ಹೊಸದೆಹಲಿ: 92ನೇ ಜನ್ಮದಿನ ಆಚರಿಸುತ್ತಿರುವ ಬಿಜೆಪಿ ಹಿರಿಯ ಮುಖಂಡ ಲಾಲ್‌ಕೃಷ್ಣ ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, "ಅಡ್ವಾಣಿ ಒಬ್ಬ ರಾಜನೀತಿಜ್ಞ. ದೇಶದ ಜನರನ್ನು ಸಬಲರನ್ನಾಗಿಸುವ ನಿಟ್ಟಿನಲ್ಲಿ ಅವರ ಅಪರಿಮಿತ ಕೊಡುಗೆಯನ್ನು ದೇಶವು ಸದಾ ಸ್ಮರಿಸುತ್ತದೆ" ಎಂದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಬಿಜೆಪಿ ಪಕ್ಷಕ್ಕೆ ಅಡ್ವಾಣಿ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
"ಮೇಧಾವಿ, ರಾಜನೀತಿಜ್ಞ ಮತ್ತು ಗೌರವಾನ್ವಿತ ನಾಯಕರಲ್ಲೊಬ್ಬರಾದ ಅಡ್ವಾಣಿಜೀ ನಮ್ಮ ಪ್ರಜೆಗಳನ್ನು ಸಬಲರನ್ನಾಗಿಸುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದು, ಅದನ್ನು ದೇಶವೆಂದಿಗೂ ಸ್ಮರಿಸುತ್ತದೆ. ಗೌರವಾನ್ವಿತ ಅಡ್ವಾಣಿಜೀ ಅವರಿಗೆ ಜನ್ಮದಿನದ ಶುಭಾಶಯಗಳು. ಆರೋಗ್ಯಕರ ಮತ್ತು ಸುದೀರ್ಘ ಜೀವನ ಅವರದಾಗಿರಲಿ" ಎಂದು ಮೋದಿ ಶುಭ ಕೋರಿದ್ದಾರೆ.
1927ರಲ್ಲಿ ಕರಾಚಿಯಲ್ಲಿ ಜನಿಸಿದ ಅಡ್ವಾಣಿ ಅವರು 1998ರಿಂದ 2004ರವರೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2002ರಿಂದ 2004ರವರೆಗೆ ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಉಪಪ್ರಧಾನಿಯಾಗಿಯೂ ಅಡ್ವಾಣಿ ಕಾರ್ಯ ನಿರ್ವಹಿಸಿದ್ದರು.
ಆರೆಸ್ಸೆಸ್ ಸ್ವಯಂಸೇವಕನಾಗಿ ರಾಜಕೀಯ ಜೀವನ ಆರಂಭಿಸಿದ ಅವರಿಗೆ 2015ರಲ್ಲಿ ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿ 'ಪದ್ಮವಿಭೂಷಣ' ನೀಡಿ ಪುರಸ್ಕರಿಸಲಾಗಿತ್ತು. ರಾಮ ಮಂದಿರಕ್ಕಾಗಿ ರಥ ಯಾತ್ರೆ ನಡೆಸಿ ಅಡ್ವಾಣಿ ಭಾರತದಾದ್ಯಂತ ಸಂಚರಿಸಿದ್ದರು. ಅಯೋಧ್ಯೆಯ ರಾಮ ಜನ್ಮಭೂಮಿಗೆ ಸಂಬಂಧಿಸಿದಂತೆ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು. ಈಗ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಇಡೀ ದೇಶವೇ ಸುಪ್ರೀಂ ಕೋರ್ಟ್ ನಿರೀಕ್ಷೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.