ADVERTISEMENT

ದಶಕ ಪೂರೈಸಿದ ಮನ್‌ ಕಿ ಬಾತ್‌: ಯಶಸ್ಸಿನ ಕುರಿತು ಪ್ರಧಾನಿ ಮೋದಿ ಹೇಳಿದ್ದಿಷ್ಟು...

ಪಿಟಿಐ
Published 29 ಸೆಪ್ಟೆಂಬರ್ 2024, 7:17 IST
Last Updated 29 ಸೆಪ್ಟೆಂಬರ್ 2024, 7:17 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ನವದೆಹಲಿ: ದೇಶದ ಜನರು ಸಕಾರಾತ್ಮಕ ಬೆಳವಣಿಗೆಗಳು ಹಾಗೂ ಸ್ಫೂರ್ತಿದಾಯಕ ವಿಷಯಗಳನ್ನು ಇಷ್ಟಪಡುವರು ಎಂಬುದನ್ನು ‘ಮನ್‌ ಕಿ ಬಾತ್‌’ (ಮನದ ಮಾತು) ತಿಂಗಳ ರೇಡಿಯೊ ಕಾರ್ಯಕ್ರಮ ತೋರಿಸಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ಮನದ ಮಾತು’ 10 ವರ್ಷಗಳನ್ನು ಪೂರೈಸಿರುವುದು ತಮಗೆ ‘ಭಾವನಾತ್ಮಕ’ ವಿಚಾರ ಎಂದು ಬಣ್ಣಿಸಿದ ಪ್ರಧಾನಿ, ‘ಈ ಕಾರ್ಯಕ್ರಮವು ಭಾರತದ ಚೈತನ್ಯವನ್ನು ಸಂಭ್ರಮಿಸುವ ಮತ್ತು ದೇಶದ ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸುವ ವಿಶಿಷ್ಟ ವೇದಿಕೆಯಾಗಿದೆ’ ಎಂದರು.

ADVERTISEMENT

‘ವರ್ಣರಂಜಿತ ಅಥವಾ ನಕಾರಾತ್ಮಕವಲ್ಲದ ವಿಷಯಗಳತ್ತ ಜನರು ಗಮನವನ್ನೇ ಹರಿಸುವುದಿಲ್ಲ ಎಂಬ ಗ್ರಹಿಕೆ ಸಾಮಾನ್ಯವಾಗಿ ಇದೆ. ಆದರೆ, ಜನರು ಸಕಾರಾತ್ಮಕ ಮಾಹಿತಿಗಳನ್ನು ಕೇಳಲು ಉತ್ಸುಕರಾಗಿದ್ದಾರೆ ಎಂಬುದನ್ನು ಈ ಕಾರ್ಯಕ್ರಮ ಸಾಬೀತುಪಡಿಸಿದೆ’ ಎಂದು ನುಡಿದರು. 

‘ಮೇಕ್ ಇನ್ ಇಂಡಿಯಾ' ಯೋಜನೆಯು 10 ವರ್ಷಗಳನ್ನು ಪೂರೈಸುತ್ತಿದ್ದು, ಪ್ರತಿಯೊಂದು ವಲಯದಲ್ಲೂ ರಫ್ತು ಪ್ರಮಾಣ ಹೆಚ್ಚುತ್ತಿದೆ. ವಿದೇಶಿ ನೇರ ಹೂಡಿಕೆಯ ಹೆಚ್ಚಳವು ‘ಮೇಕ್‌ ಇನ್‌ ಇಂಡಿಯಾ’ದ ಯಶಸ್ಸಿಗೆ ಸಾಕ್ಷಿಯಾಗಿದೆ. ಇದರಿಂದ ಸ್ಥಳೀಯವಾಗಿ ತಯಾರಕರಿಗೆ ಸಾಕಷ್ಟು ನೆರವಾಗಿದೆ ಎಂದರು. 

ಮುಂಬರುವ ಹಬ್ಬದ ಅವಧಿಯ ಖರೀದಿ ಸಮಯದಲ್ಲಿ ಸ್ಥಳೀಯವಾಗಿ ತಯಾರಾಗಿರುವ ಉತ್ಪನ್ನಗಳನ್ನೇ ಖರೀದಿಸಬೇಕು ಎಂದು ಅವರು ಮನವಿ ಮಾಡಿದರು. 

