ADVERTISEMENT

Republic Day | ಕರ್ತವ್ಯಪಥದಲ್ಲಿ ನಾರಿಶಕ್ತಿ ಪ್ರದರ್ಶನ

ಪಿಟಿಐ
​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 19:05 IST
Last Updated 26 ಜನವರಿ 2024, 19:05 IST
<div class="paragraphs"><p>ನವದೆಹಲಿಯ ಕರ್ತವ್ಯಪಥದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಮಹಿಳಾ ಸಿಬ್ಬಂದಿ ಶುಕ್ರವಾರ ಪಥಸಂಚಲನ ನಡೆಸಿದರು </p></div>

ನವದೆಹಲಿಯ ಕರ್ತವ್ಯಪಥದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಮಹಿಳಾ ಸಿಬ್ಬಂದಿ ಶುಕ್ರವಾರ ಪಥಸಂಚಲನ ನಡೆಸಿದರು

   

–ಪಿಟಿಐ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ದೇಶದ ಮಹಿಳೆಯರ ಸೇನಾ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ಸಮೃದ್ಧಿಯ ಪ್ರದರ್ಶನಕ್ಕೆ ವೇದಿಕೆಯಾಯಿತು. ವೈವಿಧ್ಯಮಯವಾದ ಕಾರ್ಯಕ್ರಮವನ್ನು 75 ಸಾವಿರಕ್ಕೂ ಹೆಚ್ಚು ಜನರು ಕಣ್ತುಂಬಿಕೊಂಡರು. 

ADVERTISEMENT

ರಾಷ್ಟ್ರಪತಿಯವರ ಸಾಂಪ್ರದಾಯಿಕ ಬಳಕೆಯ ಸಾರೋಟನ್ನು ನಾಲ್ಕು ದಶಕಗಳ ಬಳಿಕ  ಈ ಬಾರಿ ಬಳಸಿದ್ದು ವಿಶೇಷವಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ಇಮ್ಯಾನುವೆಲ್‌ ಮ್ಯಾಕ್ರನ್‌ ಅವರು ಈ ಸಾರೋಟಿನಲ್ಲಿ ಬಂದರು. ಅತಿಥಿಗಳು ಕುಳಿತುಕೊಳ್ಳುವ ವೇದಿಕೆಯನ್ನು 1,900 ಕೈಮಗ್ಗದ ಸೀರೆಗಳನ್ನು ಬಳಸಿಕೊಂಡು ವರ್ಣಮಯವಾಗಿ ಅಲಂಕರಿಸಲಾಗಿತ್ತು. 

ಗಣರಾಜ್ಯೋತ್ಸವ ಪಥಸಂಚಲನದ ಇತಿಹಾಸದಲ್ಲಿಯೇ ಈ ಬಾರಿ ಮಹಿಳೆಯರ ಭಾಗವಹಿಸುವಿಕೆ ಗರಿಷ್ಠವಾಗಿತ್ತು. 

ದೇಶದ ವಿವಿಧ ಭಾಗಗಳಲ್ಲಿ ಕಾಣಸಿಗುವ ಸಂಗೀತ ವಾದ್ಯಗಳ ಗೋಷ್ಠಿ ‘ಆವಾಹನ’ದೊಂದಿಗೆ ‘ನಾರಿ ಶಕ್ತಿ’ ಪ್ರದರ್ಶನಕ್ಕೆ ಚಾಲನೆ ದೊರೆಯಿತು.

112 ಕಲಾವಿದೆಯರಿದ್ದ ತಂಡವು ಬುಡಕಟ್ಟು ವಾದ್ಯಗಳನ್ನು ಕೌಶಲಪೂರ್ಣವಾಗಿ ನುಡಿಸಿ ತಮ್ಮ ಶಕ್ತಿ ಮತ್ತು ಪರಿಣತಿಯನ್ನು ಪ್ರದರ್ಶಿಸಿತು.  ಮಣಿಪುರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಒಡಿಶಾ, ಜಾರ್ಖಂಡ್ ಮತ್ತು ಛತ್ತೀಸಗಡದ ಸ್ತಬ್ಧಚಿತ್ರಗಳು ಆಯಾ ಪ್ರದೇಶಗಳ ಮಹಿಳೆಯರ ಸಾಮರ್ಥ್ಯವನ್ನು ತೋರಿದವು.

ಕರಕುಶಲ ಕಲೆ, ಶಿಕ್ಷಣ, ನೃತ್ಯ, ಕ್ರೀಡೆಗಳಲ್ಲಿ ಮಹಿಳೆಯರ ಸಾಧನೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳಿಗೆ ಪ್ರೇಕ್ಷಕರು ಭಾರಿ ಚಪ್ಪಾಳೆಯೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಶಸ್ತ್ರ ಪಡೆಗಳ ವೈದ್ಯಕೀಯ ಸೇವಾ ವಿಭಾಗದ ಎಲ್ಲ ಮಹಿಳೆಯರೇ ಇದ್ದ ತುಕಡಿಯು ಪಥಸಂಚಲನದಲ್ಲಿ ಭಾಗಿಯಾಗಿದ್ದು ಇದೇ ಮೊದಲು. ಗಡಿ ಕಾಯುವುದಷ್ಟೇ ಅಲ್ಲದೆ, ಆರೈಕೆ, ಗಾಯಾಳುಗಳ ತೆರವು, ಸಾರ್ವಜನಿಕ ಆರೋಗ್ಯ ರಕ್ಷಣೆಯಂತಹ ಕಾರ್ಯಗಳಲ್ಲಿಯೂ ತಾವು ಮುಂಚೂಣಿಯಲ್ಲಿದ್ದೇವೆ ಎಂಬ ಸಂದೇಶವನ್ನು ಈ ಪಥಸಂಚಲನವು ಸಾರಿತು. 

