬಿಕೆಯು ಈ ಮೈತ್ರಿಯ ಮೂಲ ಮತ್ತು 'ಸರ್ವ ಪಂಥ ಸಂಭವ' (ಎಲ್ಲ ಪಂಗಡಗಳು ಸಮಾನರು) ತತ್ವಕ್ಕೆ ಬದ್ಧವಾಗಿದೆ. ಇದು ಬಲಿಷ್ಠ ಸಮ್ಮಿಶ್ರ ಸರ್ಕಾರ’ ಎಂದು ಅವರು ಹೇಳಿದರು. ‘ನನ್ನ ಪ್ರಕಾರ, ಎನ್‌ಡಿಎ ಎಂದರೆ ನವ ಭಾರತ, ಅಭಿವೃದ್ಧಿ ಹೊಂದಿದ ಭಾರತ ಹಾಗೂ ಮಹತ್ವಾಕಾಂಕ್ಷೆಯ ಭಾರತ’ ಎಂದು ವ್ಯಾಖ್ಯಾನಿಸಿದರು.
ಸಭೆಯಲ್ಲಿ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ಜೆಡಿಯುನ ನಿತೀಶ್ ಕುಮಾರ್ ಸೇರಿದಂತೆ ಮೈತ್ರಿಕೂಟದ ನಾಯಕರು ಭಾಗವಹಿಸಿದ್ದರು. ಮೋದಿ ಅವರನ್ನು ಮೈತ್ರಿಕೂಟದ ನಾಯಕರನ್ನಾಗಿ ಮಾಡುವ ಪ್ರಸ್ತಾವವನ್ನು ಪಕ್ಷದ ಹಿರಿಯ ನಾಯಕ ರಾಜನಾಥ ಸಿಂಗ್ ಮಂಡಿಸಿದರು. ಈ ಪ್ರಸ್ತಾವವನ್ನು ಅಮಿತ್ ಶಾ, ನಿತಿನ್ ಗಡ್ಕರಿ, ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಏಕನಾಥ ಶಿಂದೆ, ಚಿರಾಗ್ ಪಾಸ್ವಾನ್, ಎಚ್.ಡಿ.ಕುಮಾರಸ್ವಾಮಿ, ಅಜಿತ್ ಪವಾರ್ ಹಾಗೂ ಇತರರು ಬೆಂಬಲಿಸಿದರು.
ಇದೇ ವೇಳೆ, ಮೈತ್ರಿಕೂಟದ ನಾಯಕರನ್ನು ನೂತನ ಸಂಸದರು ಅಭಿನಂದಿಸಿದರು. ‘ಅಬ್ ಕಿ ಬಾರ್ ಮೋದಿ ಸರ್ಕಾರ್’ ಎಂದು ಘೋಷಣೆಗಳನ್ನು ಕೂಗಿದರು. ಕೆಲವೇ ಕ್ಷಣಗಳಲ್ಲಿ ‘ಅಬ್ ಕಿ ಬಾರ್ ಎನ್‌ಡಿಎ ಸರ್ಕಾರ್’ ಎಂದೂ ಬದಲಾಯಿಸಿದರು. ನಿಯೋಜಿತ ಪ್ರಧಾನಿ ಅವರು ಸಂವಿಧಾನ ಪ್ರತಿಗೆ ನಮಿಸಿದರು.
ಮೂರನೇ ಬಾರಿ ಪ್ರಧಾನಿಯಾಗುವ ಮೂಲಕ ಜವಾಹರಲಾಲ್ ನೆಹರೂ ಅವರ ಹ್ಯಾಟ್ರಿಕ್ ಸಾಧನೆಯನ್ನು ಸರಿಗಟ್ಟಲಿರುವ ಮೋದಿ ಅವರು ತಮ್ಮ ಆದ್ಯತೆಗಳನ್ನು ಪಟ್ಟಿ ಮಾಡಿದರು. ಜನಸಾಮಾನ್ಯರ ಆಶೋತ್ತರಗಳನ್ನು ಆದಷ್ಟು ಬೇಗ ಈಡೇರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ‘ನಾವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ ಮತ್ತು ಕ್ಷಿಪ್ರಗತಿಯ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ನಾವು ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ. ನಾವು ಐದನೇ ಅತಿದೊಡ್ಡ ಆರ್ಥಿಕತೆಯಿಂದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬೇಕಿದೆ’ ಎಂದು ತಮ್ಮ ಕನಸು ಬಿಚ್ಚಿಟ್ಟರು. ‘ಮುಂದಿನ 10 ವರ್ಷಗಳಲ್ಲಿ, ನಾವು ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ನಾಗರಿಕರ ಜೀವನದ ಗುಣಮಟ್ಟದ ಬಗ್ಗೆ ಹೊಸ ಅಧ್ಯಾಯ ಬರೆಯುತ್ತೇವೆ’ ಎಂದು ಹೇಳಿದರು.
ಮೈತ್ರಿಕೂಟದ ನಾಯಕರನ್ನಾಗಿ ಮೋದಿ ಅವರ ಹೆಸರನ್ನು ಅನುಮೋದಿಸುತ್ತಾ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವರು ತಮ್ಮ ರಾಜ್ಯಗಳಲ್ಲಿ ಬಾಕಿ ಉಳಿದಿರುವ ಕೆಲಸಗಳ ಬಗ್ಗೆ ಪ್ರಸ್ತಾಪಿಸಿದರು. ತಳಮಟ್ಟದಲ್ಲಿ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಹೊಂದಾಣಿಕೆಯನ್ನು ಉಲ್ಲೇಖಿಸಿದ ಪ್ರಧಾನಿ, ‘ಪ್ರಾದೇಶಿಕ ಮತ್ತು ರಾಷ್ಟ್ರೀಯ ಆಕಾಂಕ್ಷೆಗಳ ನಡುವೆ ಬಲವಾದ ಸಂಪರ್ಕವಿರಬೇಕು’ ಎಂದು ಪ್ರತಿಪಾದಿಸಿದರು.
ದಿನದ ಬೆಳವಣಿಗೆಗಳು
ಸಂಸತ್ ಭವನದಲ್ಲಿ ಎನ್‌ಡಿಎ ಸಂಸದೀಯ ಮಂಡಳಿ ಸಭೆ
ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಅವಿರೋಧವಾಗಿ ಆಯ್ಕೆ
ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿದ ಮೋದಿ
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನಿವಾಸದಲ್ಲಿ ಎನ್‌ಡಿಎ ಮೈತ್ರಿಕೂಟದ ನಾಯಕರ ಸಭೆ
ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಸರ್ಕಾರದ ರಚನೆಗೆ ಹಕ್ಕು ಮಂಡಿಸಿದ ಮೋದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.