ನವದೆಹಲಿ: ಪ್ರಗತಿ ಮೈದಾನದ ಏಕೀಕೃತ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಮುಖ್ಯ ಸುರಂಗ ಮತ್ತು ಐದು ಅಂಡರ್‌ಪಾಸ್‌ಗಳನ್ನು ಪ್ರಧಾನಿ ಮೋದಿ ಭಾನುವಾರ ಉದ್ಘಾಟಿಸಿದರು.
ಪೂರ್ವ ದೆಹಲಿ, ನೋಯ್ಡಾ ಹಾಗೂ ಗಾಜಿಯಾಬಾದ್‌ನಿಂದ ಇಂಡಿಯಾ ಗೇಟ್ ಮತ್ತು ಮಧ್ಯ ದೆಹಲಿಯ ಹಲವು ಸ್ಥಳಗಳಿಗೆ ಸಾಗಲು ಹೊಸ ಸುರಂಗ ಮಾರ್ಗವು ಅನುವಾಗುತ್ತಿದೆ. ಈ ಸುರಂಗವು 1.6 ಕಿ.ಮೀ. ಉದ್ದವಿದೆ.
ಈ ಮಾರ್ಗದಲ್ಲಿ ಸಾಗುವ ಮೂಲಕ ಸಮಯ, ಇಂಧನ ಹಾಗೂ ಹಣದ ಉಳಿತಾಯವಾಗಲಿದೆ ಎಂದಿರುವ ಪ್ರಧಾನಿ, 'ಸಮಯವೇ ಹಣ, ಸರ್ಕಾರವು ಜನರಿಗೆ 100 ರೂಪಾಯಿ ಘೋಷಿಸಿದರೆ, ಅದು ಹೆಡ್‌ಲೈನ್ಸ್ ಆಗುತ್ತದೆ. ಆದರೆ, 200 ರೂಪಾಯಿ ಉಳಿಸಿದರೆ, ಅದರ ಬಗ್ಗೆ ಹೆಚ್ಚು ಚರ್ಚೆಯೇ ಆಗುವುದಿಲ್ಲ' ಎಂದರು.
ಸುರಂಗ ಮತ್ತು ಅಂಡರ್‌ಪಾಸ್‌ಗಳಲ್ಲಿ ಮೂಡಿಸಿರುವ ಚಿತ್ರಕಲೆಯ ಚಿತ್ತಾರದ ಕುರಿತು ಪ್ರಸ್ತಾಪಿಸಿದ ಅವರು, ಭಾನುವಾರದಂದು ಕೆಲವು ಗಂಟೆಗಳ ಕಾಲ ವಾಹನಗಳ ಸಂಚಾರವನ್ನು ನಿಲ್ಲಿಸಬೇಕು. ಆ ಮೂಲಕ ಜನರು ಇಲ್ಲಿರುವ ಕಲಾಕೃತಿಗಳನ್ನು ನೋಡುತ್ತ ಓಡಾಲು ಅವಕಾಶ ಮಾಡಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರವು ಈ ಏಕೀಕೃತ ಟ್ರಾನ್ಸಿಟ್ ಕಾರಿಡಾರ್ ನಿರ್ಮಿಸಿದ್ದು, ₹920 ಕೋಟಿಗೂ ಅಧಿಕ ವೆಚ್ಚವಾಗಿದೆ.
'ಕೇಂದ್ರ ಸರ್ಕಾರದ ಮೂಲಕ ದೆಹಲಿಗೆ ಉತ್ತಮ ಮೂಲಭೂತ ಸೌಕರ್ಯಗಳು ದೊರಕಿವೆ. ಈ ಯೋಜನೆಯು 55 ಲಕ್ಷ ಲೀಟರ್ ಇಂಧನವನ್ನು ಉಳಿಸಲು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.