ನವದೆಹಲಿ: ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಅವರು ತುರ್ತು ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರು ಶೀಘ್ರ ಗುಣಮುಖರಾಗುವಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಾರೈಸಿದ್ದಾರೆ.
‘ಸದ್ಗುರು ಜಗ್ಗಿ ವಾಸುದೇವ್ ಜೀ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದೇನೆ’ ಎಂದು ಪ್ರಧಾನಿ ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಾಸುದೇವ್, ‘ಆತ್ಮೀಯ ಪ್ರಧಾನ ಮಂತ್ರಿಗಳೇ, ನನಗಿಂತ ನೀವು ದೇಶದ ಬಗ್ಗೆ ಕಾಳಜಿ ವಹಿಸಬೇಕಿದೆ. ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಧನ್ಯವಾದ’ ಎಂದು ಹೇಳಿದ್ದಾರೆ.
ಮಿದುಳಿನಲ್ಲಿ ರಕ್ತಸ್ರಾವದಿಂದ ಬಳಲುತ್ತಿದ್ದ ಸದ್ಗುರು ಅವರಿಗೆ ಮಾರ್ಚ್ 17ರಂದು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ದೆಹಲಿಯ ಇಂದಪ್ರಸ್ಥ ಅಪೊಲೋ ಆಸ್ಪತ್ರೆ ತಿಳಿಸಿದೆ.
ಚಿಕಿತ್ಸೆ ಬಳಿಕ ಸದ್ಗುರು ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ದೇಹ ಮತ್ತು ಮಿದುಳು ಮತ್ತು ಇತರ ಮಹತ್ವದ ಅಂಗಾಂಗಳ ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ಆಸ್ಪತ್ರೆ ಹೇಳಿದೆ.
ಕಳೆದ 4 ವಾರಗಳಿಂದ ಸದ್ಗುರು ಅವರು ತೀವ್ರ ತಲೆ ನೋವಿನಿಂದ ಬಳಲುತ್ತಿದ್ದರು. ಆದರೂ ಅವರು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳನ್ನು ನಡೆಸಿದ್ದರು. ಅಲ್ಲದೇ ಮಾರ್ಚ್ 8ರಂದು ಮಹಾಶಿವರಾತ್ರಿ ಹಬ್ಬವನ್ನೂ ಆಚರಿಸಿದ್ದಾರೆ. ಬಳಿಕ ತಪಾಸಣೆ ವೇಳೆ ಅವರ ಮಿದುಳಿನಲ್ಲಿ ಭಾರಿ ರಕ್ತಸಾವ್ರವಾಗುತ್ತಿರುವುದು ಕಂಡು ಬಂದಿತು. ಈಗ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
66 ವರ್ಷದ ಸದ್ಗುರು ಅವರು ‘ಮಣ್ಣು ಉಳಿಸಿ’ ಸೇರಿದಂತೆ ಅನೇಕ ಪರಿಸರ ಜಾಗೃತಿ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.