ADVERTISEMENT

ಸಂಪುಟ ಅಂತಿಮಕ್ಕೆ ಕಸರತ್ತು: ಮೊದಲ ಹಂತದಲ್ಲಿಯೇ ಮಿತ್ರರಿಗೆ ಸಮಪಾಲು?

ಮೋದಿ ಪ್ರಮಾಣ ಇಂದು

ಮಂಜುನಾಥ್ ಹೆಬ್ಬಾರ್‌
Published 8 ಜೂನ್ 2024, 23:45 IST
Last Updated 8 ಜೂನ್ 2024, 23:45 IST
<div class="paragraphs"><p>ಅಮಿತ್‌ ಶಾ</p></div>

ಅಮಿತ್‌ ಶಾ

   

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಭಾನುವಾರ ರಾತ್ರಿ 7.15ಕ್ಕೆ ನಡೆಯುವ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಮೈತ್ರಿ ಸರ್ಕಾರದ ಸಂಪುಟಕ್ಕೆ ಸುಮಾರು 30 ಮಂದಿ ಸೇರ್ಪಡೆಯಾಗಲಿದ್ದಾರೆ. ಮೊದಲ ಹಂತದಲ್ಲಿ ಮಿತ್ರ ಪಕ್ಷಗಳ 12ರಿಂದ 15 ಸದಸ್ಯರು ಸಂಪುಟಕ್ಕೆ ಸೇರುವ ಸಂಭವ ಇದೆ.

ಸಂಪುಟಕ್ಕೆ ಸೇರುವವರ ಹೆಸರನ್ನು ಅಂತಿಮಗೊಳಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪಕ್ಷದ ನಾಯಕ ಅಮಿತ್‌ ಶಾ ಅವರು ಶನಿವಾರ ಸರಣಿ ಸಭೆಗಳನ್ನು ನಡೆಸಿದರು. ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು, ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರೊಂದಿಗೆ ಸಮಾಲೋಚನೆ ನಡೆಸಿ ಸಚಿವರ ಪಟ್ಟಿಗೆ ಅಂತಿಮ ರೂಪ ನೀಡುವ ಕಸರತ್ತು ನಡೆಸಿದರು. ಬಳಿಕ ಸಂಭಾವ್ಯ ಸಚಿವರ ಪಟ್ಟಿಯನ್ನು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದರು. ಮೋದಿ ಅವರು ಈ ಪಟ್ಟಿಯನ್ನು ಭಾನುವಾರ ಬೆಳಿಗ್ಗೆ ರಾಷ್ಟ್ರಪತಿ ಭವನಕ್ಕೆ ಕಳುಹಿಸಲಿದ್ದಾರೆ.  

ADVERTISEMENT

ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅವಧಿ ಜೂನ್‌ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಅವರು ಕೇಂದ್ರದ ಸಂಪುಟಕ್ಕೆ ಸೇರುವ ಸಾಧ್ಯತೆ ದಟ್ಟವಾಗಿದೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶಿವರಾಜ್ ಸಿಂಗ್‌ ಚೌಹಾಣ್ ಹೆಸರು ಮುಂಚೂಣಿಯಲ್ಲಿದೆ. 

ತೆಲುಗು ದೇಶಂ ಪಕ್ಷವು 16 ಹಾಗೂ ಜೆಡಿಯು 12 ಸ್ಥಾನಗಳಲ್ಲಿ ಗೆದ್ದು ಕಿಂಗ್‌ ಮೇಕರ್‌ಗಳಾಗಿ ಹೊರ ಹೊಮ್ಮಿವೆ. ಟಿಡಿಪಿ ಹಾಗೂ ಜೆಡಿಯುಗೆ ತಲಾ ಒಂದು ಸಂಪುಟ ದರ್ಜೆ ಸೇರಿದಂತೆ ತಲಾ ಮೂರು ಖಾತೆಗಳನ್ನು ನೀಡಲು ಬಿಜೆಪಿ ವರಿಷ್ಠರು ಒಲವು ತೋರಿದ್ದಾರೆ. ಶಿವಸೇನೆಯು (ಏಕನಾಥ ಶಿಂದೆ ಬಣ) ಏಳು ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಪಕ್ಷಕ್ಕೆ ಒಂದು ಸಂಪುಟ ದರ್ಜೆ ಹಾಗೂ ಒಂದು ರಾಜ್ಯ ಖಾತೆ ನೀಡುವ ಸಾಧ್ಯತೆ ಇದೆ. ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ ಸಹ ಎರಡು ಖಾತೆಗಳನ್ನು ಪಡೆಯಲಿದೆ. ಜೆಡಿಎಸ್‌, ಅಪ್ನಾ ದಳ, ಆರ್‌ಎಲ್‌ಡಿ, ಎಚ್‌ಎಎಂ, ಜನಸೇನಾ ಪಕ್ಷಗಳಿಗೆ ತಲಾ ಒಂದು ಖಾತೆ ಸಿಗಲಿದೆ. 

