ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿಹಗುರವಾಗಿಇಳಿದು, ಅಧ್ಯಯನ ನಡೆಸಬೇಕಿದ್ದ ‘ಚಂದ್ರಯಾನ–2’ ಗಗನನೌಕೆಯ ‘ವಿಕ್ರಮ್ ಲ್ಯಾಂಡರ್’ ಸೆ.7ರಂದು ಚಂದ್ರನ ಮೇಲ್ಮೈ ಮೇಲೆ ಅಪ್ಪಳಿಸಿದ ಸ್ಥಳದ ಚಿತ್ರಗಳನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ‘ನಾಸಾ’ ಇಂದು (ಸೆ.27) ಬಿಡುಗಡೆ ಮಾಡಿದೆ.
ಚಂದ್ರನನ್ನು ಪ್ರದಕ್ಷಿಣೆ ಹಾಕುತ್ತಿರುವ ನಾಸಾದ ಲೂನಾರ್ ರಿಕನೈಸನ್ಸ್ ಆರ್ಬಿಟರ್ ಕ್ಯಾಮೆರಾ (ಎಲ್‌ಆರ್‌ಒಸಿ) ಈ ಉನ್ನತ ಗುಣಮಟ್ಟದ ಹೈ ರೆಸಲ್ಯೂಶನ್ ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಸರಾಗವಾಗಿ ಇಳಿದು,ವಿಶ್ವದ ಮೊದಲ ಬಾಹ್ಯಾಕಾಶ ಯೋಜನೆ ಎನ್ನುವವಿಶ್ವ ದಾಖಲೆ ಸ್ಥಾಪಿಸಬೇಕಿದ್ದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈನಿಂದ ಕೇವಲ 2.1 ಕಿ.ಮೀ. ದೂರವಿದ್ದಾಗ ನಿಯಂತ್ರಣ ಕಳೆದುಕೊಂಡಿತ್ತು.
‘ಚಂದ್ರನ ಮೇಲ್ಮೈಗೆ ವಿಕ್ರಮ್ ಲ್ಯಾಂಡರ್ ರಭಸವಾಗಿ ಅಪ್ಪಳಿಸಿದೆ. ಆದರೆ ಆ ಸ್ಥಳವನ್ನು ನಿಖರವಾಗಿ ಇನ್ನಷ್ಟೇ ಪತ್ತೆಹಚ್ಚಬೇಕಿದೆ’ ಎಂದು ನಾಸಾ ತನ್ನ ಜಾಲತಾಣದಲ್ಲಿ ಹೇಳಿದೆ.
ಚಂದ್ರನ ದಕ್ಷಿಣ ಧ್ರುವದಿಂದ 600 ಕಿ.ಮೀ. ದೂರದಲ್ಲಿ ವಿಕ್ರಮ್ ಲ್ಯಾಂಡರ್ ಅಪ್ಪಳಿಸಿರಬಹುದು. ಚಂದ್ರನನ್ನು ಪ್ರದಕ್ಷಿಣೆ ಹಾಕುತ್ತಿರುವ ಅಮೆರಿಕದ ಕಕ್ಷಾ ಕ್ಯಾಮೆರಾ ಸೆ.17ರಂದು ಈ ಸ್ಥಳವನ್ನು ಹಾದು ಹೋಗಿತ್ತು. ಆದರೆ ತಜ್ಞರಿಗೆ ಲ್ಯಾಂಡರ್‌ನ ಅವಶೇಷಗಳನ್ನು ಗುರುತಿಸಲು ಈವರೆಗೆ ಆಗಿಲ್ಲ ಎಂದು ನಾಸಾ ಹೇಳಿದೆ.
