ಭರೂಚ್: ನಿರಂತರ ಮಳೆ ಸುರಿಯುತ್ತಿರುವ ಕಾರಣ ಮಧ್ಯಪ್ರದೇಶದ ಜಲಾಶಯದಿಂದ ನೀರು ಹೊರಬಿಟ್ಟ ಪರಿಣಾಮ ಗುಜರಾತ್‌ನಲ್ಲಿ ನರ್ಮದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭರೂಚ್‌ನಲ್ಲಿರುವ ಗೋಲ್ದನ್ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಸುತ್ತಲಿನ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ.
ಭರೂಚ್‌ನಲ್ಲಿ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದ 280 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಗೋಲ್ಡನ್ ಬ್ರಿಡ್ಜ್‌ನಲ್ಲಿ ನರ್ಮದಾ ನದಿಯ ಹರಿವಿನ ಸಾಮರ್ಥ್ಯ 24 ಅಡಿಯಾಗಿದೆ. ಆದರೆ ಸದ್ಯ ನದಿ ನೀರಿನ ಮಟ್ಟ 27 ಅಡಿ ಇದೆ.
ಮಧ್ಯಪ್ರದೇಶದ ಓಂಕಾರೇಶ್ವರ ಜಲಾಶಯದಿಂದ ನೀರು ಬಿಟ್ಟಿರುವುದು ಮತ್ತು ನರ್ಮದಾ ಜಿಲ್ಲೆಯ ಪಕ್ಕದ ಸರ್ದಾರ್ ಸರೋವರ ಜಲಾಶಯದಿಂದ 30 ಗೇಟ್‌ಗಳ ಪೈಕಿ 23 ಗೇಟ್‌ಗಳನ್ನು ತೆರೆದು ನೀರು ಹೊರಬಿಟ್ಟ ಪರಿಣಾಮ ನದಿಯಲ್ಲಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದೆ. ಆದರೆ ಈಗ 8 ಗೇಟ್‌ಗಳನ್ನು ಮುಚ್ಚಲಾಗಿದ್ದು ಸುಮಾರು 3 ಲಕ್ಷ ಕ್ಯುಸೆಕ್‌ನಷ್ಟು ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಸದ್ಯ 15 ಗೇಟ್‌ಗಳಿಂದ ಮಾತ್ರ ನೀರು ಬಿಡಲಾಗುತ್ತಿದೆ. ಆದರೂ ನರ್ಮದಾ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.