‘ಸ್ವಚ್ಛ ಭಾರತ್‌ ಅಭಿಯಾನವು ಅಕ್ಟೋಬರ್‌ 2ರಂದು ಒಂದು ದಶಕವನ್ನು ಪೂರೈಸುತ್ತಿದೆ. ಈ ಅಭಿಯಾನವು ದೊಡ್ಡ ಜನಾಂದೋಲನವಾಗಿ ಬೆಳೆಯಲು ಕಾರಣವಾದ ಎಲ್ಲರನ್ನೂ ಶ್ಲಾಘಿಸುವ ಸುಸಂದರ್ಭ ಇದಾಗಿದೆ. ತಮ್ಮ ಇಡೀ ಜೀವನವನ್ನು ಇದೇ ಉದ್ದೇಶಕ್ಕಾಗಿ ಮುಡುಪಾಗಿಟ್ಟ ಮಹಾತ್ಮ ಗಾಂಧಿ ಅವರಿಗೆ ಸಲ್ಲಿಸುವ ಬಹುದೊಡ್ಡ ಗೌರವ ಇದು’ ಎಂದರು. 

‘ಕಲಾಕೃತಿಗಳ ಬಗ್ಗೆ ಚರ್ಚೆ’

ತಮ್ಮ ಈಚೆಗಿನ ಅಮೆರಿಕ ಭೇಟಿಯನ್ನು ಪ್ರಸ್ತಾಪಿಸಿದ ಮೋದಿ ‘ಭಾರತದಿಂದ ಹೊರಗೆ ಕಳ್ಳಸಾಗಣೆ ಮಾಡಲಾಗಿದ್ದ ಸುಮಾರು 300 ಪ್ರಾಚೀನ ಕಲಾಕೃತಿಗಳನ್ನು ಅಮೆರಿಕ ಸರ್ಕಾರ ಹಿಂತಿರುಗಿಸಿರುವುದರ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ’ ಎಂದರು. ‘ಜನರಿಗೆ ತಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಇದೆ ಎಂದಾದರೆ ಇಡೀ ಜಗತ್ತು ಅವರ ಭಾವನೆಗಳನ್ನು ಗೌರವಿಸುತ್ತದೆ. ತಮ್ಮ ಸರ್ಕಾರದ ಕಳೆದ 10 ವರ್ಷಗಳ ಆಡಳಿತದಲ್ಲಿ ವಿವಿಧ ದೇಶಗಳಲ್ಲಿದ್ದ ನೂರಾರು ಪ್ರಾಚೀನ ಕಲಾಕೃತಿಗಳನ್ನು ಭಾರತಕ್ಕೆ ಹಿಂತಿರುಗಿಸಲಾಗಿದೆ’ ಎಂದು ತಿಳಿಸಿದರು.

ಮೋದಿ ಹೇಳಿದ್ದು...

  • ವಿದೇಶಿ ನೇರ ಹೂಡಿಕೆಯ ಹೆಚ್ಚಳವು ‘ಮೇಕ್‌ ಇನ್‌ ಇಂಡಿಯಾ’ದ ಯಶಸ್ಸಿಗೆ ಪುರಾವೆಯಾಗಿದೆ. ಇದರಿಂದ ಸ್ಥಳೀಯವಾಗಿ ತಯಾರಕರಿಗೆ ಸಾಕಷ್ಟು ನೆರವಾಗಿದೆ.

  •  ‘ಸ್ವಚ್ಛ ಭಾರತ ಅಭಿಯಾನವು ಅಕ್ಟೋಬರ್‌ 2ರಂದು ಒಂದು ದಶಕವನ್ನು ಪೂರೈಸುತ್ತಿದೆ. ಈ ಅಭಿಯಾನವು ದೊಡ್ಡ ಜನಾಂದೋಲನವಾಗಿ ಬೆಳೆಯಲು ಕಾರಣವಾದ ಎಲ್ಲರನ್ನೂ ಶ್ಲಾಘಿಸುವ ಸುಸಂದರ್ಭ ಇದು.

  • ನಾವು ಈಗ ಮುಖ್ಯವಾಗಿ ಎರಡು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ –ಮೊದಲನೆಯದು 'ಗುಣಮಟ್ಟ'. ಅಂದರೆ, ನಮ್ಮ ದೇಶದಲ್ಲಿ ತಯಾರಾಗುವ ವಸ್ತುಗಳು ಅಂತರರಾಷ್ಟ್ರೀಯ ಗುಣಮಟ್ಟ ಹೊಂದಿರಬೇಕು.  ಎರಡನೆಯದ್ದು ‘ವೋಕಲ್‌ ಫಾರ್ ಲೋಕಲ್’. ಅಂದರೆ, ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚು ಪ್ರಚಾರ ಸಿಗಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.