ಸೆ.17ರಂದು ಕಕ್ಷಾ ಕ್ಯಾಮೆರಾ ಈ ಸ್ಥಳದ ಮೇಲೆ ಹಾದುಹೋದಾಗ ಚಂದ್ರನಲ್ಲಿ ಮುಸ್ಸಂಜೆ. ಹೀಗಾಗಿ ಮೇಲ್ಮೈನ ಅಲ್ಲಲ್ಲಿ ಕಪ್ಪು ನೆರಳು ಆವರಿಸಿತ್ತು. ಅಕ್ಟೋಬರ್‌ನಲ್ಲಿ ಕಕ್ಷಾ ಕ್ಯಾಮೆರಾ ಮತ್ತೊಮ್ಮೆ ಈ ಸ್ಥಳದ ಮೇಲೆ ಹಾದುಹೋಗಲಿದೆ. ಆಗ ಬೆಳಕು ನಮ್ಮ ನೆರವಿಗೆ ಬರಬಹುದು ಎಂದು ನಾಸಾದತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ನಾಸಾ ಆರ್ಬಿಟರ್ಗೂ ಸಿಗದ ವಿಕ್ರಮ್?
ಅಂದು ಏನಾಯ್ತು?
ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಹಗುರವಾಗಿ ಇಳಿಯುವ ಪ್ರಯತ್ನ ಮಾಡಿತ್ತು. ಸೆ.7ರ ನಸುಕಿನ 1.38ಕ್ಕೆ ಲ್ಯಾಂಡರ್ ಗಗನನೌಕೆಯಿಂದ ಕಳಚಿಕೊಂಡಿತ್ತು. ಇದಾದ 10 ನಿಮಿಷಗಳಲ್ಲಿ ಮೇಲ್ಮೈನತ್ತ ಸಾಗುವ ವೇಗವನ್ನು ಸೆಕೆಂಡ್‌ಗೆ 1,640 ಮೀಟರ್ ವೇಗದಿಂದ 140 ಮೀಟರ್‌ಗೆಕಡಿಮೆ ಮಾಡಿಕೊಂಡಿತ್ತು. ಚಂದ್ರನ ಮೇಲ್ಮೈ ಸನಿಹಕ್ಕೆ ಬಂದ ಲ್ಯಾಂಡರ್ ಕೊನೆಯ ನಿಮಿಷಗಳಲ್ಲಿ ಭೂನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಡಿದುಕೊಂಡಿತು.
ತನ್ನದೇ ಶಕ್ತಿಯ ಮೇಲೆ ಲ್ಯಾಂಡರ್ ಮುನ್ನಡೆಯುವ ವ್ಯವಸ್ಥೆ ಕಾರ್ಯಾರಂಭ ಮಾಡುವ ಕೊನೆಯ 15 ನಿಮಿಷಗಳಲ್ಲಿ ಎಲ್ಲವೂ ವಿಜ್ಞಾನಿಗಳ ಲೆಕ್ಕಾಚಾರದಂತೆ ನಡೆಯಲಿಲ್ಲ. ಇದನ್ನೇ ಇಸ್ರೋ ಮುಖ್ಯಸ್ಥ ಕೆ.ಶಿವನ್ ‘15 ನಿಮಿಷಗಳ ಭಯ’ ಎಂದು ಬಣ್ಣಿಸಿದ್ದು.
ಇದನ್ನೂ ಓದಿ:ಚಂದ್ರನೂರಿಗೆ ಮತ್ತೊಂದು ಯಾತ್ರೆ
ಜುಲೈ 15ರಂದು ಚಂದ್ರಯಾನ–2ರ ಉಡಾವಣೆಗೆ ಮೊದಲ ಮುಹೂರ್ತ ನಿಗದಿಯಾಗಿತ್ತು. ಆದರೆ ಕೊನೆಯ ಹಂತದಲ್ಲಿ ತಾಂತ್ರಿಕ ಲೋಪ ಪತ್ತೆಯಾದ ಹಿನ್ನೆಲೆಯಲ್ಲಿ ಉಡಾವಣೆಯನ್ನು ಮುಂದೂಡಲಾಗಿತ್ತು.ಲೋಪ ಸರಿಪಡಿಸಿದ ನಂತರ ಜುಲೈ 22ರಂದು ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‌ಎಲ್‌ವಿ ಮಾರ್ಕ್ 3 ರಾಕೆಟ್ ಮೇಲೆ ಚಂದ್ರಯಾನ–2 ಗಗನನೌಕೆ ಚಂದ್ರನತ್ತ ಚಿಮ್ಮಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.