ನವದೆಹಲಿ:ರಾಷ್ಟ್ರೀಯ ಉದ್ದೀಪನ ತಡೆ ಘಟಕ ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯ ಕಾರ್ಯವೈಖರಿಯ ರೂಪುರೇಷೆ ಸಿದ್ಧತೆಗೆ ಒತ್ತು ನೀಡುವ ಮಸೂದೆಯನ್ನು ಬುಧವಾರ ಸಂಸತ್‌ನಲ್ಲಿ ಅಂಗೀಕರಿಸಲಾಯಿತು.
ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಈ ಮಸೂದೆಗೆ ಅನುಮೋದನೆ ನೀಡಲಾಯಿತು. ಹೋದ ವಾರ ಲೋಕಸಭೆಯಲ್ಲಿಯೂ ಅಂಗೀಕರಿಸಲಾಗಿತ್ತು.
‘ಸದ್ಯ ನಮ್ಮ ದೇಶದ ಪ್ರಯೋಗಾಲಯದಲ್ಲಿ ವರ್ಷಕ್ಕೆ ಆರು ಸಾವಿರ ಮಾದರಿಗಳನ್ನು ಪರೀಕ್ಷಿಸುವ ಅವಕಾಶ ಮಾತ್ರ ಇದೆ. ಈ ಮಸೂದೆಯಿಂದಾಗಿ ನಾಡಾ ಪ್ರಯೋಗಾಲಯವನ್ನು ಉನ್ನತೀಕರಿಸಲು ಅನುಕೂಲವಾಗಲಿದೆ. ದೇಶದಲ್ಲಿ ದೊಡ್ಡ ಮಟ್ಟದ ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಿದಾಗ ಮಾಸಿಕ 10 ಸಾವಿರ ಮಾದರಿಗಳ ಪರೀಕ್ಷಾ ಸಾಮರ್ಥ್ಯ ಅಭಿವೃದ್ದಿಸಬಹುದಾಗಿದೆ’ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಸೂದೆಗೆ ಸಂಬಂಧಿಸಿದ ಚರ್ಚೆಯಲ್ಲಿ ಹೇಳಿದ್ದಾರೆ.
‘ಉದ್ದೀಪನ ಮದ್ದು ಪ್ರಕರಣ ತನಿಖೆ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದು ಮತ್ತು ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಈ ಮಸೂದೆಯಿಂದ ಸಾಧ್ಯವಾಗಲಿದೆ. ನಾಡಾ ಬಲವರ್ಧನೆಯಾಗಲಿದೆ’ ಎಂದೂ ಸಚಿವರು ಹೇಳಿದ್ದಾರೆ.
‘ಈ ಮಸೂದೆ ಅನುಮೋದನೆಯಿಂದಾಗಿ ಭಾರತವೂ ಈಗ ಅಮೆರಿಕ, ಚೀನಾ, ಜಪಾನ್ ಮತ್ತು ಫ್ರಾನ್ಸ್ ದೇಶಗಳ ಸಾಲಿಗೆ ಸೇರಿದೆ. ಕ್ರೀಡೆಯಲ್ಲಿ ಉದ್ದೀಪನ ಮದ್ದು ಬಳಕೆಯ ಪಿಡುಗನ್ನು ಮಟ್ಟ ಹಾಕಲು ಇದರಿಂದ ಸಾಧ್ಯವಾಗಲಿದೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.