ನವದೆಹಲಿ: ವಿದ್ಯಾರ್ಥಿ ದಿನಗಳಿಂದ ರಾಜಕೀಯ ಜೀವನದುದ್ದಕ್ಕೂ ಜತೆಯಾಗಿ ನಡೆದ ಆಪ್ತ ಸ್ನೇಹಿತರಾಗಿದ್ದರುಅರುಣ್ ಜೇಟ್ಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶನಿವಾರ ಬಹರೇನ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಮೋದಿ ನಾನು ಜವಾಬ್ದಾರಿಗಳನ್ನು ಹೊತ್ತ ವ್ಯಕ್ತಿ. ಇಲ್ಲಿ ಬಹರೇನ್‌ನಲ್ಲಿ ಒಂದೆಡೆ ಖುಷಿ ಮತ್ತು ಉತ್ಸಾಹ ಕಾಣುತ್ತದೆ. ಇನ್ನೊಂದೆಡೆ ನನ್ನ ದೇಶದಲ್ಲಿ ಜನ್ಮಾಷ್ಟಮಿಯ ಸಂಭ್ರಮಾಚರಣೆ ನಡೆಯುತ್ತಿದೆ. ಅದೇ ವೇಳೆ ನನ್ನ ಮನಸ್ಸಿನಲ್ಲಿಅತಿಯಾದ ನೋವು, ಬೇಸರವಿದೆ. ಇದನ್ನೆಲ್ಲ ಅಡಗಿಸಿ ನಾನು ನಿಮ್ಮ ಮುಂದೆ ನಿಂತಿದ್ದೇನೆ.
ಇದನ್ನೂ ಓದಿ:ಅರುಣ್ ಜೇಟ್ಲಿ ಪಂಚ ಭೂತಗಳಲ್ಲಿ ಲೀನ
ವಿದ್ಯಾರ್ಥಿ ಜೀವನದಿಂದ ಹಿಡಿದುಸಾಮಾಜಿಕ ಜೀವನದವರೆಗೆ ಜತೆ ಜತೆಯಾಗಿ ಹೆಜ್ಜೆ ಹಾಕಿದವರು ನಾವು. ರಾಜಕೀಯ ಜೀವನದಲ್ಲಿ ಜತೆಯಾಗಿ ನಡೆದವರು.ಜೀವನದ ಪ್ರತಿ ಕ್ಷಣದಲ್ಲಿಯೂ ನಾವು ಪರಸ್ಪರ ಬೆರೆತುಕೊಂಡವರು. ನಮ್ಮ ಕನಸು ನನಸಾಗಿಸಲು ನಾವಿಬ್ಬರೂ ಜತೆಯಾಗಿ ಸವಾಲು ಸ್ವೀಕರಿಸಿದ್ದೇವೆ. ನನ್ನ ಗೆಳೆಯ, ಮಾಜಿ ವಿತ್ತ ಸಚಿವ ಮತ್ತು ರಕ್ಷಣಾ ಸಚಿವರಾಗಿದ್ದ ಅರುಣ್ ಜೇಟ್ಲಿ ಇವತ್ತು ನಮ್ಮನ್ನು ಅಗಲಿದ್ದಾರೆ.
ನಾನು ತುಂಬಾ ದೂರದಲ್ಲಿದ್ದೇನೆ ಮತ್ತು ನನ್ನ ಗೆಳೆಯ ಅಗಲಿದ್ದಾನೆ ಎಂಬುದನ್ನು ನನಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಆಗಸ್ಟ್ ತಿಂಗಳು ಅಗಾಧ ನೋವು ಮತ್ತು ದುಃಖ ತಂದೊಡ್ಡಿದೆ.
ಇದನ್ನೂ ಓದಿ:ಹೀಗಿದ್ದರು ಅರುಣ್ ಜೇಟ್ಲಿ...