1,500 ನೃತ್ಯಗಾರ್ತಿಯರ ಗುಂಪು 30 ಭಿನ್ನ ಜನಪದ ಶೈಲಿಯಲ್ಲಿ ನೃತ್ಯ ಮಾಡಿ ವೈವಿಧ್ಯದಲ್ಲಿ ಏಕತೆಯನ್ನು ಪ್ರದರ್ಶಿಸಿತು. ಕೂಚಿಪುಡಿ, ಕಥಕ್‌, ಭರತನಾಟ್ಯ, ಮೋಹಿನಿಯಾಟ್ಟಂ, ಮಣಿಪುರಿ ಶೈಲಿಯಲ್ಲಿಯೂ ತಂಡಗಳು ನೃತ್ಯ ಮಾಡಿದವು.

ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯ ಮಹಿಳೆಯರು ಮಾತ್ರ ಇದ್ದ ತುಕಡಿಯು ಕರ್ತವ್ಯಪಥದಲ್ಲಿ ಪಥಸಂಚಲನ ನಡೆಸಿದ್ದು ಇದೇ ಮೊದಲು. ವೈಮಾನಿಕ ಸಾಹಸ ಪ್ರದರ್ಶನದಲ್ಲಿ ಭಾಗಿಯಾದ ಹೆಚ್ಚಿನ ವಿಮಾನಗಳ ಪೈಲಟ್‌ಗಳು ಕೂಡ ಮಹಿಳೆಯರೇ ಆಗಿದ್ದರು. 

ಪಥಸಂಚಲನದ ವೈಶಿಷ್ಟ್ಯಗಳು

  • ಬೈಕ್‌ಗಳಲ್ಲಿ ಸಾಹಸ ಮೆರೆದ 256 ಮಹಿಳೆಯರಿಂದ ಮೈನವಿರೇಳುವಂತಹ ಕಸರತ್ತು ಪ್ರದರ್ಶನ

  • ಯೋಗ ಸೇರಿದಂತೆ ಭಾರತೀಯ ಮೌಲ್ಯಗಳು ಹಾಗೂ ಸಂಸ್ಕೃತಿಯ ಪ್ರದರ್ಶನ

  • ನೌಕಾಪಡೆಯ ಎಲ್ಲ ಶ್ರೇಣಿಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದ್ದು, ಈ ಕುರಿತ ಸ್ತಬ್ಧಚಿತ್ರ ಗಮನ ಸೆಳೆಯಿತು

  • ಎಸ್‌ಐ ಶ್ವೇತಾ ಸಿಂಗ್‌ ನೇತೃತ್ವದಲ್ಲಿ, ಮೊದಲ ಬಾರಿಗೆ ಬಿಎಸ್‌ಎಫ್‌ ಮಹಿಳಾ ಬ್ರಾಸ್‌ ಬ್ಯಾಂಡ್‌ ಪಥಸಂಚಲನದಲ್ಲಿ ಭಾಗಿ

  • 144 ‘ಮಹಿಳಾ ಪ್ರಹಾರಿ’ಗಳಿದ್ದ ಬಿಎಸ್‌ಎಫ್‌ನ ಮಹಿಳಾ ತುಕಡಿಯಿಂದ ಕಸರತ್ತು ಪ್ರದರ್ಶನ

  • ಕಾನ್‌ಸ್ಟೆಬಲ್‌ ಸೋಸಾ ಅಲ್ಪಾಬೆನ್‌ ನೇತೃತ್ವದ ಸಿಆರ್‌ಪಿಎಫ್‌ನ ಬ್ಯಾಂಡ್‌ನಿಂದ ‘ದೇಶ್ ಕೆ ಹಮ್ ಹೈ ರಕ್ಷಕ್‌’ ಗೀತೆ ಪ್ರಸ್ತುತಿ

  • ಎಸ್‌ಐ ರುಯಾಂಗುನುವೊ ಕೆನ್ಸೆ ನೇತೃತ್ವದ, ದೆಹಲಿ ಪೊಲೀಸ್‌ ಇಲಾಖೆಯ ಮೊದಲ ಮಹಿಳಾ ಬ್ಯಾಂಡ್‌ ಭಾಗಿ

  • 144 ಬಾಲಕಿಯರನ್ನು ಒಳಗೊಂಡ ಎನ್‌ಸಿಸಿಯ ಬ್ಯಾಂಡ್‌ ಭಾಗಿ

  • ಯುದ್ಧವಿಮಾನಗಳ ಹಾರಾಟ ನಡೆಸಿ ಸಾಹಸ ಪ್ರದರ್ಶಿಸಿದ 15 ಮಹಿಳಾ ಪೈಲಟ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.