ರಾಜನಾಥ್‌ ಸಿಂಗ್

ಬಿಜೆಪಿ ಬಳಿಯಲ್ಲಿಯೇ ಪ್ರಮುಖ ಖಾತೆಗಳು?
ರೈಲ್ವೆ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಪ್ರಮುಖ ಖಾತೆಗಳನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಡುವಂತೆ ಟಿಡಿಪಿ ಹಾಗೂ ಜೆಡಿಯು ಪಟ್ಟು ಹಿಡಿದಿವೆ. ಆದರೆ, ಪ್ರಮುಖ ಖಾತೆಗಳನ್ನು ಬಿಜೆಪಿಯೇ ಉಳಿಸಿಕೊಳ್ಳಲಿದೆ. ಗೃಹ, ಹಣಕಾಸು, ವಿದೇಶಾಂಗ ವ್ಯವಹಾರ, ರಕ್ಷಣೆ, ರಸ್ತೆ ಹಾಗೂ ಹೆದ್ದಾರಿ ವ್ಯವಹಾರ, ರೈಲ್ವೆ, ಮಾಹಿತಿ ತಂತ್ರಜ್ಞಾನ, ಶಿಕ್ಷಣ ಖಾತೆಗಳನ್ನು ಬಿಜೆಪಿ ಬಿಟ್ಟುಕೊಡುವ ಸಾಧ್ಯತೆ ಕಡಿಮೆ. ರೈಲ್ವೆ ಖಾತೆ ಮೇಲೆ ಜೆಡಿಯು ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ಮೇಲೆ ಟಿಡಿಪಿ ಕಣ್ಣಿಟ್ಟಿದೆ. ಗ್ರಾಮೀಣಾಭಿವೃದ್ಧಿ ಖಾತೆಯನ್ನು ಜೆಡಿಯುವಿಗೆ ನೀಡುವ ಸಂಭವ ಇದೆ. ಲೋಕಸಭಾಧ್ಯಕ್ಷ ಸ್ಥಾನವನ್ನು ತಮ್ಮ ಪಕ್ಷಕ್ಕೆ ನೀಡುವಂತೆ ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ಒತ್ತಡ ಹೇರಿದ್ದಾರೆ. ಇದಕ್ಕೆ ಬಿಜೆಪಿ ವರಿಷ್ಠರು ಒಪ್ಪಿಲ್ಲ. ಕೃಷಿ ಖಾತೆ ಮೇಲೆ ಜೆಡಿಎಸ್‌ ಸಂಸದ ಎಚ್‌.ಡಿ.ಕುಮಾರಸ್ವಾಮಿ ಕಣ್ಣಿಟ್ಟಿದ್ದಾರೆ. ಈ ಖಾತೆ ಪಡೆಯಲು ಜೆಡಿಯು ಸಹ ಪ್ರಯತ್ನ ನಡೆಸಿದೆ.
ಮಂಜುನಾಥ್‌ಗೆ ಖಾತೆ ಕುಮಾರಸ್ವಾಮಿ ಹಟ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಸಿ.ಎನ್‌.ಮಂಜುನಾಥ್ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಜೆಡಿಎಸ್‌ ಸಂಸದ ಎಚ್‌.ಡಿ.ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ. ಎಚ್‌.ಡಿ.ದೇವೇಗೌಡರ ಕುಟುಂಬದ ಇಬ್ಬರಿಗೆ ಸಚಿವ ಸ್ಥಾನ ನೀಡಲು ಬಿಜೆಪಿ ವರಿಷ್ಠರು ಒಪ್ಪಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೈವೋಲ್ಟೇಜ್‌ ಕ್ಷೇತ್ರವಾಗಿ ಪರಿವರ್ತನೆ ಹೊಂದಿತ್ತು. ಮಂಜುನಾಥ್ ಅವರು ಡಿ.ಕೆ. ಸುರೇಶ್ ಅವರನ್ನು 2.60 ಲಕ್ಷಗಳ ಭಾರಿ ಅಂತರದಿಂದ ಸೋಲಿಸಿದ್ದರು. ಮಂಜುನಾಥ್‌ ಗೆದ್ದರೆ ಕೇಂದ್ರ ಸಚಿವರಾಗುತ್ತಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಪ್ರಚಾರ ನಡೆಸಿದ್ದರು.