ಕೆಲವು ದಿನಗಳ ಹಿಂದೆಯಷ್ಟೇ ನಮ್ಮ ಮಾಜಿ ವಿದೇಶಾಂಗ ಸಚಿವೆ ಸಹೋದರಿ ಸುಷ್ಮಾ ಸ್ವರಾಜ್ ನಮ್ಮನ್ನಗಲಿದರು.ಇವತ್ತು ನನ್ನ ಗೆಳೆಯ ಅರುಣ್ ಜೇಟ್ಲಿ ಅಗಲಿದ್ದಾರೆ. ಇದು ಗೊಂದಲದ ಕ್ಷಣ. ಒಂದೆಡೆ ನಾನು ಜವಾಬ್ದಾರಿಯ ನಡುವೆ ನಿಂತಿದ್ದರೆ ಇನ್ನೊಂದೆಡೆ ಗೆಳೆತನವನ್ನುನೆನೆದು ಭಾವುಕನಾಗಿದ್ದೇನೆ.
ಇದನ್ನೂ ಓದಿ:ಮೋದಿ ಹಿಂದಿನ ಶಕ್ತಿಯಾಗಿದ್ದ ಜೇಟ್ಲಿ
ನನ್ನ ಸಹೋದರ ಅರುಣ್‌ಗೆ ನಾನು ಬಹರೇನ್‌ನ ಮಣ್ಣಿನಲ್ಲಿ ನಿಂತು ಶ್ರದ್ದಾಂಜಲಿ ಅರ್ಪಿಸುತ್ತಿದ್ದೇನೆ. ಅವರ ಕುಟುಂಬಕ್ಕೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
ನಾನು ಅಮೂಲ್ಯವಾದ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಬಿಜೆಪಿ ಮತ್ತು ಜೇಟ್ಲಿ ನಡುವೆ ಬೇರ್ಪಡಿಸಲಾಗದ ನಂಟು ಇತ್ತು ಎಂದು ಮೋದಿ ಯುಎಇಯಿಂದಲೇ ಟ್ವೀಟಿಸಿದ್ದರು.
ಇದನ್ನೂ ಓದಿ:ಮರೆಯಾಯಿತು ಭಿನ್ನ ದೃಷ್ಟಿಕೋನದ ಧ್ವನಿ
ಬಿಜೆಪಿ ಮತ್ತು ಅರುಣ್ ಜೇಟ್ಲಿ ನಡುವೆ ಗಟ್ಟಿಯಾದ ಸಂಬಂಧವಿತ್ತು. ದಿಟ್ಟ ವಿದ್ಯಾರ್ಥಿ ನಾಯಕರಾಗಿದ್ದ ಅವರು ತುರ್ತು ಪರಿಸ್ಥಿತಿಯಲ್ಲಿ ನಮ್ಮ ಪ್ರಜಾಪ್ರಭುತ್ವವನ್ನು ಕಾಪಾಡಲು ಮುಂಚೂಣಿಯಲ್ಲಿ ನಿಂತವರು. ನಮ್ಮ ಪಕ್ಷದ ಇಷ್ಟ ನಾಯಕರಾಗಿದ್ದ ಅವರು ಪಕ್ಷದ ಕಾರ್ಯಕ್ರಮಗಳಲ್ಲಿ ವಿಚಾರಧಾರೆಗಳನ್ನು ಸ್ಪಷ್ಟವಾಗಿ ಹೇಳುವವರಾಗಿದ್ದರು.
ದಶಕಗಳ ಗೆಳೆತನ ಹೊಂದಿದ್ದ ಅತ್ಯಮೂಲ್ಯ ಗೆಳೆಯನನ್ನು ನಾನು ಕಳೆದುಕೊಂಡಿದ್ದೇನೆ. ವಿಷಯಗಳ ಬಗ್ಗೆ ಅವರಿಗಿರುವ ಅಗಾಧ ಜ್ಞಾನ ಮತ್ತು ಅರ್ಥೈಸುವ ಶಕ್ತಿಗೆ ಬೇರೆ ಪರ್ಯಾಯಗಳಿಲ್ಲ. ಅವರು ಚೆನ್ನಾಗಿ ಬಾಳಿದ್ದರು. ಹಲವಾರು ಖುಷಿಯ ನೆನಪುಗಳನ್ನು ನೀಡಿ ಅವರು ನಮ್ಮನ್ನಗಲಿದ್ದಾರೆ. ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಮೋದಿ ಟ್ವೀಟಿಸಿದ್ದಾರೆ.
ಇದನ್ನೂ ಓದಿ:ಜೇಟ್ಲಿ ಪಯಣ: ವಿದ್ಯಾರ್ಥಿ ಸಂಘದಿಂದ ಹಣಕಾಸು ಸಚಿವಾಲಯದವರೆಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.