ADVERTISEMENT

ದೇಶದ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಹಕ್ಕು ನನಗಿದೆ: ನಾಸಿರುದ್ದೀನ್ ಶಾ

ಪಿಟಿಐ
Published 21 ಡಿಸೆಂಬರ್ 2018, 17:08 IST
Last Updated 21 ಡಿಸೆಂಬರ್ 2018, 17:08 IST
ನಾಸಿರುದ್ದೀನ್ ಶಾ
ನಾಸಿರುದ್ದೀನ್ ಶಾ   

ಅಜ್ಮೀರ್‌: ಗುಂಪು ದಾಳಿಗೆ ಸಂಬಂಧಿಸಿದ ಹೇಳಿಕೆಗಾಗಿ ತಮ್ಮನ್ನು ಕೆಲವರು ದೇಶದ್ರೋಹಿ ಎಂದು ನಿಂದಿಸುತ್ತಿರುವುದಕ್ಕೆ ನಟ ನಾಸಿರುದ್ದೀನ್ ಶಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ದೇಶದ ಬಗ್ಗೆ ಚಿಂತನೆ ಮಾಡುವವನಾಗಿ, ನಾನು ಪ್ರೀತಿಸುವ ದೇಶದ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಹಕ್ಕು ನನಗಿದೆ’ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಇನ್‌ಸ್ಪೆಕ್ಟರ್‌ ಮೇಲೆ ನಡೆದ ಗುಂಪು ದಾಳಿ ಬಗ್ಗೆ ಮಾತನಾಡಿದ್ದ ಶಾ, ‘ಪೊಲೀಸ್ ಅಧಿಕಾರಿಯ ಸಾವಿಗಿಂತಲೂ ಹಸುವಿನ ಸಾವಿಗೆ ಹೆಚ್ಚಿನ ಮಹತ್ವವಿದೆ’ ಎಂದು ಹೇಳಿದ್ದರು.

ದೇಶದಲ್ಲಿ ಹೆಚ್ಚುತ್ತಿರುವ ಗುಂಪು ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅವರು, ‘ನನ್ನ ಮಕ್ಕಳನ್ನು ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿಗಳನ್ನಾಗಿ ಬೆಳೆಸಿಲ್ಲ. ಅವರ ಬಗ್ಗೆ ನನಗೆ ಆತಂಕವಿದೆ’ ಎಂದು ‘ಕರ್ವಾನ್-ಎ-ಮೊಹಬ್ಬತ್ ಇಂಡಿಯಾ’ ಸಂಘಟನೆಯ ಯೂಟ್ಯೂಬ್ ಚಾನಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ADVERTISEMENT

‘ವಿಷ ಈಗಾಗಲೇ ಹರಡಿಕೊಂಡಿದೆ. ಈ ಸಮಯದಲ್ಲಿ ಅದನ್ನು ನಿಗ್ರಹಿಸುವುದು ಕಷ್ಟ. ಕಾನೂನು ಕೈಗೆತ್ತಿಕೊಳ್ಳುವವರಿಗೆ ಶಿಕ್ಷಾ ಭಯ ಇಲ್ಲದಂತಾಗಿದೆ’ ಎಂದು ವಿಷಾದಿಸಿದ್ದರು.

ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಶಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಶಾ, ‘ನಾನು ಪ್ರೀತಿಸುವ ದೇಶ ನನಗೆ ಮನೆ ಇದ್ದಂತೆ. ಅದರ ಬಗ್ಗೆ ನಾನು ಕಾಳಜಿ ವ್ಯಕ್ತಪಡಿಸುವುದು ಅಪರಾಧವೇ? ನನ್ನನ್ನು ಟೀಕಿಸುವವರಂತೆ ನನಗೂ ಟೀಕಿಸುವ ಹಕ್ಕಿದೆ. ಆದರೆ, ಅದಕ್ಕಾಗಿ ದೇಶದ್ರೋಹಿ ಎಂದು ಕರೆಸಿಕೊಳ್ಳಬೇಕೇ? ಇದು ಅತ್ಯಂತ ವಿಚಿತ್ರ’ ಎಂದು ಹೇಳಿದರು.

ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹಸುವಿನ ಅವಶೇಷಗಳು ಪತ್ತೆಯಾದ ಬಳಿಕ, ಬಜರಂಗದಳದ ಸ್ಥಳೀಯ ನಾಯಕ ಯೋಗೇಶ್‌ ರಾಜ್‌ ನೇತೃತ್ವದಲ್ಲಿ ಡಿಸೆಂಬರ್‌ 3ರಂದು ಇನ್‌ಸ್ಪೆಕ್ಟರ್‌ ಸುಬೋಧ್‌ ಕುಮಾರ್‌ ಸಿಂಗ್‌ ಹಾಗೂ ವಿದ್ಯಾರ್ಥಿ ಸುಮಿತ್‌ ಕುಮಾರ್‌ ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.