ಸಂಭವನೀಯ ಸಚಿವರು

  • ಅಮಿತ್ ಶಾ

  • ರಾಜನಾಥ್ ಸಿಂಗ್‌ 

  • ನಿತಿನ್ ಗಡ್ಕರಿ

  • ನಿರ್ಮಲಾ ಸೀತಾರಾಮನ್‌ 

  • ಪಿಯೂಷ್‌ ಗೋಯಲ್‌ 

  • ಶಿವರಾಜ್‌ ಸಿಂಗ್‌ ಚೌಹಾಣ್‌ ಅಥವಾ
    ಜೆ.ಪಿ.ನಡ್ಡಾ

  • ಜ್ಯೋತಿರಾದಿತ್ಯ ಸಿಂಧಿಯಾ

  • ಧರ್ಮೇಂದ್ರ ಪ್ರಧಾನ್‌ 

  • ಗಜೇಂದ್ರ ಸಿಂಗ್‌ ಶೆಖಾವತ್‌ 

  • ಜಿತಿನ್‌ ಪ್ರಸಾದ್‌ 

  • ಡಿ.ಪುರಂದೇಶ್ವರಿ

  • ಕಿರಣ್ ರಿಜಿಜು

  • ಸುರೇಶ್‌ ಗೋಪಿ

  • ಸಂಜಯ್‌ ಜೈಸ್ವಾಲ್‌

  • ಜಿ.ಕಿಶನ್‌ ರೆಡ್ಡಿ ಅಥವಾ ಬಂಡಿ ಸಂಜಯ್‌ 

  • ಶಂತನು ಠಾಕೂರ್‌

(ಮೇಲಿನ ಎಲ್ಲರೂ ಬಿಜೆಪಿ)

  • ಅನುಪ್ರಿಯಾ ಪಟೇಲ್‌ (ಅಪ್ನಾದಳ)

  • ಜಯಂತ್‌ ಚೌಧರಿ (ಆರ್‌ಎಲ್‌ಡಿ)

  • ಚಿರಾಗ್ ‍ಪಾಸ್ವಾನ್‌ (ಎಲ್‌ಜೆಪಿ)

  • ಲಲನ್ ಸಿಂಗ್‌ (ಜೆಡಿಯು)

  • ಸಂಜಯ್‌ ಕುಮಾರ್ ಝಾ (ಜೆಡಿಯು)

  • ರಾಮನಾಥ್‌ ಠಾಕೂರ್‌ (ಜೆಡಿಯು)

  • ಜಿತನ್‌ ರಾಮ್‌ ಮಾಂಝಿ (ಎಚ್‌ಎಎಂ)

  • ಕೆ.ರಾಮ್‌ ಮೋಹನ್‌ ನಾಯ್ಡು (ಟಿಡಿಪಿ)

ರಾಜ್ಯದ ಸಂಭಾವ್ಯರು

  • ಎಚ್‌.ಡಿ.ಕುಮಾರಸ್ವಾಮಿ – ಒಕ್ಕಲಿಗ (ಜೆಡಿಎಸ್‌)

  • ಬಸವರಾಜ ಬೊಮ್ಮಾಯಿ ಅಥವಾ ವಿ.ಸೋಮಣ್ಣ– ಲಿಂಗಾಯತ 

  • ಪ್ರಲ್ಹಾದ ಜೋಶಿ– ಬ್ರಾಹ್ಮಣ

  • ಗೋವಿಂದ ಕಾರಜೋಳ– ಪರಿಶಿಷ್ಟ ಜಾತಿ (ಎಡಗೈ)

(ಮೇಲಿನ ಎಲ್ಲರೂ ಬಿಜೆಪಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.